ರವಿಶಂಕರ್ ಗುರೂಜಿ ವಿರುದ್ಧದ ಸರ್ಕಾರಿ ಭೂಮಿ ಒತ್ತುವರಿ ಆರೋಪ; ದಾಖಲೆಗಳನ್ನು ಪರಿಶೀಲಿಸದೆ ತನಿಖೆಗೆ ತಡೆ ನೀಡಲಾಗದು ಎಂದ ಹೈಕೋರ್ಟ್
- by Jagan Ramesh
- January 8, 2026
- 25 Views
ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ವಿರುದ್ಧ ಪ್ರಕರಣದ ತನಿಖೆಗೆ ದಾಖಲೆಗಳನ್ನು ಪರಿಶೀಲಿಸದೆ ತಡೆ ನೀಡುವುದು ಸೂಕ್ತವಲ್ಲ ಎಂದು ಹೈಕೋರ್ಟ್ ಹೇಳಿದೆ.
ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (ಬಿಎಂಟಿಎಫ್) ದಾಖಲಿಸಿರುವ ಪ್ರಕರಣ ರದ್ದು ಕೋರಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಸಲ್ಲಿಸಿದ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಈ ಹಂತದಲ್ಲಿ ಪ್ರಕರಣದ ತನಿಖೆಗೆ ತಡೆ ನೀಡಿದರೆ ವಿಭಾಗೀಯ ನ್ಯಾಯಪೀಠದ ಅಭಿಪ್ರಾಯಗಳಿಗೆ ವಿರುದ್ಧವಾಗಲಿದೆ. ಆದ್ದರಿಂದ, ಯಾವುದೇ ದಾಖಲೆಗಳನ್ನು ನೋಡದೇ ಪ್ರಕರಣಕ್ಕೆ ತಡೆ ನೀಡುವುದು ಅಥವಾ ಆರ್ಜಿದಾರರ ಪರವಾಗಿ ರಕ್ಷಣೆಯ ಆದೇಶ ನೀಡುವುದು ಸೂಕ್ತವಲ್ಲ ಎಂದು ಹೇಳಿತು.
ಆದರೆ, ತನಿಖೆಯ ನೋಟಿಸ್ ಬಂದರೆ, ಪ್ರಕರಣವನ್ನು ತುರ್ತು ವಿಚಾರಣೆಗೆ ಪರಿಗಣಿಸಲು ಅರ್ಜಿದಾರರು ಮನವಿ ಸಲ್ಲಿಸಬಹುದು ಎಂದು ತಿಳಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ದೂರುದಾರ ಎಸ್. ಲಕ್ಷ್ಮಣಗೌಡಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನಕುಮಾರ್ ವಾದ ಮಂಡಿಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ವಿಭಾಗೀಯ ನ್ಯಾಯಪೀಠ ನೀಡಿದ ಆದೇಶ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿದ್ದವರ ಚಟುವಟಿಕೆಗೂ ಈಗಿನ ಅರ್ಜಿದಾರರಿಗೂ (ಗುರೂಜಿ) ಯಾವುದೇ ಸಂಬಂಧವಿಲ್ಲ. ಅರ್ಜಿದಾರರು ಯಾವುದೇ ಆಸ್ತಿಯೂ ಹೊಂದಿಲ್ಲ, ಯಾವುದೇ ಜಾಗವನ್ನೂ ಅತಿಕ್ರಮಣ ಮಾಡಿಲ್ಲ. ಆದ್ದರಿಂದ, ಪ್ರಕರಣಕ್ಕೆ ತಡೆ ನೀಡಬೇಕು ಎಂದು ಕೋರಿದರು.
Related Articles
Thank you for your comment. It is awaiting moderation.


Comments (0)