ಅಬಕಾರಿ ಸನ್ನದು ಇ-ಹರಾಜು ಪ್ರಕ್ರಿಯೆಗೆ ನೀಡಿದ್ದ ತಡೆ ತೆರವಿಗೆ ಹೈಕೋರ್ಟ್ ನಕಾರ; ರಾಜ್ಯ ಸರ್ಕಾರಕ್ಕೆ ಹಿನ್ನಡೆ
- by Ramya B T
- January 12, 2026
- 11 Views
ಬೆಂಗಳೂರು: ರಾಜ್ಯದಲ್ಲಿ 569 ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡಲು ಅಬಕಾರಿ ಇಲಾಖೆ ಡಿಸೆಂಬರ್ 19ರಂದು ಹೊರಡಿಸಿದ್ದ ಅಧಿಸೂಚನೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ಇದರಿಂದ, ಜನವರಿ 13ರಿಂದ ರಾಜ್ಯಾದ್ಯಂತ ನಡೆಯಬೇಕಿದ್ದ ನವೀಕರಣವಾಗದ, ಸ್ಥಗಿತಗೊಂಡಿದ್ದ 477 ಸಿಎಲ್-2ಎ ಚಿಲ್ಲರೆ ಮದ್ಯ ಮಾರಾಟ ಮಳಿಗೆ ಮತ್ತು 92 ಸಿಎಲ್-9ಎ ರಿಫ್ರೆಶ್ ರೂಮ್ ಸನ್ನದುಗಳ ಹರಾಜು ಪ್ರಕ್ರಿಯೆಗೆ ತಡೆ ಬಿದ್ದಂತಾಗಿದೆ.
ಅಬಕಾರಿ ಇಲಾಖೆಯ ಅಧಿಸೂಚನೆ ಪ್ರಶ್ನಿಸಿ ಹುಬ್ಬಳ್ಳಿಯ ಶಾಂತಾಬಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಸೋಮವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, 25-30 ವರ್ಷಗಳಿಂದ ನವೀಕರಣವಾಗದ ಮತ್ತು ಸ್ಥಗಿತಗೊಂಡಿರುವ ಪರವಾನಗಿಗಳನ್ನು ಸರ್ಕಾರ ಆದಾಯ ಸಂಗ್ರಹಣೆ ದೃಷ್ಟಿಯಿಂದ ಇ-ಹರಾಜು ಮಾಡಲು ಹೊರಟಿದೆ. ಆನಂತರ ಒಬ್ಬೊಬ್ಬರೇ ಲೈಸೆನ್ಸ್ ನವೀಕರಣಕ್ಕೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ, ಈ ಲೈಸನ್ಸ್‌ಗಳ ಮೇಲೆ ಅರ್ಜಿದಾರರು ಹಕ್ಕು ಮಂಡಿಸಲಾಗದು. ಮಂಗಳವಾರದಿಂದಲೇ ಇ-ಹರಾಜು ನಿಗದಿಯಾಗಿರುವುದರಿಂದ ತಡೆಯಾಜ್ಞೆ ತೆರವು ಕೋರಿ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿ ಮಾನ್ಯ ಮಾಡಬೇಕು ಎಂದು ಕೋರಿದರು.
ಇದನ್ನು ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು, ಹಲವು ವರ್ಷಗಳಿಂದ ನವೀಕರಣ ಮಾಡಿಕೊಳ್ಳಲಾಗದ ಲೈಸೆನ್ಸ್‌ಗಳನ್ನು ಇದೀಗ ಇ-ಹರಾಜು ಮಾಡಲು ಇಲಾಖೆ ಮುಂದಾಗಿದೆ. ಆದರೆ, ಅವುಗಳನ್ನು 2008ರಲ್ಲಿ ಎಂಎಸ್‌ಐಎಲ್‌ಗೆ ಸರ್ಕಾರ ನೀಡಿದ್ದರಿಂದ ಅರ್ಜಿದಾರರ ಲೈಸೆನ್ಸ್ ಊರ್ಜಿತದಲ್ಲಿಲ್ಲವೆಂದು ಸಮ್ಮನಾಗಿದ್ದರು. ಆದರೆ, ಇದೀಗ ಮತ್ತೆ ಅದೇ ಲೈಸನ್ಸ್‌ಗಳಿಗೆ ಜೀವ ನೀಡಿ ಮತ್ತೆ ಹರಾಜು ಹಾಕಲು ಮುಂದಾಗಿರುವುದರಿಂದ ಅರ್ಜಿದಾರರ ಕಾನೂನು ಬದ್ಧ ಹಕ್ಕು ಕಸಿದುಕೊಂಡಂತಾಗಿದೆ ಎಂದರು.
ಮುಂದುವರಿದು, ಸರ್ಕಾರ ನಡೆಸಲು ಉದ್ದೇಶಿಸಿರುವ ಇ-ಹರಾಜು ಪ್ರಕ್ರಿಯೆಯಲ್ಲಿ ಹಲವು ಪ್ರವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಅದಕ್ಕೆ ಯಾವುದೇ ಮಾನದಂಡ ಅನುಸರಿಸಿಲ್ಲ. ಆ ಬಗ್ಗೆ ಅಧಿಸೂಚನೆಯಲ್ಲೂ ಉಲ್ಲೇಖಿಸಲಾಗಿಲ್ಲ. ಆ ರೀತಿ ಮೀಸಲು ಒದಗಿಸಲು ಶಾಸನಾತ್ಮಕ ಬೆಂಬಲವೂ ಇಲ್ಲ. ಆ ಮೂಲಕ ಸರ್ಕಾರ ಅರ್ಜಿದಾರರ ಸಾಂವಿಧಾನಿಕ ಹಕ್ಕು ಕಸಿದುಕೊಳ್ಳುತ್ತಿದೆ. ಆದ್ದರಿಂದ, ಯಾವುದೇ ಕಾರಣಕ್ಕೂ ಮಧ್ಯಂತರ ತಡೆ ತೆರವುಗೊಳಿಸಬಾರದು, ಇ-ಹರಾಜು ಪ್ರಕ್ರಿಯೆಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ತಡೆ ತೆರವು ಕೋರಿ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ತಿರಸ್ಕರಿಸಿತಲ್ಲದೆ, ಇ-ಹರಾಜು ಪ್ರಕ್ರಿಯೆಗೆ ಡಿಸೆಂಬರ್ 26ರಂದು ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿ, ವಿಚಾರಣೆಯನ್ನು ಫೆಬ್ರವರಿ 11ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)