- ಟ್ರಯಲ್ ಕೋರ್ಟ್
- Like this post: 3
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಾಸಕ ಎಚ್.ಡಿ. ರೇವಣ್ಣ ನಿರಾಳ; ಆರೋಪಮುಕ್ತಗೊಳಿಸಿದ ನ್ಯಾಯಾಲಯ
- by Jagan Ramesh
- December 29, 2025
- 29 Views
ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (ಐಪಿಸಿ ಸೆಕ್ಷನ್ 354ಎ) ಪ್ರಕರಣದಿಂದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಆರೋಪಮುಕ್ತಗೊಳಿಸಿ ಬೆಂಗಳೂರಿನ ಎಸಿಜೆಎಂ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಇದರಿಂದ, ಎಚ್.ಡಿ. ರೇವಣ್ಣ ನಿರಾಳರಾಗಿದ್ದಾರೆ.
ದೂರು ದಾಖಲಿಸಲು ಅಥವಾ ಪ್ರಾಸಿಕ್ಯೂಷನ್ ಆರಂಭಿಸಲು ಸಾಕಷ್ಟು ವಿಳಂಬವಾಗಿರುವ ಕಾರಣಕ್ಕೆ ಪ್ರಕರಣದ ಕಾಗ್ನೈಜೆನ್ಸ್ ತೆಗೆದುಕೊಳ್ಳಲು (ವಿಚಾರಣೆಗೆ ಪರಿಗಣಿಸಲು) ನಿರಾಕರಿಸಿರುವ ನಗರದ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಕೆ.ಎನ್. ಶಿವಕುಮಾರ್ ಅವರು, ಎಚ್.ಡಿ. ರೇವಣ್ಣ ಅವರ ವಿರುದ್ಧದ ಆರೋಪಗಳನ್ನು ಕೈಬಿಟ್ಟು ಆದೇಶಿಸಿದ್ದಾರೆ.
ಪ್ರಕರಣದ ಮೊದಲ ಆರೋಪಿಯಾಗಿರುವ ಎಚ್.ಡಿ. ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354ಎ ಅಡಿಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿದೆ. ಆದರೆ, ಈ ಅಪರಾಧಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ಅಥವಾ ಪ್ರಾಸಿಕ್ಯೂಷನ್ ಆರಂಭಿಸಲು ಸಾಕಷ್ಟು ವಿಳಂಬವಾಗಿದ್ದು, ಈ ವಿಳಂಬವನ್ನು ಮನ್ನಿಸಲು ಇದು ಸೂಕ್ತ ಪ್ರಕರಣವಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಪ್ರಕರಣದ ಕಾಗ್ನೈಜೆನ್ಸ್ ತೆಗೆದುಕೊಳ್ಳಲು ನಿರಾಕರಿಸಿ, ಎಚ್.ಡಿ. ರೇವಣ್ಣ ವಿರುದ್ಧದ ಆರೋಪಗಳನ್ನು ಕೈಬಿಟ್ಟಿದೆ.
ವಿಚಾರಣಾ ಕೋರ್ಟ್‌ಗೆ ಪ್ರಕರಣ ಮರಳಿಸಿದ್ದ ಹೈಕೋರ್ಟ್:
ಮನೆ ಕೆಲಸದ ಮಹಿಳೆಯ ಘನತೆಗೆ ಧಕ್ಕೆಯುಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಎಚ್.ಡಿ. ರೇವಣ್ಣ ವಿರುದ್ಧದ ಪ್ರಕರಣದಲ್ಲಿ ಕಾಗ್ನೈಜೆನ್ಸ್ (ವಿಚಾರಣೆಗೆ ಪರಿಗಣಿಸಿದ) ತೆಗೆದುಕೊಂಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು 2025ರ ನವೆಂಬರ್ 19ರಂದು ರದ್ದುಪಡಿಸಿದ್ದ ಹೈಕೋರ್ಟ್, ಲೈಂಗಿಕ ದೌರ್ಜನ್ಯ ಆರೋಪವನ್ನು ಪರಿಗಣಿಸಲು ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಮರಳಿಸಿತ್ತು.
ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಎಚ್. ಡಿ. ರೇವಣ್ಣ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354ರ (ಮಹಿಳೆಯ ಘನತೆಗೆ ಚ್ಯುತಿ) ಅಡಿ ಕಾಗ್ನೈಜೆನ್ಸ್ ತೆಗೆದಕೊಂಡು 42ನೇ ಎಸಿಜೆಎಂ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿತ್ತು. ಆದರೆ, ಐಪಿಸಿ 354ಎ (ಲೈಂಗಿಕ ದೌರ್ಜನ್ಯ) ಅಡಿ ಸೂಕ್ತ ಆದೇಶ ಹೊರಡಿಸಲು ಪರಿಗಣಿಸುವಂತೆ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿತ್ತು. ಇದೀಗ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ಕಾಗ್ನೈಜೆನ್ಸ್ ತೆಗೆದುಕೊಳ್ಳಲು ವಿಚಾರಣಾ ನ್ಯಾಯಾಲಯ ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ:
ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅವರ ಮಗ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ 2024ರ ಏಪ್ರಿಲ್ 28ರಂದು ಪ್ರಕರಣ ದಾಖಲಾಗಿತ್ತು.
ಸಂತ್ರಸ್ತೆಯ ದೂರು ಆಧರಿಸಿ ಐಪಿಸಿ ಸೆಕ್ಷನ್ 354ಎ, 354ಡಿ, 506, 509ರ ಅಡಿ ಪ್ರಕರಣ ದಾಖಲಿಸಲಾಗಿದ್ದು ರೇವಣ್ಣ ಅವರನ್ನು ಮೊದಲನೇ ಆರೋಪಿ ಹಾಗೂ ಪ್ರಜ್ವಲ್ ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.
ರೇವಣ್ಣ ಅವರು ಪತ್ನಿ ಭವಾನಿ ಮನೆಯಲ್ಲಿ ಇಲ್ಲದ ವೇಳೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತಿದ್ದರು. ಅಲ್ಲದೆ ನನ್ನ ಮಗಳಿಗೂ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದನೆ ನೀಡುತ್ತಿದ್ದು ಮಗಳು ಹೆದರಿ ನಂಬರ್ ಬ್ಲಾಕ್ ಮಾಡಿಕೊಂಡಿದ್ದಳು. ಇದರಿಂದ ನಾನು ಕೆಲಸ ತೊರೆದಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು.
ಪ್ರಜ್ವಲ್ ರೇವಣ್ಣ ಅವರು ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಹಾಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಒಬ್ಬ ಮಹಿಳೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಆಕೆಯೊಂದಿಗೆ ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯದ ವೀಡಿಯೊ ನೋಡಿ ಭಯವಾಗಿದ್ದು ನನ್ನ ಗಂಡ ಕೂಡ ನನ್ನ ಶೀಲ ಶಂಕಿಸುತ್ತಿದ್ದಾರೆ. ವೀಡಿಯೊ ಬಹಿರಂಗಗೊಂಡರೆ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ, ಮಾನಸಿಕ ಹಿಂಸೆ ಆಗಿದೆ ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದರು.
ಜೀವ ಭಯ ಇರುವುದರಿಂದ ನನಗೆ ಹಾಗೂ ನನ್ನ ಮಗಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಿದ್ದರು.
ಈ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಸಂತ್ರಸ್ತೆಯ ಘನತೆಗೆ ಹಾನಿ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಉಳಿಸಲಾಗಿದ್ದು, ಪ್ರಜ್ವಲ್ ವಿರುದ್ಧ ಅತ್ಯಾಚಾರ ಆರೋಪವನ್ನು ಆನಂತರ ಸೇರ್ಪಡೆ ಮಾಡಲಾಗಿದೆ. ಈ ಮಧ್ಯೆ, ಸಂತ್ರಸ್ತೆಯನ್ನು ಅಪಹರಿಸಿದ ಸಂಬಂಧ ರೇವಣ್ಣ, ಅವರ ಪತ್ನಿ ಭವಾನಿ ಸೇರಿದಂತೆ 9 ಮಂದಿ ವಿರುದ್ಧ ಕೆ.ಆರ್. ಪೇಟೆಯಲ್ಲಿ ಬೇರೊಂದು ಪ್ರಕರಣ ದಾಖಲಾಗಿದೆ. ಇದರಲ್ಲಿ ರೇವಣ್ಣ ಮೊದಲ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ.
Related Articles
Thank you for your comment. It is awaiting moderation.


Comments (0)