ಯೋಗೀಶ ಗೌಡರ್ ಕೊಲೆ ಪ್ರಕರಣ; ವಿನಯ ಕುಲಕರ್ಣಿ ಜಾನೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
- by Jagan Ramesh
- January 9, 2026
- 23 Views
ಬೆಂಗಳೂರು: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ಶುಕ್ರವಾರ ಸುದೀರ್ಘ ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.
ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ನ್ಯಾಯದಾನ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿರುವ ಆಧಾರದಲ್ಲಿ ಅರ್ಜಿದಾರರಿಗೆ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತೇ ಹೊರತು ಮೆರಿಟ್ ಆಧಾರದಲ್ಲಲ್ಲ. ಜಾಮೀನು ಕೋರುವುದು ಅರ್ಜಿದಾರರ ಹಕ್ಕಾಗಿದೆ. ಸುಪ್ರೀಂಕೋರ್ಟ್ ಮತ್ತೆ ಜಾಮೀನು ಕೋರುವಂತಿಲ್ಲ ಎಂದು ಹೇಳಿಲ್ಲ. ಜಾಮೀನು ರದ್ದತಿಯೇ ಬೇರೆ, ಜಾಮೀನು ಆದೇಶ ತಳ್ಳಿಹಾಕುವುದೇ ಬೇರೆ. ಅರ್ಜಿದಾರರಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ಆಧರಿಸಿರುವ ಪಪ್ಪು ಯಾದವ್ ಪ್ರಕರಣದ ತೀರ್ಪು ಸೇರಿ ಯಾವುದೂ ಹಾಲಿ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದರು.
ಮುಂದುವರಿದು, ವಿನಯ ಕುಲಕರ್ಣಿ ಅವರು 9 ತಿಂಗಳಿಂದ ಜೈಲಿನಲ್ಲಿದ್ದಾರೆ. ತನ್ನ ಆದೇಶ ಸರಿಯಿಲ್ಲ ಎಂದು ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸಿಲ್ಲ. ವಿಚಾರಣೆಯಲ್ಲಿ ಹಸ್ತಕ್ಷೇಪದ ಆಧಾರದಲ್ಲಿ ಜಾಮೀನು ರದ್ದುಪಡಿಸಿದೆ. ಅದನ್ನು ಅರ್ಜಿದಾರರು ಪ್ರಶ್ನಿಸಲಾಗದು. ಈಗ ಎಲ್ಲ ಸಾಕ್ಷಿಗಳ ಹೇಳಿಕೆ ದಾಖಲಾತಿ ಪ್ರಕ್ರಿಯೆ ಮುಗಿದಿದೆ. ಇಬ್ಬರು ತನಿಖಾಧಿಕಾರಿಗಳ ಹೇಳಿಕೆ ದಾಖಲಿಸುವುದು ಮಾತ್ರ ಬಾಕಿ ಇದೆ. ಈಗ ಯಾವ ಕಾರಣಕ್ಕಾಗಿ ವಿನಯ ಕುಲಕರ್ಣಿ ಜೈಲಿನಲ್ಲಿರಬೇಕು? ನ್ಯಾಯದಾನ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎನ್ನಲಾದ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಸಿಬಿಐ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್ ಅವರು, ಎರಡು ಸಾಕ್ಷಿಗಳ ಜತೆ ಸಿಬಿಐ ಅಧಿಕಾರಿಗಳು ಇನ್ನೆರಡು ಹೆಚ್ಚುವರಿ ಸಾಕ್ಷಿಗಳ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ನ್ಯಾಯಪೀಠದ ಗಮನಕ್ಕೆ ತರಬಯಸುತ್ತೇನೆ. ಅರ್ಜಿದಾರರು ಹೊಸದಾಗಿ ಜಾಮೀನು ಕೋರುತ್ತಿಲ್ಲ. ಸಾಕ್ಷಿಗಳ ದಾಖಲು ಮುಗಿದಿದೆ, ಪರಿಸ್ಥಿತಿ ಬದಲಾಗಿದೆ ಜಾಮೀನು ನೀಡಬೇಕು ಎಂದು ಕೋರಿದ್ದಾರೆ. ಇದು ಸಾಧ್ಯವಿಲ್ಲ ಎಂದರು.
ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿನಯ ಕುಲಕರ್ಣಿ ಜಾಮೀನು ಅರ್ಜಿ ಕುರಿತು ತೀರ್ಪು ಕಾಯ್ದಿರಿಸಿತು.
Related Articles
Thank you for your comment. It is awaiting moderation.


Comments (0)