ಮಗು ತನ್ನದಲ್ಲ ಎಂದ ಶಿಕ್ಷಕ; ಡಿಎನ್ಎ ಪರೀಕ್ಷೆ ಆದೇಶ ರದ್ದತಿಗೆ ಹೈಕೋರ್ಟ್ ನಕಾರ
- by Ramya B T
- December 30, 2025
- 38 Views
ಬೆಂಗಳೂರು/ಕಲಬುರಗಿ: ಪಿತೃತ್ವ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಡಿಎನ್ಎ ಪರೀಕ್ಷೆ ನಡೆಸಲು ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಮಹಿಳೆ ತನ್ನ ಹೆಂಡತಿಯಲ್ಲ ಮತ್ತು ಆಕೆಯ ಮಗಳು ತನ್ನ ಮಗುವಲ್ಲ ಎಂದು ಶಾಲಾ ಶಿಕ್ಷಕರೊಬ್ಬರು ವಾದಿಸಿರುವ ಹಿನ್ನೆಲೆಯಲ್ಲಿ ವ್ಯಾಜ್ಯ ಬಗೆಹರಿಸಲು ಡಿಎನ್ಎ ಪರೀಕ್ಷೆ ನಿರ್ಣಾಯಕವಾಗಿದೆ ಎಂದು ಆದೇಶಿಸಿದೆ.
ಡಿಎನ್ಎ ಪರೀಕ್ಷೆಗೊಳಪಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯ ಶಾಲಾ ಶಿಕ್ಷಕ ಚಿದಾನಂದ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಮದುವೆ ಮತ್ತು ಪಿತೃತ್ವದಂತಹ ಮೂಲಭೂತ ಸಂಗತಿಗಳು ವಿವಾದಕ್ಕೊಳಗಾದಾಗ, ಪರಿಣಾಮಕಾರಿ ತೀರ್ಪು ನೀಡಲು ಮೇಲ್ಮನವಿ ನ್ಯಾಯಾಲಯವು ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಡಿಎನ್ಎ ಪರೀಕ್ಷಾ ಆದೇಶವು ಚಿದಾನಂದ್ ಎತ್ತಿರುವ ವಿವಾದಗಳನ್ನು ನಿರ್ಣಾಯಕವಾಗಿ ಪರಿಹರಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ, ಆ ಆದೇಶ ಯಾವುದೇ ಪೂರ್ವಾಗ್ರಹ ಪೀಡಿತವಾಗಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪರಿಷ್ಕರಣಾ ಪ್ರಕ್ರಿಯೆಗಳಲ್ಲಿ ಡಿಎನ್ಎ ಪರೀಕ್ಷೆಯ ನಿರ್ದೇಶನ ನೀಡುವ ಅಧಿಕಾರ ಹೊಂದಿಲ್ಲ ಎಂಬ ಚಿದಾನಂದ್ ಅವರ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಹೈಕೋರ್ಟ್, ಆ ಆದೇಶದಿಂದ ಅರ್ಜಿದಾರರಿಗೆ ಪ್ರಯೋಜನಕಾರಿಯಾಗಿದೆ ಮತ್ತು ವಿವಾದಿತ ವಾಸ್ತವಿಕ ಸಮಸ್ಯೆಗಳನ್ನು ಪರಿಹರಿಸಲು ಡಿಎನ್ಎ ಪರೀಕ್ಷೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದೆ.
ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿರುವ ಹೈಕೋರ್ಟ್, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷ ನ್ 125ರ ಅಡಿಯಲ್ಲಿ, ಪತಿಯು ವೈವಾಹಿಕ ಸಂಬಂಧ ಅಥವಾ ಮಗುವಿನ ಪಿತೃತ್ವದ ಬಗ್ಗೆ ಪ್ರಶ್ನೆ ಎತ್ತಿದ ಸಂದರ್ಭದಲ್ಲಿ ನ್ಯಾಯಾಲಯವು ಡಿಎನ್ಎ ಪರೀಕ್ಷೆಗೆ ಆದೇಶಿಸುವ ಅಧಿಕಾರವನ್ನು ಹೊಂದಿದೆ. ಡಿಎನ್ಎ ಪ್ರೊಫೈಲಿಂಗ್ನಂತಹ ವೈಜ್ಞಾನಿಕ ಪುರಾವೆಗಳು ಲಭ್ಯವಿದ್ದಾಗ, ನ್ಯಾಯಾಲಯವು ಸತ್ಯದ ಕಣ್ಣು ಮುಚ್ಚುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:
ಮಹಿಳೆಯೊಬ್ಬರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು 2025ರ ಜುಲೈ 10ರಂದು ಪುರಸ್ಕರಿಸಿದ್ದ ವಿಜಯಪುರದ 4ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಹಿಳೆಯನ್ನು ತನ್ನ ಹೆಂಡತಿಯಲ್ಲ ಮತ್ತು ಬಾಲಕಿ ತನ್ನ ಮಗಳಲ್ಲ ಎಂದು ಚಿದಾನಂದ್ ಹೇಳಿಕೊಂಡಿದ್ದರಿಂದ ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ಚಿದಾನಂದ್ಗೆ ನಿರ್ದೇಶಿಸಿತ್ತು.
ಅದಕ್ಕೂ ಮೊದಲು, ಸಿಆರ್ಪಿಸಿ ಸೆಕ್ಷನ್ 125ರ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯ, ಮಹಿಳೆ ಮತ್ತು ಮಗು ಇಬ್ಬರೂ ಹಕ್ಕುದಾರರಿಗೆ ಮಾಸಿಕ 5 ಸಾವಿರ ರೂ. ಜೀವನಾಂಶ ಪಾವತಿಸುವಂತೆ ಚಿದಾನಂದ್ಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಚಿದಾನಂದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ಡಿಎನ್ಎ ಪರೀಕ್ಷೆಗೆ ಆದೇಶಿಸಿದ್ದ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
Related Articles
Thank you for your comment. It is awaiting moderation.


Comments (0)