ಎಲ್ಲ ವೈವಾಹಿಕ ಸಮಸ್ಯೆಗಳಿಗೂ ಐಪಿಸಿ ಸೆಕ್ಷನ್ 498ಎ ಸಂಜೀವಿನಿಯಲ್ಲ – ಹೈಕೋರ್ಟ್
- by Jagan Ramesh
- January 9, 2026
- 21 Views
ಬೆಂಗಳೂರು: ಪತಿ ಮತ್ತು ಅತ್ತೆ-ಮಾವಂದಿರ ವಿರುದ್ಧ ಮಹಿಳೆಯೊಬ್ಬರು ಐಪಿಸಿ ಸೆಕ್ಷನ್ 498ಎ ಅಡಿ (ಮಹಿಳೆಯ ಪತಿ ಅಥವಾ ಆತನ ಸಂಬಂಧಿಕರು ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಹೂಡಿದ್ದ ಪ್ರಕರಣವನ್ನು ರದ್ದುಗೊಳಿಸಿರುವ ಹೈಕೋರ್ಟ್, ಕಾನೂನು ದಂಪತಿಗಳ ನಡುವಿನ ಅಸಾಮರಸ್ಯವನ್ನು ಅಪರಾಧೀಕರಿಸುವುದಿಲ್ಲ. ಐಪಿಸಿ ಸೆಕ್ಷನ್ 498ಎ ಎಲ್ಲ ವೈವಾಹಿಕ ಸಮಸ್ಯೆಗಳಿಗೆ ಸಂಜೀವಿನಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 498ಎ, 504 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿ ದಾಖಲಿಸಿದ್ದ ಪ್ರಕರಣ ರದ್ದುಕೋರಿ ಆಕೆಯ ಪತಿ ಅಬುಜರ್ ಅಹ್ಮದ್ ಮತ್ತವರ ಕುಟುಂಬ ಸದಸ್ಯರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಪುರಸ್ಕರಿಸುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಗಂಭೀರ ಕ್ರೌರ್ಯ, ಜೀವ ಮತ್ತು ಅಂಗಾಗ ಅಥವಾ ಮಾನಸಿಕ ಅರೋಗ್ಯಕ್ಕೆ ಅಪಾಯವನ್ನುಂಟು ಮಾಡವಷ್ಟು ಉದ್ದೇಶಪೂರ್ವಕ ಮತ್ತು ಹಾನಿಕಾರಕ ನಡವಳಿಕೆಗಳು ಅಥವಾ ಕಾನೂನುಬಾಹಿರವಾಗಿ ವರದಕ್ಷಿಣೆ ಸಂಬಂಧಿಸಿದ ಕಿರುಕುಳವನ್ನು ಪರಿಹರಿಸುವುದು ಐಪಿಸಿ ಸೆಕ್ಷನ್ 498ಎ ಮುಖ್ಯ ಉದ್ದೇಶವಾಗಿದೆ. ಆದರೆ, ದೂರಿನಲ್ಲಿ ಅಂಥ ಯಾವುದೇ ಅಂಶಗಳು ಇಲ್ಲ, ವರದಕ್ಷಿಣೆ ಬೇಡಿಕೆಯ ಆರೋಪಗಳಿಲ್ಲ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಕುಟುಂಬದಲ್ಲಿ ದಂಪತಿಯ ನಡುವೆ ನಡೆಯುವ ಸಣ್ಣಪುಟ್ಟ ಜಗಳಗಳನ್ನೂ 498ಎ ಅಥವಾ 504ರ ಅಡಿಯಲ್ಲಿ ಅಪರಾಧವೆಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಸೆಕ್ಷನ್ 498ಎ ಅಡಿಯಲ್ಲಿ ದೂರು ದಾಖಲಿಸುವ ಸಂದರ್ಭದಲ್ಲಿ ಕಾನೂನು ದುರುಪಯೋಗ ಪಡಿಸಿಕೊಂಡಿರುವ ಅಂಶಗಳು ಕಂಡುಬಂದಲ್ಲಿ ಆರಂಭಿಕ ಹಂತದಲ್ಲೇ ಅಂಥ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ದೂರುದಾರೆ ಮತ್ತು ಅಬುಜರ್ ಅಹ್ಮದ್ 2017ರ ಆಗಸ್ಟ್ 25ರಂದು ವಿವಾಹವಾಗಿದ್ದರು. ಮದುವೆಯ ನಂತರ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. ಸುಮಾರು 6 ವರ್ಷಗಳ ಕಾಲ ವಿದೇಶದಲ್ಲೇ ನೆಲೆಸಿದ್ದ ಅವರಿಗೆ ಒಂದು ಮಗು ಸಹ ಜನಿಸಿತ್ತು. ಬಳಿಕ ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿತ್ತು.
2023ರಲ್ಲಿ ಬೆಂಗಳೂರಿಗೆ ಹಿಂದಿರುಗಿದ್ದ ಮಹಿಳೆ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ ಹಾಗೂ ಶಾಂತಿ ಕದಡುವ ಆರೋಪದಲ್ಲಿ ಅರ್ಜಿದಾರರಾಗಿರುವ ಅಬುಜರ್ ಅಹ್ಮದ್ ಅವರ ತಂದೆ ಮತ್ತು ತಾಯಿ ಮತ್ತಿತರರ ವಿರುದ್ಧ ಬನಶಂಕರಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ದೂರಿನ ಆಧಾರದಲ್ಲಿ ಲುಕ್ಔಟ್ ನೋಟಿಸ್ ಸಹಾ ಜಾರಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಹೇಳಿದ್ದೇನು?
• ದೂರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆಹಾರದ ನಿರ್ಬಂಧಗಳು, ಉಡುಪಿನ ಬಗೆಗಿನ ನಿರೀಕ್ಷೆಗಳು, ಮನೆಯ ಜವಾಬ್ದಾರಿಗಳ ಹಂಚಿಕೆ ಮತ್ತು ಟಿವಿ ನೋಡುವ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳು, ಪತಿಯು ಪತ್ನಿಯನ್ನು ಸೇವಕಿಯಂತೆ ನಡೆಸಿಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಈ ಆರೋಪಗಳನ್ನು ನಿಜವೆಂದು ಒಪ್ಪಿಕೊಂಡರೂ, ಅವು ದಾಂಪತ್ಯದಲ್ಲಿನ ಕಲಹವನ್ನು ತೋರಿಸುತ್ತವೆಯೇ ಹೊರತು, ಸೆಕ್ಷನ್ 498ಎ ಅಡಿಯಲ್ಲಿ ‘ಕ್ರೌರ್ಯ’ದ ವ್ಯಾಪ್ತಿಗೆ ಬರುವುದಿಲ್ಲ.
• ಮದುವೆಯಾದ ಬಳಿಕ ದಂಪತಿ (ದೂರುದಾರರು-ಅರ್ಜಿದಾರರು) ಅಮೆರಿಕದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಹಲವು ಘಟನೆಗಳು ನಡೆದಿದ್ದು, 2023ರಲ್ಲಿ ಭಾರತಕ್ಕೆ ಹಿಂದಿರುಗಿರುವ ಪತ್ನಿ, ಮದುವೆಯಾದ ಆರು ವರ್ಷಗಳ ಬಳಿಕ 2017ರಿಂದ 2023ರವರೆಗಿನ ಘಟನೆಗಳನ್ನು ದೂರಿನಲ್ಲಿ ಸೇರಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ಮುಂದುವರೆಸುವುದರಿಂದ ಅರ್ಜಿದಾರರಿಗೆ ಕಿರುಕುಳ ಹೆಚ್ಚಿಸುವುದು, ಕಳಂಕ ತರುವುದು ಮತ್ತು ಕ್ರಿಮಿನಲ್ ನ್ಯಾಯಾಲಯಗಳ ಅಮೂಲ್ಯ ಸಮಯದ ವ್ಯರ್ಥಮಾಡುವುದು ಹೊರತುಪಡಿಸಿದರೆ ಬೇರೆ ಯಾವ ಉದ್ದೇಶವೂ ಈಡೇರುವುದಿಲ್ಲ.
• ಈ ಪ್ರಕರಣ ಕೌಟುಂಬಿಕ ದೌರ್ಜನ್ಯ ತಡೆ ಸಂಬಂಧ ಐಪಿಸಿ ಸೆಕ್ಷನ್ 498ಎ ದುರ್ಬಳಕೆಗೆ ಸ್ಪಷ್ಟ ಉದಾಹರಣೆಯಾಗಿದೆ. ದಬ್ಬಾಳಿಕೆ ಅಥವಾ ವೈಯಕ್ತಿಕ ಸೇಡಿನೆ ಸಾಧನವನ್ನಾಗಿ ಕ್ರಿಮಿನಲ್ ಕಾನೂನುಗಳನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ. ಕಾನೂನು ಒಂದು ಪರಿಹಾರದ ಮಾರ್ಗವಾಗಬೇಕೇ ಹೊರತು ಆಯುಧವಾಗಬಾರದು. ಅತ್ಯಂತ ದುರ್ಬಲ ಆರೋಪಗಳ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆದ್ದರಿಂದ, ಕಾನೂನು ಪ್ರಕ್ರಿಯೆ ದುರುಪಯೋವಾಗುವುದನ್ನು ತಪ್ಪಿಸಲು ಅರ್ಜಿದಾರರ ವಿರುದ್ಧದ ಪ್ರಕರಣ ರದ್ದು ಪಡಿಸಲಾಗುತ್ತಿದೆ.
Related Articles
Thank you for your comment. It is awaiting moderation.


Comments (0)