ಜಾಮೀನು ನೀಡಬಹುದಾದ ಅಪರಾಧಗಳಲ್ಲಿ ಖುಲಾಸೆ ಆದೇಶವನ್ನು ಸೇಷನ್ಸ್ ಕೋರ್ಟ್‌ಗಳಲ್ಲಿ ಪ್ರಶ್ನಿಸಲಾಗದು – ಹೈಕೋರ್ಟ್
- by Jagan Ramesh
- January 17, 2026
- 16 Views
ಬೆಂಗಳೂರು: ಜಾಮೀನು ನೀಡಬಹುದಾದ ಅಪರಾಧ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಖುಲಾಸೆ ಆದೇಶವನ್ನು ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಮಾತ್ರ (ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳು) ಪ್ರಶ್ನಿಸಲು ಅವಕಾಶವಿರಲಿದೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಬಸ್ ಚಾಲಕನನ್ನು ದೋಷಿ ಎಂದು ಘೋಷಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಖುಲಾಸೆ ಆದೇಶ ರದ್ದುಪಡಿಸಿ, ದೋಷಿ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದ ಸೆಷನ್ಸ್ ಕೋರ್ಟ್‌ನ ಕ್ರಮ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕೆ. ಕೇಶವ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಮೇಲ್ಮನಿದಾರನನ್ನು ದೋಷಿ ಎಂದು ತೀರ್ಮಾನಿಸಿ, ಶಿಕ್ಷೆ ವಿಧಿಸಿದ್ದ ದಕ್ಷಿಣ ಕನ್ನಡದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಕೇಶವ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಹೈಕೋರ್ಟ್ ಆದೇಶವೇನು?
ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 378ಕ್ಕೆ ತಿದ್ದುಪಡಿಯಾದ ಬಳಿಕ ಕಾಗ್ನೈಜಬಲ್ (ಸಂಜ್ಞೇ) ಮತ್ತು ಜಾಮೀನುರಹಿತ ಅಪರಾಧವಾಗಿದ್ದಾಗ ಮಾತ್ರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಖುಲಾಸೆ ಆದೇಶವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಬಹುದು. ಉಳಿದೆಲ್ಲ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ಮಾಡಿದ ಖುಲಾಸೆ ಆದೇಶವನ್ನು ಮೇಲ್ಮನವಿಯ ಮೂಲಕ ಹೈಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದಾಗಿದೆ. ಐಪಿಸಿ ಸೆಕ್ಷನ್‌ಗಳಾದ 279, 337, 338 ಮತ್ತು 304(ಎ) ಜಾಮೀನು ನೀಡಬಹುದಾದ ಅಪರಾಧಗಳಾಗಿದ್ದು, ಇಂಥ ಪ್ರಕರಗಳಲ್ಲಿನ ಖುಲಾಸೆ ಆದೇಶವನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜಾಮೀನು ನೀಡಬಹುದಾದ ಅಪರಾಧಗಳಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿಯು ಹೇಗೆ ಊರ್ಜಿತವಾಗುತ್ತದೆ ಎಂಬುದನ್ನು ತೋರಿಸಲು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರು ವಿಫಲರಾಗಿದ್ದಾರೆ. ಅಪರಾಧ ಪ್ರಕ್ರಿಯೆ ಸಂಹಿತೆ ಸೆಕ್ಷನ್ 378ರ (1)(b) ಅಡಿ ಅಂಥ ಮೇಲ್ಮನವಿಯು ಸೆಷನ್ಸ್ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಸೆಷನ್ಸ್ ನ್ಯಾಯಾಲಯಕ್ಕೆ ವ್ಯಾಪ್ತಿ ಇಲ್ಲದಿದ್ದರೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಖುಲಾಸೆ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ತಪ್ಪಾಗಿ ಮೇಲ್ಮನವಿ ಎಂದು ಹೈಕೋರ್ಟ್ ಹೇಳಿದೆ.
ಸೆಷನ್ಸ್ ನ್ಯಾಯಾಲಯದ ಆದೇಶವು ಮೂಲದಲ್ಲಿ ವ್ಯಾಪ್ತಿ ಹೊಂದಿಲ್ಲ. ಇಂಥ ಸಂದರ್ಭದಲ್ಲಿ ಪ್ರಕ್ರಿಯೆ ಮುಂದುವರಿಸುವುದು ನ್ಯಾಯಾಲಯದ ಪ್ರಕ್ರಿಯೆ ದುರ್ಬಳಕೆಯಾಗಲಿದ್ದು, ಆರೋಪಿಗೆ ಸಂವಿಧಾನದ ಪರಿಚ್ಛೇದ 21ರ ಅಡಿ ದೊರಕಿರುವ ಹಕ್ಕಿನ ಉಲ್ಲಂಘನೆಯಾಗಲಿದೆ. ವ್ಯಾಪ್ತಿಯನ್ನು ಪರೋಕ್ಷವಾಗಿ ಭಾವಿಸಿಕೊಳ್ಳಲಾಗದು. ನ್ಯಾಯದಾನದ ದುರ್ಬಳಕೆ ತಪ್ಪಿಸಲು ಅಂತರ್ಗತವಾದ ಅಧಿಕಾರವನ್ನು ಸೂಕ್ತ ವ್ಯಾಪ್ತಿಗೆ ಅನ್ವಯಿಸಬೇಕಾಗುತ್ತದೆ ಎಂದಿರುವ ಹೈಕೋರ್ಟ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಖುಲಾಸೆ ಆದೇಶದಲ್ಲಿ ವಾಸ್ತವಿಕ ಅಥವಾ ಕಾನೂನಾತ್ಮಕ ದೋಷಗಳಿಲ್ಲ. ಆದರೆ, ಪ್ರಥಮ ಮೇಲ್ಮನವಿ ನ್ಯಾಯಾಲಯ (ಸೆಷನ್ಸ್ ಕೋರ್ಟ್) ಖುಲಾಸೆ ಆದೇಶ ರದ್ದುಪಡಿಸಲು ಸೂಕ್ತ ಕಾರಣಗಳನ್ನು ನೀಡಿಲ್ಲ ಎಂದು ಅಭಿಪ್ರಾಯಪಟ್ಟು ಸೆಷನ್ಸ್ ಕೋರ್ಟ್‌ಆದೇಶ ರದ್ದುಪಡಿಸಿದೆ.
ಪ್ರಕರಣವೇನು?
ಮೇಲ್ಮನವಿದಾರ ಕೇಶವ ಅವರು ಖಾಸಗಿ ಬಸ್ ಚಾಲಕರಾಗಿದ್ದು, 2006ರ ಜೂನ್ 16ರರಂದು ಬಂಟ್ವಾಳ ತಾಲೂಕಿನ ಸುರಿಕುಮೆರುಪೇಟ್ ಎಂಬ ಸ್ಥಳದಲ್ಲಿ ಅವರು ಚಾಲನೆ ಮಾಡುತ್ತಿದ್ದ ಬಸ್ ಕಾರೊಂದಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ, ಕಾರಿನಲ್ಲಿದ್ದ ರಾಬರ್ಟ್ ಎಂಬುವರು ತಲೆಗೆ ತೀವ್ರ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಇತರರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂಬಂಧ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ, ನಿರ್ಲಕ್ಷ್ಯದಿಂದ ವ್ಯಕ್ತಿಯ ಸುರಕ್ಷತೆ ಅಥವಾ ಜೀವಕ್ಕೆ ಹಾನಿ, ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ವಿಟ್ಲ ಠಾಣೆ ಪೊಲೀಸರು, ತನಿಖೆ ನಡೆಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಬಸ್ ಚಾಲಕನನ್ನು ಪ್ರಕರಣದಿಂದ ಖುಲಾಸೆಗೊಳಿಸಿ 2009ರ ಮಾರ್ಚ್ 7ರಂದು ಆದೇಶಿಸಿತ್ತು. ಇದನ್ನು ಪೊಲೀಸರು (ಸರ್ಕಾರ) ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ಖುಲಾಸೆ ಆದೇಶ ರದ್ದುಪಡಿಸಿ, ಚಾಲಕನಿಗೆ ಗರಿಷ್ಠ 1 ವರ್ಷ ಜೈಲು ಶಿಕ್ಷೆ ಹಾಗೂ ಒಟ್ಟು 4 ಸಾವಿರ ರೂ. ದಂಡ ವಿಧಿಸಿ 2013ರ ಫೆಬ್ರವರಿ 23ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೇಶವ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
Related Articles
Thank you for your comment. It is awaiting moderation.


Comments (0)