ಉದ್ಯಾನಕ್ಕಾಗಿ ಮೀಸಲಿಟ್ಟ ಜಾಗದ ಸಂರಕ್ಷಣೆ ಹೊಣೆ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳದ್ದು; ಹೈಕೋರ್ಟ್
- by Prashanth Basavapatna
- January 1, 2026
- 30 Views
ಬೆಂಗಳೂರು: ಉದ್ಯಾನಕ್ಕೆಂದು ಒಮ್ಮೆ ಜಾಗ ಮೀಸಲಿಟ್ಟರೆ, ಅದನ್ನು ಸಂರಕ್ಷಣೆ ಮಾಡುವುದು ಜಿಲ್ಲಾಧಿಕಾರಿ ಮತ್ತು ಎಲ್ಲ ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಗ್ರಾಮದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅನುಮತಿರುವ ಪಾಂಡವಪುರ ವಿಭಾಗಾಧಿಕಾರಿಯ ಕ್ರಮ ಆಕ್ಷೇಪಿಸಿ ಅನುವಿನಕಟ್ಟೆ ಗ್ರಾಮದ ನಿವಾಸಿಗಳಾದ ಸಿ. ಶ್ರೀನಿವಾಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರು ಹೇಳುತ್ತಿರುವ ಜಾಗ ಕೆ.ಆರ್. ಪೇಟೆ ಗ್ರಾಮದ ಸರ್ವೇ ನಂಬರ್ 244ರಲ್ಲಿನ 6 ಎಕರೆ 32 ಗುಂಟೆ ಜಾಗ ಉದ್ಯಾನಕ್ಕೆ ಮೀಸಲಿಡಲಾಗಿದೆ ಎಂಬುದು ಕಂದಾಯ ದಾಖಲೆಗಳಿಂದ ದೃಢಪಡುತ್ತದೆ. ಕರ್ನಾಟಕ ಭೂಕಂದಾಯ ಕಾಯ್ದೆ-1964ರ ಸೆಕ್ಷನ್ 67ರ ಅಡಿಯಲ್ಲಿ ಉದ್ಯಾನ ಜಾಗವನ್ನು ಸಂರಕ್ಷಣೆ ಮಾಡುವುದು ಜಿಲ್ಲಾಧಿಕಾರಿಯ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಕರ್ನಾಟಕ ಉದ್ಯಾನ, ಆಟದ ಮೈದಾನ ಮತ್ತು ಮುಕ್ತ ಪ್ರದೇಶಗಳ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ-1985 ಅಡಿಯಲ್ಲಿ ಉದ್ಯಾನ ಮತ್ತು ಮುಕ್ತ ಪ್ರದೇಶಗಳನ್ನು ಸಂರಕ್ಷಣೆ ಮಾಡುವುದು ಎಲ್ಲಾ ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಅದರಂತೆ, ಮಂಡ್ಯ ಜಿಲ್ಲಾಧಿಕಾರಿ ಮತ್ತು ಪಾಂಡವಪುರ ಉಪ ವಿಭಾಗಾಧಿಕಾರಿಯು ವಿವಾದಿತ ಜಾಗವನ್ನು ಉದ್ಯಾನ ಅಭಿವೃದ್ಧಿಗೆ ಮೀಸಲಿಡಬೇಕು ಎಂಬ ಅರ್ಜಿದಾರರ ಮನವಿಯನ್ನು 3 ತಿಂಗಳಲ್ಲಿ ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಆಕ್ಷೇಪವೇನು?
ಕೆ.ಆರ್. ಪೇಟೆ ಗ್ರಾಮದ ಸರ್ವೇ ನಂಬರ್ 244ರಲ್ಲಿ ಕೆರೆ-ಕುಂಟೆ ಪ್ರದೇಶವಿದೆ. ಅದರಲ್ಲಿ 6 ಎಕರೆ 32 ಗುಂಟೆ ಜಾಗವನ್ನು ನಿಯಮಗಳನ್ನು ಉಲ್ಲಂಘಿಸಿ ಉದ್ಯಾನ ಅಭಿವೃದ್ಧಿಪಡಿಸಲು 1974ರ ನ.27ರಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಅನುಮತಿದ್ದರು. ನಂತರ ಕೆ.ಆರ್. ಪೇಟೆ ಪುರಸಭೆಯು ಉದ್ಯಾನ ಅಭಿವೃದ್ಧಿಗೆ ಮೀಸಲಿದ್ದ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿಸಿದ್ದಾರೆ. ಇದರಿಂದ ಈ ಜಾಗವನ್ನು ಉದ್ಯಾನ ಅಭಿವೃದ್ದಿಗೆ ಮೀಸಲು ಇಡಬೇಕು ಎಂದು ಕೋರಿ 2024ರ ನ.13ರಂದು ತಾವು ಸಲ್ಲಿಸಿದ ಮನವಿಪತ್ರವನ್ನು ಮಂಡ್ಯ ಜಿಲ್ಲಾಧಿಕಾರಿ ಮತ್ತು ಪಾಂಡವಪುರ ಉಪ ವಿಭಾಗಧಿಕಾರಿ ಪರಿಗಣಿಸಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಪುರಸಭೆ ಪರ ವಕೀಲರು, ಅರ್ಜಿದಾರರು ಪ್ರಶ್ನಿಸಿರುವ ಭೂಮಿಯ ಭಾಗವೊಂದನ್ನು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ 1984ರಲ್ಲೇ ಮಂಜೂರು ಮಾಡಲಾಗಿತ್ತು. ಅಂದಿನಿಂದಲೂ ಬಸ್ ನಿಲ್ದಾಣವಿದ್ದು, ಈ ಹಂತದಲ್ಲಿ ಅರ್ಜಿದಾರರ ಮನವಿ ಪರಿಗಣಿಸಿ ಜಾಗವನ್ನು ಉದ್ಯಾನಕ್ಕಾಗಿ ಮರುಸ್ಥಾಪಿಸಲಾಗದು ಎಂದಿದ್ದರು.
ವಿವಾದಿತ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಪರ ವಕೀಲರು, ವಿವಾದಿತ ಜಾಗವನ್ನು ಜಿಲ್ಲಾಧಿಕಾರಿಯ ಅನುಮತಿಯೊಂದಿಗೆ ಹಿಂದಿನ ಮಂಡಲ ಪಂಚಾಯತಿಯಿಂದ ಕಾನೂನುಬದ್ಧವಾಗಿಯೇ ಜಿಲ್ಲಾಧಿಕಾರಿಯಿಂದ ಖರೀದಿಸಲಾಗಿದೆ. ಸದ್ಯ ಜಾಗ ತಮ್ಮ ಸ್ವಾಧೀನದಲ್ಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
Related Articles
Thank you for your comment. It is awaiting moderation.


Comments (0)