- ಟ್ರಯಲ್ ಕೋರ್ಟ್
- Like this post: 3
ಸೂರಜ್ ರೇವಣ್ಣಗೆ ಜಾಮೀನು; ಕಾರ್ಯಕರ್ತರಿಗೆ ಲೈಂಗಿಕ ಕಿರುಕುಳ ಆರೋಪ
- by LegalSamachar
- August 10, 2024
- 162 Views
ಬೆಂಗಳೂರು: ಸ್ವಪಕ್ಷದ ಕಾರ್ಯಕರ್ತರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದೇ ಆರೋಪದ ಮತ್ತೊಂದು ಪ್ರಕರಣದಲ್ಲಿಯೂ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಇದರಿಂದ ಸೂರಜ್ ರೇವಣ್ಣ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಂತಾಗಿದೆ.
ಸೂರಜ್ ರೇವಣ್ಣ ಸಲ್ಲಿಸಿದ್ದ ನಿಯತ ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಪುರಸ್ಕರಿಸಿದ್ದು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಅರ್ಜಿದಾರ ಸೂರಜ್ 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ಒದಗಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ದೂರುದಾರ ಹಾಗೂ ಸಂತ್ರಸ್ತರಿಗೆ ಬೆದರಿಕೆ ಒಡ್ಡಬಾರದು. ತನಿಖೆಗೆ ಸಹಕರಿಸಬೇಕು, ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ. ಮುಂದಿನ 6 ತಿಂಗಳು ಅಥವಾ ಪ್ರಕರಣದ ಆರೋಪ ಪಟ್ಟಿ ಸಲ್ಲಿಸುವವರೆಗೆ ತಿಂಗಳ ಎರಡನೇ ಭಾನುವಾರ ಬೆಳಗ್ಗೆ 9ರಿಂದ ಸಂಜೆ 5ರ ಒಳಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಇಂಥದ್ದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ.
ಪ್ರಕರಣವೇನು?
ಸೂರಜ್ ರೇವಣ್ಣ ಅವರು ಜೂ.16ರಂದು ಹೊಳೆನರಸೀಪುರದ ಘನ್ನಿಗಡ ಫಾರ್ಮ್ ಹೌಸ್ಗೆ ಕರೆಸಿಕೊಂಡು ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಚಾರವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಸಂಬಂಧ ಹಣದ ಆಮಿಷವನ್ನೂ ಒಡ್ಡಿದ್ದರು ಎಂದು ಚೇತನ್ ಎಂಬಾತ ಸೂರಜ್ ಮತ್ತವರ ಬೆಂಬಲಿಗ ಎಂ.ಎಲ್. ಶಿವಕುಮಾರ್ ವಿರುದ್ಧ ಜೂ. 22ರಂದು ದೂರು ನೀಡಿದ್ದರು.
ದೂರು ಆಧರಿಸಿ ಹೊಳೆನರಸೀಪುರ ಗ್ರಾಮೀಣ ಠಾಣೆಯಲ್ಲಿ ಸೂರಜ್ ಮತ್ತು ಶಿವಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ಗಳಾದ 377, 342, 506 ಜತೆಗೆ 34ರ ಅಡಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸೂರಜ್, ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಮತ್ತೊಂದು ಪ್ರಕರಣದಲ್ಲಿ ಸೂರಜ್ ಆಪ್ತ ಎನ್ನಲಾದ ಎಂ.ಎಲ್. ಶಿವಕುಮಾರ್ ನೀಡಿದ ದೂರಿನ ಮೇರೆಗೆ ಸೂರಜ್ ರೇವಣ್ಣ, ಚನ್ನರಾಯಪಟ್ಟಣದ ರಕ್ಷಿತ್ ಮತ್ತು ಹಾಸನದ ಸಚಿನ್ ವಿರುದ್ಧ ಐಪಿಸಿ ಸೆಕ್ಷನ್ಗಳಾದ 342, 506, 377 ಜತೆಗೆ 34ರ ಅಡಿ ಜೂ. 25ರಂದು ಹೊಳೆನರಸೀಪುರದ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಸೂರಜ್ ತನ್ನ ಮೇಲೂ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಚೇತನ್ ವಿರುದ್ಧ ದೂರು ಕೊಡಿಸಲು ಸಚಿನ್, ರಕ್ಷಿತ್ ಮೂಲಕ ತನ್ನ ಮೇಲೆ ಒತ್ತಡ ಹೇರಿದ್ದರು. ಸೂರಜ್ ಪ್ರಭಾವಿ ಕುಟುಂಬದವರಾಗಿದ್ದು ಭಯದಿಂದ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎಂದು ಶಿವಕುಮಾರ್ ದೂರಿನಲ್ಲಿ ವಿವರಿಸಿದ್ದಾರೆ. ಈ ಪ್ರಕರಣದಲ್ಲಿ ಸೂರಜ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
Related Articles
Thank you for your comment. It is awaiting moderation.
Comments (0)