ವಿವಾಹವಾಗುವುದಾಗಿ ನಂಬಿಸಿ ವಿಚ್ಛೇದಿತೆಯಿಂದ ಹಣ ಪಡೆದು ವಂಚಿಸಿದ ಆರೋಪ; ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ‘ಡಿವೋರ್ಸಿ ಮ್ಯಾಟ್ರಿಮೋನಿ’ ಮೂಲಕ ಪರಿಚಯವಾದ ವಿಚ್ಛೇದಿತ ಮಹಿಳೆಯನ್ನು ಮದುವೆಯಾಗಿ ಹೊಸ ಜೀವನ ನೀಡುವುದಾಗಿ ಭರವಸೆ ನೀಡಿ, ನಂತರ ನಿವೇಶನ ನೋಂದಣಿ ನೆಪದಲ್ಲಿ 2.80 ಲಕ್ಷ ರೂ. ಪಡೆದು ವಂಚಿಸಿದ ಆರೋಪ ಹೊತ್ತಿರುವ ವ್ಯಕ್ತಿಯೋರ್ವನ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಚಿಕ್ಕಬಳ್ಳಾಪುರ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಬೆಂಗಳೂರಿನ ಸೀತಾರಾಮಪಾಳ್ಯದ ನಿವಾಸಿ ಇ. ಸುರೇಶ್‌ (59) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ದೂರುದಾರ ಮಹಿಳೆ ಹಣ ಕಳುಹಿಸಿದ್ದ ಸುರೇಶ್‌ ಬ್ಯಾಂಕ್‌ ಖಾತೆಗಳ ವಿವರಗಳನ್ನು ನೀಡಿದ್ದಾರೆ. ಸುರೇಶ್‌ ಖಾತೆಗೆ ಆಕೆ ಹಣ ವರ್ಗಾಯಿಸಿದ್ದಾರೆ. ದೂರುದಾರೆಯನ್ನು ಮದುವೆಯಾಗಿ, ಹೊಸ ಜೀವನ ನೀಡುವುದಾಗಿ ಭರವಸೆ ನೀಡಿ, ನಿವೇಶನ ನೋಂದಣಿ ನೆಪದಲ್ಲಿ ಹಣ ಪಡೆದಿದ್ದಲ್ಲದೆ, ಹಣ ಹಿಂದಿರುಗಿಸುವಂತೆ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮದುವೆಯಾಗಲು ನಿರಾಕರಿಸಿದ್ದ ಆರೋಪ ಸುರೇಶ್‌ ಮೇಲಿದೆ. ಪ್ರಕರಣದ ತನಿಖೆ ನಡೆಯುತ್ತಿರುವ ಈ ಹಂತದಲ್ಲಿ ತನ್ನ ವಿರುದ್ಧದ ಆರೋಪಗಳು ಸುಳ್ಳು ಎಂಬ ಸುರೇಶ್‌ ವಾದ ಒಪ್ಪಿ ಎಫ್‌ಐಆರ್‌ ರದ್ದುಪಡಿಸಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಇದೇ ವೇಳೆ, ಪ್ರಕರಣದ ಪಕ್ಷಕಾರರು (ಆರೋಪಿ ಮತ್ತು ದೂರುದಾರೆ) ವಿವಾದವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಬಯಸಿದರೆ ಆ ಕುರಿತು ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ದೂರುದಾರೆಯ ಪರ ವಕೀಲೆ ಎಚ್. ಅನುಷಾ ದೇವಿ ವಾದ ಮಂಡಿಸಿದ್ದರು.

Related Articles

Comments (0)

Leave a Comment