ಷರತ್ತಿಗೆ ಬದ್ಧವಾಗಿರುವುದಾಗಿ ನೀಡಿದ್ದ ಮುಚ್ಚಳಿಕೆಯನ್ನು ವಿನಯ ಕುಲಕರ್ಣಿ ಉಲ್ಲಂಘಿಸಿದ್ದಾರೆ – ಸಿಬಿಐ
- by Jagan Ramesh
- January 8, 2026
- 19 Views
ಬೆಂಗಳೂರು: ಕೊಲೆ ಪ್ರಕರಣದ ಸಾಕ್ಷಿಗಳನ್ನು ತಿರುಚುವುದಿಲ್ಲ ಎಂಬ ಮುಚ್ಚಳಿಕೆಯನ್ನು ಶಾಸಕ ವಿನಯ್ ಕುಲಕರ್ಣಿ ನ್ಯಾಯಾಲಯಕ್ಕೆ ನೀಡಿದ್ದಾರೆಯೇ ಹೊರತು ಪ್ರಾಸಿಕ್ಯೂಷನ್‌ಗೆ ಅಲ್ಲ. ನ್ಯಾಯಾಲಯ ವಿಧಿಸುವ ಎಲ್ಲ ಷರತ್ತಿಗೆ ಬದ್ದವಾಗಿರುವುದಾಗಿ ಮುಚ್ಚಳಿಕೆ ನೀಡಿ, ಅವರೇ ಅದನ್ನು ಉಲ್ಲಂಘಿಸಿದ್ದಾರೆ ಎಂದು ಹೈಕೋರ್ಟ್‌ಗೆ ಸಿಬಿಐ ತಿಳಿಸಿತು.
ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್ ವಾದ ಮಂಡಿಸಿ, ಸಾಕ್ಷಿಗಳ ವಿಚಾರಣೆಯಾಗಿರುವುದು ಬದಲಾದ ಪರಿಸ್ಥಿತಿ ಎಂದಾದರೆ ಆ ಸಾಕ್ಷಿಗಳು ಏನು ಹೇಳಿವೆ ಎಂಬುದನ್ನು ಪರಿಶೀಲಸದೇ ಜಾಮೀನು ಮಂಜೂರು ಮಾಡಲು ಆಧಾರವಾಗಲ್ಲ. ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಜಾಮೀನು ರದ್ದುಪಡಿಸಿದ ಬಳಿಕ ಏನಾಗಲಿದೆ ಎಂಬ ಅಂಶಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ತೀರ್ಪುಗಳಿಲ್ಲ ಎಂದರು.
ಇದೇ ವೇಳೆ, ಪ್ರಕರಣದಲ್ಲಿ ಇನ್ನೂ 3 ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ ಎಂಬ ಮಾಹಿತಿ ಒಳಗೊಂಡ ಮೆಮೊ ಸಲ್ಲಿಸಿದ ಪ್ರಸನ್ನಕುಮಾರ್, ಮೆರಿಟ್ ಮೇಲೆ ನ್ಯಾಯಾಲಯಗಳು ವಿನಯ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿವೆ ಎಂಬ ವಿಚಾರವನ್ನೂ ನ್ಯಾಯಪೀಠದ ಗಮನಕ್ಕೆ ತಂದರು.
ಪ್ರಕರಣದಲ್ಲಿ ಎಲ್ಲ ಸಾಕ್ಷಿಗಳು ಪ್ರತಿಕೂಲವಾಗಿದ್ದಾವೆಯೇ? ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಸನ್ನಕುಮಾರ್, ಎಲ್ಲರೂ ಅಲ್ಲ. ಕೆಲವರು ಬೆಂಬಲಿಸಿದ್ದಾರೆ ಮತ್ತೆ ಕೆಲವರು ವಿರುದ್ಧವಾಗಿದ್ದಾರೆ. ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿ ಹೇಳಿಕೆ ನೀಡಿದ್ದ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸಿಪಿ ಶ್ರೇಣಿಯ ಅಧಿಕಾರಿ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಾರೆ. ಆರಂಭದಲ್ಲಿ ಡಮ್ಮಿ ಆರೋಪಿಗಳು ಶರಣಾಗಿದ್ದರು. ಸಿಬಿಐ ತನಿಖೆ, ಆರೋಪ ಪಟ್ಟಿ ರದ್ದತಿ ಎಲ್ಲವನ್ನೂ ಪ್ರಶ್ನಿಸಿದ್ದ ವಿನಯ ಕುಲಕರ್ಣಿ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತ್ತು. ಇದನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿದೆ ಎಂದು ವಿವರಿಸಿದರು.
ಜಾಮೀನು ಒಂದು ವಿನಾಯಿತಿಯಾಗಿದ್ದು, ಆರೋಪಿ ವಿನಯ ಕುಲಕರ್ಣಿ ಅವರಿಗೆ ಅದನ್ನು ನೀಡಲಾಗಿತ್ತು. ಷರತ್ತು ಉಲ್ಲಂಘಿಸಿರುವುದರಿಂದ ಅವರು ಹೊರಗಿರಲು ಅರ್ಹರಲ್ಲ. ಅರ್ಜಿದಾರರಿಗೆ ನೀಡಿದ್ದ ವಿನಾಯಿತಿಗೆ ಅಪಚಾರವಾಗಿದೆ. ಆದ್ದರಿಂದ, ವಿನಯ ಕುಲಕರ್ಣಿ ಅವರಿಗೆ ಜಾಮೀನು ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಸಿಬಿಐ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)