ನಕಲಿ ಆಧಾರ್ ಬಳಸಿ ಪಡೆದ ಪಾಸ್‌ಪೋರ್ಟ್‌ನಿಂದ ಬಾಂಗ್ಲಾದೇಶಕ್ಕೆ ಪ್ರಯಾಣ; ಮಾನವ ಕಳ್ಳಸಾಗಣೆ ಪ್ರಕರಣದ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು: ನಕಲಿ ಆಧಾರ್ ಕಾರ್ಡ್ ಬಳಸಿ ಪಡೆದುಕೊಂಡಿದ್ದ ಪಾಸ್‌ಪೋರ್ಟ್ ಮೂಲಕ ಐದು ಬಾರಿ ಬಾಂಗ್ಲಾದೇಶಕ್ಕೆ ಪ್ರಯಾಣಿಸಿದ್ದ ಬಾಂಗ್ಲಾ ಪ್ರಜೆಯೊಬ್ಬನ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಮಾನವ ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬಾಂಗ್ಲಾ ಮೂಲದ ಆರೋಪಿಗೆ ಜಾಮೀನು ನಿರಾಕರಿಸಿದೆ.

ಜಾಮೀನು ಅರ್ಜಿ ವಜಾಗೊಳಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ​ಬಾಂಗ್ಲಾದೇಶದ ಪ್ರಜೆ ಸದ್ಯ ಅಸ್ಸಾಂ‌ನ ವಿಳಾಸ ಹೊಂದಿರುವ ಅಮೋಲ್ ಚಂದ್ರ ದಾಸ್ ಅಲಿಯಾಸ್ ಅಮೋಲ್ ದಾಸ್ ಅಲಿಯಾಸ್ ಸುಜೀಬ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಇತ್ತೀಚೆಗೆ ವಜಾಗೊಳಿಸಿದೆ.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆರೋಪಿಯು ಬಾಂಗ್ಲಾದೇಶದ ಪ್ರಜೆಯಾಗಿದ್ದು, ಒಂದೇ ದಿನದಲ್ಲಿ ಕರ್ನಾಟಕ ಮತ್ತು ಅಸ್ಸಾಂ ವಿಳಾಸದ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ನಕಲಿ ದಾಖಲೆಗಳ ಆಧಾರದ ಮೇಲೆ ಪಾಸ್‌ಪೋರ್ಟ್ ಪಡೆದು ಐದು ಬಾರಿ ಬಾಂಗ್ಲಾದೇಶಕ್ಕೆ ಪ್ರಯಾಣಿಸಿರುವ ಆರೋಪ ಆತನ ಮೇಲಿದೆ. ​ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೆ ಆತ ನ್ಯಾಯಾಂಗ ಪ್ರಕ್ರಿಯೆ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ ಎಂಬ ಪ್ರಾಸಿಕ್ಯೂಷನ್ ವಾದ ತಳ್ಳಿಹಾಕುವಂತಿಲ್ಲ. ಆದ್ದರಿಂದ, ಆರೋಪಿಗೆ ಜಾಮೀನು ನೀಡಲು ಯಾವುದೇ ಸೂಕ್ತ ಕಾರಣಗಳು ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ವಜಾಗೊಳಿಸಿದೆ.

ಎನ್‌ಐಎ ವಾದವೇನು?
ವಿಚಾರಣೆ ವೇಳೆ ಎನ್ಐಎ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು, ಆರೋಪಿ ಸಲ್ಲಿಸಿದ್ದ ಆಧಾರ್ ಕಾರ್ಡ್ ನಕಲಿಯಾಗಿದ್ದು, ಅದು 2017ರ ಡಿಸೆಂಬರ್ 18ರ ದಿನಾಂಕ ಹೊಂದಿದೆ. ಅದೇ ದಿನಾಂಕದಂದು ಆತನ ಹೆಸರಿನಲ್ಲಿ ಮತ್ತೊಂದು ಆಧಾರ್ ಕಾರ್ಡ್ ಸೃಷ್ಟಿಸಲಾಗಿದ್ದು, ಒಂದರಲ್ಲಿ ಬೆಂಗಳೂರಿನ ವಿಳಾಸವಿದ್ದರೆ ಮತ್ತೊಂದರಲ್ಲಿ ಅಸ್ಸಾಂ ವಿಳಾಸವಿದೆ. ಒಂದೇ ದಿನದಲ್ಲಿ ಕರ್ನಾಟಕ ಮತ್ತು ಅಸ್ಸಾಂ ಎರಡೂ ಕಡೆ ಆಧಾರ್ ಕಾರ್ಡ್ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರಲ್ಲದೆ, ಈ ಸಂಬಂಧ ವಿವರವಾದ ಆಕ್ಷೇಪಣೆ ಸಲ್ಲಿಸಿದ್ದರು.

ಆಧಾರ್ ಕಾರ್ಡ್ ಪಡೆಯುವಾಗ ಆರೋಪಿಯ ಭಾವಚಿತ್ರವನ್ನು ಅದರಲ್ಲಿ ಸೇರಿಸಲಾಗಿದೆ. ಅಲ್ಲದೆ, ಆತ ಸಲ್ಲಿಸಿದ್ದ ಜನನ ಪ್ರಮಾಣಪತ್ರದಲ್ಲಿ ಯಾವುದೇ ನೋಂದಾಯಿತ ವೈದ್ಯರ ಸಹಿ ಇಲ್ಲದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಯು ಐದು ಬಾರಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದ್ದಾನೆ. ಇದು ಆತ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಆ ದೇಶದೊಂದಿಗೆ ಸಂಪರ್ಕ ಹೊಂದಿರುವುದನ್ನು ಮತ್ತು ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಆತನ ಪಾತ್ರವಿರುವುದನ್ನು ಸಾಬೀತುಪಡಿಸುತ್ತದೆ. ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೆ, ಆತ ಬಂಧನದಿಂದ ತಪ್ಪಿಸಿಕೊಂಡು ಓಡಿಹೋಗುವ ಸಾಧ್ಯತೆ ಇದೆ. ಆದ್ದರಿಂದ, ಮೇಲ್ಮನವಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಪ್ರಕರಣವೇ‌ನು?
ನಕಲಿ ದಾಖಲೆಗಳನ್ನು ಸೃಷ್ಟಿಸಿದ ಹಾಗೂ ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 370(3) (ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಕಳ್ಳ ಸಾಗಣೆ), 120ಬಿ (ಕ್ರಿಮಿನಲ್ ಒಳಸಂಚು) ಹಾಗೂ ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ 2025ರ ಆಗಸ್ಟ್ 23ರಂದು ವಜಾಗೊಳಿಸಿತ್ತು. ಇದರಿಂದ, ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಿ, ಜಾಮೀನು ಮಂಜೂರು ಮಾಡುವಂತೆ ಕೋರಿ ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

Related Articles

Comments (0)

Leave a Comment