ಬಿಎಂಐಸಿ ಯೋಜನೆ ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Prashanth Basavapatna
- January 12, 2026
- 11 Views
ಬೆಂಗಳೂರು: ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡ ತಮ್ಮ ಜಮೀನಿಗೆ ಪರಿಹಾರ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಮಾರಪ್ಪ ಗಾರ್ಡನ್ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಬಿಎಂಐಎಸಿ ಯೋಜನೆಯಡಿ ಯೋಜನಾ ನಿರ್ಮಾಣಕಾರರು ಪೆರಿಫೆರಲ್ (ಬಾಹ್ಯ) ರಸ್ತೆಗಳು ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಮಿಸುವ ಮೂಲಕ ಭಾರಿ ಸುಂಕ ಸಂಗ್ರಹಿಸುತ್ತಿದ್ದಾರೆ. ಅದಾಗ್ಯೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮತ್ತು ಮೂಲಸೌಕರ್ಯ ಕಾರಿಡಾರ್ ಕೇವಲ ಕಾಗದಗಳಲ್ಲಿ ಮಾತ್ರ ಉಳಿದಿದೆ. ಯೋಜನಾ ನಿರ್ಮಾಣ ಮಾಡಬೇಕಿರುವವರು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ, ಬೆಂಗಳೂರು ಮೈಸೂರು-ಎಕ್ಸ್‌ಪ್ರೆಸ್ ಮಾರ್ಗ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿಲ್ಲ. ಭವಿಷ್ಯದಲ್ಲಿ ಅದನ್ನು ನಿರ್ಮಿಸುವ ಯಾವುದೇ ಸೂಚನೆಯಿಲ್ಲ. ಅದಕ್ಕೆ ಕಾರಣ ಭೂಮಿಯು ಸರಿಯಾಗಿ ಬಳಕೆಯಾಗಿಲ್ಲ. ಆದ್ದರಿಂದ, ಯೋಜನೆಯನ್ನು ಮರುಪರಿಶೀಲಿಸಬೇಕು ಮತ್ತು ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.
ಉತ್ತಮ ನಾಗರಿಕ ಸೌಲಭ್ಯಗಳು ಮತ್ತು ವ್ಯಾಪಾರ ಮತ್ತು ವೃತ್ತಿಪರರಿಗೆ ಉತ್ತಮ ಅವಕಾಶಗಳೊಂದಿಗೆ ನಗರದ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಎಂಐಸಿ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಉದ್ದೇಶವು ದೂರದ ಕನಸಾಗಿಯೇ ಉಳಿದಿದೆ. ವಾಸ್ತವವಾಗಿ ಟೋಲ್ ಪ್ಲಾಜಾ, ಪೆರಿಫೆರಲ್ ರಸ್ತೆಗಳನ್ನು ಹೊರತುಪಡಿಸಿ ಸುಮಾರು 25 ವರ್ಷಗಳಲ್ಲಿ ಕೇವಲ ಒಂದು ಕಿ.ಮೀ. ಎಕ್ಸ್‌ಪ್ರೆಸ್ ಮಾರ್ಗವನ್ನು ನಿರ್ಮಿಸಲಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಪಿಟಿಆರ್ ಅಡಿಯಲ್ಲಿ ಕಲ್ಪಿಸಲಾದ ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವ ಸುಂದರ ಮತ್ತು ಭವಿಷ್ಯದ ಪರಿಕಲ್ಪನೆಯನ್ನು ಯೋಜನೆಯ ವಿರೋಧಿಗಳು ನಾಶಪಡಿಸಿದ್ದಾರೆ. ವಾಸ್ತವವಾಗಿ ಈ ಪರಿಕಲ್ಪನೆ ಮತ್ತು ಒಪ್ಪಂದ ವಿಫಲವಾಗಿದೆ. 25 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಕೇವಲ ಒಂದು ಕಿಲೋ ಮೀಟರ್ ಮಾತ್ರ ನಿರ್ಮಿಸಲಾಗಿರುವಾಗ, ಯೋಜನೆಯನ್ನು ಜೀವಂತವಾಗಿಡುವ ಯಾವುದೇ ಉದ್ದೇಶ ಈಡೇರುವುದಿಲ್ಲ. ನಗರ, ನಾಗರಿಕರು, ಪರಿಸರ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಯೋಜನೆಯನ್ನು ಮರುಪರಿಶೀಲಿಸಬೇಕಿದೆ. ಹಳೆಯ ಯೋಜನೆಯನ್ನು ತ್ಯಜಿಸಿ ಹೊಸ ಯೋಜನೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದು ಪೀಠ ಹೇಳಿದೆ.
ನಗರದ ಜನಸಂಖ್ಯೆ 1.40 ಕೋಟೂ ಅಧಿಕವಿದೆ. ದಿನನಿತ್ಯದ ಸಂಚಾರ ದಟ್ಟಣೆ ಸಾಮಾನ್ಯವಾಗಿದ್ದು, ನಗರದಲ್ಲಿ ಸ್ವಲ್ಪ ದೂರ ಪ್ರಯಾಣಿಸಲು ಗಂಟೆಗಳು ಬೇಕಾಗುತ್ತದೆ. ಮೂಲಸೌಕರ್ಯ ಸೌಲಭ್ಯಗಳು ಕುಸಿಯುತ್ತಿವೆ. ಪರಿಸರ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಆದ್ದರಿಂದ, ರಾಜ್ಯ ಸರ್ಕಾರ ನಗರದ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಹೊಸ ಯೋಜನೆಗೆ ಅಗತ್ಯವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿರುವ ನ್ಯಾಯಪೀಠ, ಅಂತಿಮವಾಗಿ ಪ್ರಕರಣದಲ್ಲಿ ಅರ್ಜಿದಾರರು ಈಗಾಗಲೇ ಪರಿಹಾರ ಪಡೆದಿರುವುದರಿಂದ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
Related Articles
Thank you for your comment. It is awaiting moderation.


Comments (0)