ನಕಲಿ ಬಿಲ್ ಸೃಷ್ಟಿಸಿ ಬಹುಕೋಟಿ ತೆರಿಗೆ ವಂಚನೆ ಆರೋಪ; ಉದ್ಯಮಿ ಪ್ರತಾಪ್ ಪತ್ನಿಗೆ ಮಧ್ಯಂತರ ಜಾಮೀನು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು: ಬಹುಕೋಟಿ ರೂಪಾಯಿಗಳ ನಕಲಿ ಬಿಲ್‌ ರ‌್ಯಾಕೆಟ್‌‌ನಲ್ಲಿ ಬಂಧನಕ್ಕೊಳಗಾಗಿರುವ ನಗರದ ಉದ್ಯಮಿ ಇ. ಪ್ರತಾಪ್‌ ಅವರ ಪತ್ನಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿರುವ ಹೈಕೋರ್ಟ್, ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಿದೆ.

ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸುವಂತೆ ಹಾಗೂ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಕೋರಿ ಪ್ರತಾಪ್ ಪತ್ನಿ ರೇವತಿ ಮತ್ತವರ ಪುತ್ರಿ ಇಶಿತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಇದೇ ವೇಳೆ, ಎರಡನೇ ಅರ್ಜಿದಾರರು (ರೇವತಿ) ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಅರ್ಜಿ ಸಲ್ಲಿಸಿದರೆ ವಿಚಾರಣಾ ನ್ಯಾಯಾಲಯ ಯಾವುದೇ ವಿಳಂಬ ಮಾಡದೆ, ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಆದೇಶಿಸಿದೆ.

ಹೈಕೋರ್ಟ್ ಆದೇಶವೇನು?
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಎರಡನೇ ಅರ್ಜಿದಾರರನ್ನು ಬಂಧಿಸಲು ನೀಡಿರುವ ಕಾರಣಗಳನ್ನು ಹಾಗೂ ಅರೆಸ್ಟ್‌ ಮೆಮೋ ಅನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದ್ದು, ಅದನ್ನು ಒಪ್ಪಲಾಗದು. ಏಕೆಂದರೆ, ಬಂಧನ ಮೆಮೋ 21 ಪುಟಗಳಿದ್ದು, ಅದರಲ್ಲಿ ಯಾವ ಕಾರಣಕ್ಕೆ ಬಂಧಿಸಲಾಗುತ್ತಿದೆ ಎಂಬ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಬಂಧನಕ್ಕೆ ಕಾರಣಗಳು ಸ್ಪಷ್ಟವಾಗಿವೆ. ಒಂದು ವೇಳೆ ಬಂಧಿಸುವ ಮುನ್ನ ವಿವೇಚನೆ ಬಳಸಿಲ್ಲವೆಂದಾದರೆ ಪರಿಶೀಲಿಸಬಹುದಿತ್ತು. ಆದರೆ, ಈ ಪ್ರಕರಣದಲ್ಲಿ ಆ ರೀತಿಯ ಅಂಶವಿಲ್ಲ ಎಂದು ಹೇಳಿದೆ.

ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎರಡನೇ ಅರ್ಜಿದಾರರನ್ನು (ರೇವತಿ) ಕರುಣೆ ಅಥವಾ ಸಹಾನುಭೂತಿ ತೋರಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಕೋರಲಾಗಿದೆ. ಒಂದು ವೇಳೆ ಆ ಮನವಿ ಒಪ್ಪಿದರೆ, ನಿಸ್ಸಂದೇಹವಾಗಿ ಪ್ಯಾಂಡೋರಾ ಬಾಕ್ಸ್‌ ತೆರೆದಂತಾಗುತ್ತದೆ. ಆಗ ನ್ಯಾಯಾಲಯ ಇಂಥ ಅರ್ಜಿಗಳಲ್ಲಿ ಕಾನೂನು ಅಂಶಗಳನ್ನು ಪರಿಶೀಲಿಸುವ ಬದಲು ದಯೆಯಿಂದ ಮಾತ್ರ ನೋಡಬೇಕಾಗುತ್ತದೆ. ದಯೆ ಎನ್ನುವುದು ಪ್ರಕರಣದಿಂದ ಪ್ರಕರಣಕ್ಕೆ ಬೇರೆಯಾಗುತ್ತಾ ಹೋಗುತ್ತದೆ. ಆದ್ದರಿಂದ, ಆ ಅಂಶವನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ವಾದ-ಪ್ರತಿವಾದ:
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ, ಮೊದಲನೇ ಅರ್ಜಿದಾರರಿಗೆ (ಇಶಿತಾ) ಕೇವಲ 18 ವರ್ಷ, ಆಕೆ ಹಾಗೂ ಮತ್ತೊಬ್ಬ 11 ವರ್ಷದ ಮಗುವನ್ನು ರೇವತಿ ಅವರು ನೋಡಿಕೊಳ್ಳಬೇಕಾಗಿದೆ. ಬಂಧನ ಮೆಮೋ ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ, ಮಾನವೀಯ ನೆಲೆಯಲ್ಲಿ ಎರಡನೇ ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.

ಈ ಮನವಿಗೆ ಆಕ್ಷೇಪಿಸಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಪರ ವಕೀಲರು, ಬಹುಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಆರೋಪಿಗಳಾಗಿದ್ದಾರೆ. 2025ರ ಸೆಪ್ಟಂಬರ್‌ನಿಂದಲೂ ಹಲವು ಬಾರಿ ನೋಟಿಸ್‌ಗಳನ್ನು ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗಿಲ್ಲ. ಆದ್ದರಿಂದ, ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಪತಿ ಮತ್ತು ಪತ್ನಿ ಇಬ್ಬರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಮೇಲಿನ ಆರೋಪಗಳನ್ನು ಅರೆಸ್ಟ್‌ ಮೆಮೋದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಅರ್ಜಿದಾರರು ಜಾಮೀನು ಬೇಕಿದ್ದರೆ ಮೊದಲು ವಿಚಾರಣಾ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬೇಕು. ಅವರ ವಿರುದ್ಧದ ದಾಖಲೆಗಳೆಲ್ಲವೂ ಡಿಜಿಟಲ್‌ ರೂಪದಲ್ಲಿದೆ. ಒಂದು ವೇಳೆ ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಪ್ರಕರಣವೇನು?
ನಕಲಿ ಬಿಲ್‌ ಸೃಷ್ಟಿಸಿ ಕೋಟ್ಯಂತರ ರೂ. ತೆರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಉದ್ಯಮಿ ಇ. ಪ್ರತಾಪ್‌ಗೆ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್‌ ನೀಡಿದ್ದರೂ ಅವರು ಗೈರು ಹಾಜರಾಗಿದ್ದರು. ಕೊನೆಗೆ ಇಲಾಖೆ 2026ರ ಜನವರಿ 3ರಂದು ಖುದ್ದು ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿತ್ತು. ನಂತರ ಪ್ರತಾಪ್‌ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿತ್ತು. ಇದರಿಂದ, ಬಂಧನ ಕಾನೂನುಬಾಹಿರವಾಗಿದ್ದು, ಬಂಧನ ಮೆಮೊ ರದ್ದುಪಡಿಸಬೇಕು ಹಾಗೂ ಮಧ್ಯಂತರ ಜಾಮೀನು ಮಂಜೂರು ಮಾಡಬೇಕೆಂದು ಕೋರಿ ಪ್ರತಾಪ್ ಪತ್ನಿ ರೇವತಿ ಹಾಗೂ ಪುತ್ರಿ ಇಶಿತಾ ಹೈಕೋರ್ಟ್ ಮೊರೆ ಹೋಗಿದ್ದರು.

Related Articles

Comments (0)

Leave a Comment