ಬೆಸ್ಕಾಂ ಉಗ್ರಾಣದಲ್ಲಿ ಸಾಮಗ್ರಿ ಕೊರತೆ ಸೃಷ್ಟಿಸಿ ಆರ್ಥಿಕ ನಷ್ಟ; ಅಂಗವಿಕಲ ಆರೋಪಿಗೆ ನಿರೀಕ್ಷಣಾ ಜಾಮೀನು

ಬೆಂಗಳೂರು: ದಾವಣಗೆರೆ ಜಿಲ್ಲೆಯ ಹರಿಹರದ ಬೆಸ್ಕಾಂ ಉಗ್ರಾಣದಲ್ಲಿ 3 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸರಕು-ಸಾಮಗ್ರಿಯ ಕೊರತೆ ಸೃಷ್ಟಿಸಿ, ಆರ್ಥಿಕ ನಷ್ಟ ಉಂಟು ಮಾಡಿದ ಪ್ರಕರಣದ ಆರೋಪಿಯ ಅಂಗವೈಕಲ್ಯವನ್ನು ಪರಿಗಣಿಸಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಆರೋಪಿ ಜಿ.ಎನ್‌. ಅರುಣ್‌ ಕುಮಾರ್‌ (37) ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ಪುರಸ್ಕರಿಸಿದೆ.

ಆರ್ಥಿಕ ನಷ್ಟ ಉಂಟು ಮಾಡಿದ ಆರೋಪ ಅರ್ಜಿದಾರನ ಮೇಲಿದೆ. ಅಂಗವಿಕಲನಾಗಿರುವ ತಾನು ಪ್ರಕರಣದ ತನಿಖೆಗೆ ಸಹಕರಿಸುವುದಾಗಿಯೂ, ನ್ಯಾಯಾಲಯ ವಿಧಿಸುವ ಯಾವುದೇ ಷರತ್ತುಗಳನ್ನು ಪಾಲಿಸುವುದಾಗಿಯೂ ಆರೋಪಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾನೆ. ಗಲ್ಲು ಅಥವಾ ಜೀವಾವಧಿ ಶಿಕ್ಷೆ ವಿಧಿಸುವಂತಹ ಅಪರಾಧವೆಸಗಿದ ಆರೋಪ ಅರ್ಜಿದಾರನ ಮೇಲಿಲ್ಲ. ಕ್ರಿಮಿನಲ್‌ ಚಟುವಟಿಕೆಯ ಹಿನ್ನೆಲೆಯನ್ನೂ ಆತ ಹೊಂದಿಲ್ಲ. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಸಂಬಂಧ ಅರ್ಜಿದಾರರನ್ನು ಬಂಧಿಸಿದರೆ, ಹರಿಹರ ಠಾಣೆ ಪೊಲೀಸರು ಆತನಿಂದ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಶ್ಯೂರಿಟಿ ಪಡೆದು ಜಾಮೀನು ಮೇಲೆ ಬಿಡುಗಡೆ ಮಾಡಬೇಕು. ಆರೋಪಿ ತನಿಖೆಗೆ ಸಹಕರಿಸಬೇಕು. ದೂರುದಾರ ಅಥವಾ ಸಾಕ್ಷಿಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆದರಿಸಬಾರದು. ಎರಡು ತಿಂಗಳ ಕಾಲ ಅಥವಾ ಪ್ರಕರಣದ ಅಂತಿಮ ತನಿಖಾ ವರದಿ ಸಲ್ಲಿಸುವವರೆಗೆ ಪ್ರತಿ ತಿಂಗಳ ಮೊದಲ ಹಾಗೂ ಎರಡನೇ ಭಾನುವಾರದಂದು ತನಿಖಾಧಿಕಾರಿಯ ಮುಂದೆ ಆರೋಪಿ ಹಾಜರಾಗಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣವೇನು?
ಅರ್ಜಿದಾರ ಆರೋಪಿ ಹರಿಹರದ ಬೆಸ್ಕಾಂ ಉಗ್ರಾಣದಲ್ಲಿ ಸಹಾಯಕ ಉಗ್ರಾಣ ಪಾಲಕನಾಗಿ (ಅಸಿಸ್ಟೆಂಟ್‌ ಸ್ಟೋರ್‌ ಕೀಪರ್‌) ಕೆಲಸ ಮಾಡುತ್ತಿದ್ದಾರೆ. 2025ರ ಸೆಪ್ಟೆಂಬರ್ 29ರಂದು ಹರಿಹರ ಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ಬೆಸ್ಕಾಂ ಕಾರ್ಯಕಾರಿ ಇಂಜಿನಿಯರ್‌ ರವಿ ಕಿರಣ್‌, 2024ರ ಮೇ 18ರಿಂದ ಮೇ 31ರ ಮಧ್ಯೆ ಉಗ್ರಾಣದಲ್ಲಿ ಆಂತರಿಕ ಲೆಕ್ಕ ಪರಿಶೋಧನೆ ನಡೆದಿತ್ತು. ಈ ಸಂದರ್ಭದಲ್ಲಿ ಅರುಣ್‌ ಕರ್ತವ್ಯಕ್ಕೆ ಗೈರಾಗಿದ್ದ. ಲೆಡ್ಜರ್‌ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ 56,67,864 ರೂ. ಮೌಲ್ಯದ 89,270 ಲೀಟರ್‌ ಪರಿವರ್ತಕ ಎಣ್ಣೆ ಸೇರಿ 3 ಕೋಟಿಗೂ ಅಧಿಕ ಮೌಲ್ಯದ ಸರಕು-ಸಾಮಗ್ರಿಗಳ ಕೊರತೆಯಾಗಿದೆ ಎಂಬುದು ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.

Related Articles

Comments (0)

Leave a Comment