- ಟ್ರಯಲ್ ಕೋರ್ಟ್
- Like this post: 4
ನಟ ದರ್ಶನ್ಗಿಲ್ಲ ಮನೆಯೂಟ; ಅರ್ಜಿ ವಜಾಗೊಳಿಸಿದ ನ್ಯಾಯಾಲಯ
- by LegalSamachar
- August 10, 2024
- 266 Views
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ತಮಗೆ ಮನೆಯಿಂದ ಊಟ, ಹಾಸಿಗೆ ಮತ್ತು ಬಟ್ಟೆ ತರಿಸಿಕೊಳ್ಳಲು ಅನುಮತಿ ನೀಡಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 24ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದೆ.
ಈ ಸಂಬಂಧ ದರ್ಶನ್ ಸಲ್ಲಿಸಿದ್ದ ಅರ್ಜಿ ಕುರಿತ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಅವರಿದ್ದ ಪೀಠ ಪ್ರಕಟಿಸಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಕರ್ನಾಟಕ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿಯ ಅಧಿನಿಯಮ 728ರ ಪ್ರಕಾರ ಕೊಲೆ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಸ್ವಂತ ಖರ್ಚಿನಲ್ಲಿ ಬಟ್ಟೆ, ಹಾಸಿಗೆ, ಚಪ್ಪಲಿ, ಆಹಾರ, ಚಮಚ, ತಟ್ಟೆ, ಲೋಟ ಇನ್ನಿತರ ವಸ್ತುಗಳನ್ನು ಪಡೆಯಲು ಅವಕಾಶವಿಲ್ಲ. ಅದರಂತೆ ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಸಹ ಮನೆಯಿಂದ ಊಟ, ಬಟ್ಟೆ ಹಾಗೂ ಹಾಸಿಗೆ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪೌಷ್ಟಿಕ ಆಹಾರವನ್ನೇ ನೀಡಲಾಗುತ್ತಿದೆ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ದರ್ಶನ್ ಪರ ವಕೀಲರು, ಅರ್ಜಿದಾರರಿಗೆ ಜೈಲಿನ ಊಟ ಜೀರ್ಣವಾಗುತ್ತಿಲ್ಲ. ಜ್ವರ ಹಾಗೂ ಅತಿಸಾರ ಭೇದಿಯಿಂದ ದೇಹದ ತೂಕ ಇಳಿದಿದೆ. ಆದ್ದರಿಂದ, ಮನೆಯಿಂದ ಊಟ, ಹಾಸಿಗೆ ಮತ್ತು ಬಟ್ಟೆ ತರಿಸಿಕೊಳ್ಳಲು ಅನುಮತಿ ನೀಡಬೇಕೆಂದು ಕೋರಿದ್ದರು. ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿರುವ ಜೈಲಿನ ವೈದ್ಯಾಧಿಕಾರಿಯವರು ದರ್ಶನ್ ಬೆನ್ನಿನ ಕೆಳಭಾಗ, ಕಾಲು-ಕೈಗಳಲ್ಲಿ ನೋವು ಕಾಣಿಕೊಂಡಿದೆ. ಜ್ವರದಿಂದ ಅವರು ಬಳಲಿದ್ದಾರೆ. ಆದ್ದರಿಂದ, ಅವರು ವಿಶ್ರಾಂತಿ ಪಡೆಯುವ ಜತೆಗೆ ಪೌಷ್ಟಿಕಾಂಶವುಳ್ಳ ಸೇವಿಸಬೇಕು ಎಂದು ಶಿಫಾರಸು ಮಾಡಿದ್ದರು.
ಈ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಾಲಯ, ಅತಿಸಾರ ಭೇದಿ ಮತ್ತು ಅಜೀರ್ಣ ಸಮಸ್ಯೆ ಪರಿಹಾರಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡಬೇಕು ಎಂದು ವೈದ್ಯಾಧಿಕಾರಿ ಹೇಳಿದ್ದಾರೆ. ಆದರೆ, ನಿರ್ದಿಷ್ಟವಾಗಿ ಯಾವ ಆಹಾರ ಸೇವಿಸಬೇಕು ಎಂದು ಶಿಫಾರಸು ಮಾಡಿಲ್ಲ. ಜೈಲಿನಲ್ಲಿ ಒದಗಿಸುತ್ತಿರುವ ಆಹಾರದ ಪಟ್ಟಿ ಗಮನಿಸಿದರೆ ಅಲ್ಲಿ ಕೈದಿಗಳಿಗೆ ಪೌಷ್ಟಿಕಾಂಶದ ಆಹಾರವನ್ನೇ ನೀಡಲಾಗುತ್ತಿದೆ. ಆದ್ದರಿಂದ, ದರ್ಶನ್ ಅವರು ಜೈಲಿನಲ್ಲಿ ಪೂರೈಸುತ್ತಿರುವ ಆಹಾರ ಸೇವನೆ ಮಾಡಿದರೆ ಸಾಕು ಎಂದು ಅಭಿಪ್ರಾಯಪಟ್ಟಿದೆ.
ಕೊಲೆ ಆರೋಪಿಗೆ ಬಿರಿಯಾನಿ ಕೊಡಲಾಗದು!
ಅರ್ಜಿ ವಿಚಾರಣೆ ಸಂದರ್ಭದಲ್ಲಿ ದರ್ಶನ್ ಅರ್ಜಿಗೆ ಆಕ್ಷೇಪಿಸಿದ್ದ ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಪಿ.ಪ್ರಸನ್ನ ಕುಮಾರ್, ಜೈಲು ಆಹಾರದಿಂದ ದರ್ಶನ್ಗೆ ಯಾವುದೇ ತೊಂದರೆ ಇಲ್ಲ. ಜ್ವರ ಇದ್ದರೆ ಜೈಲಿನ ವೈದ್ಯಾಧಿಕಾರಿಯ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬಹುದು. ಜೈಲು ವೈದ್ಯಕೀಯ ವರದಿಯಲ್ಲಿ ವಿಶ್ರಾಂತಿ ಹೇಳಿದ್ದಾರೆ. ಅದರ ಪ್ರಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ವಿಶ್ರಾಂತಿ ತೆಗೆದುಕೊಳ್ಳಬಹುದು. ಆಸ್ಪತ್ರೆಯ ಆಹಾರ ಹಾಗೂ ಮೊಟ್ಟೆ ಪಡೆಯಬಹುದು. ಕೊಲೆ ಆರೋಪಿಗೆ ಬಿರಿಯಾನಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ, ದರ್ಶನ್ ಗೆ ಹೊರಗಿನ ಆಹಾರ ಹಾಗೂ ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡಬಾರದು ಎಂದು ಪ್ರಬಲವಾಗಿ ವಾದ ಮಂಡಿಸಿದ್ದರು.
Related Articles
Thank you for your comment. It is awaiting moderation.
Comments (0)