ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡಗೆ ವಾರದಲ್ಲಿ ಒಂದು ದಿನ ಮನೆ ಊಟ ಒದಗಿಸಲು ಕೋರ್ಟ್ ಆದೇಶ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಪವಿತ್ರಾ ಗೌಡಗೆ ವಾರದಲ್ಲಿ ಒಂದು ದಿನ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನಗರದ 57ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರ್ದೇಶಿಸಿದೆ.

ಜೈಲು ಕೈಪಿಡಿಯಲ್ಲಿ ಅವಕಾಶವಿರುವಂತೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಪವಿತ್ರಾ ಗೌಡ ಅವರು ಈ ಮೊದಲು ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅದಕ್ಕೆ ಜೈಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಅವರು ಜೈಲಿನಿಂದ ಸಹ ಸೂಕ್ತ ಆಹಾರ ಒದಗಿಸುತ್ತಿಲ್ಲ ಎಂದು ಪವಿತ್ರಾ ಗೌಡ ಪರ ವಕೀಲರು ಈ ಹಿಂದೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಮನವಿಗೆ ಒಪ್ಪಿದ್ದ ನ್ಯಾಯಾಲಯ, ಮನೆಯಿಂದ ಊಟ ತರಿಸಿಕೊಳ್ಳಲು ಪವಿತ್ರಾಗೌಡ ಹಾಗೂ ಇನ್ನಿಬ್ಬರು ಆರೋಪಿಗಳಿಗೆ ಅನುಮತಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿತ್ತು.

ಸೋಮವಾರ ಪ್ರಕರಣದ ವಿಚಾರಣೆ ಬಂದಾಗ ಪ್ರಾಸಿಕ್ಯೂಷನ್‌ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್‌ ಹಾಜರಾಗಿ, ಪವಿತ್ರಾ ಗೌಡಗೆ ಮನೆ ಊಟ ಒದಗಿಸಲು ಈ ಹಿಂದೆ ನ್ಯಾಯಾಲಯ ಆದೇಶಿಸಿದೆ. ಸಾಮಾನ್ಯ ರೀತಿಯಲ್ಲಿ ಈ ಆದೇಶ ಮಾಡಲಾಗಿದೆ. ಆ ಕುರಿತು ಸ್ಪಷ್ಟನೆ ನೀಡಬೇಕು ಎಂದು ಕೋರಿದರಲ್ಲದೆ, ವಿಚಾರಣಾಧೀನ ಕೈದಿಗೆ ವಾರದಲ್ಲಿ ಒಂದು ದಿನ ಮನೆ ಊಟ ಒದಗಿಸಲು ಅವಕಾಶವಿದ್ದು, ಈ ಕುರಿತಂತೆ ಹಿಂದಿನ ಆದೇಶವನ್ನು ಮಾರ್ಪಡಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು.

ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಾಲಯ, ಪವಿತ್ರಾ ಗೌಡ ಅವರಿಗೆ ವಾರದಲ್ಲಿ ಒಂದು ದಿನ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಸೂಚಿಸಿತು.

ಇದೇ ವೇಳೆ ಆರೋಪಿಗಳಾದ ನಟಿ ಪವಿತ್ರಾ ಗೌಡ, ನಟ ದರ್ಶನ್‌, ಜಗದೀಶ್‌, ಅನುಕುಮಾರ್‌, ಆರ್. ನಾಗರಾಜು, ಎಂ. ಲಕ್ಷ್ಮಣ್‌ ಮತ್ತು ಪ್ರದೋಷ್‌ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾದರು. ಜಾಮೀನು ಮೇಲಿರುವ 10 ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಆರೋಪಿಗಳ ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಾಲಯ ದರ್ಶನ್‌, ಪವಿತ್ರಾ ಗೌಡ ಸೇರಿ ಉಳಿದ ಐದು ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಪ್ರಕರಣದ 14ನೇ ಆರೋಪಿ ಪ್ರದೋಷ್‌ ರಾವ್‌ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗೆ ಉತ್ತರಿಸಲು ಕಾಲಾವಕಾಶ ನೀಡುವಂತೆ ಸರ್ಕಾರಿ ವಿಶೇಷ ಅಭಿಯೋಜಕರು ಮನವಿ ಮಾಡಿದರು. ಅದರಂತೆ ನ್ಯಾಯಾಲಯ ಕಾಲಾವಕಾಶ ನೀಡಿದೆ.

Related Articles

Comments (0)

Leave a Comment