ಬಿಕ್ಲು ಶಿವ ಕೊಲೆ ಪ್ರಕರಣ; ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು: ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ, ಶಾಸಕರಿಗೆ ಬಂಧನ ಭೀತಿ ಎದುರಾಗಿದೆ.

ಪ್ರಕರಣದ 5ನೇ ಆರೋಪಿ ಬಿ.ಎ. ಬಸವರಾಜ ಅಲಿಯಾಸ್ ಬೈರತಿ ಬಸವರಾಜ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಮಂಗಳವಾರ ವಜಾಗೊಳಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಸೇರಿ ಐವರು ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೊಕಾ) ಅನ್ವಯಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಇದೇ ಡಿಸೆಂಬರ್ 19ರಂದು ರದ್ದುಪಡಿಸಿದ್ದ ಹೈಕೋರ್ಟ್, ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿತ್ತು.

ಕೊಲೆ ಪ್ರಕರಣದಲ್ಲಿ ತನಿಖೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದ್ದು, ಹೀನ ಕೃತ್ಯದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಮೂಲಕ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಆದ್ದರಿಂದ, ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿ ತಿರಸ್ಕರಿಸಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿತ್ತು.

ಹೈಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಬೈರತಿ ಬಸವರಾಜ್ ಪರ ವಕೀಲರು, ಕೊಕಾ ಅನ್ವಯಿಸಿರುವ ಆದೇಶ ವಜಾಗೊಂಡಿರುವುದರಿಂದ ವಿಚಾರಣಾ ನ್ಯಾಯಾಲಯದಲ್ಲಿ ಬೈರತಿ ಬಸವರಾಜ್ ಅವರು ನಿರೀಕ್ಷಣಾ ಜಾಮೀನು ಕೋರುವವರೆಗೆ ರಕ್ಷಣೆ ಒದಗಿಸಬೇಕು ಎಂದು ಕೋರಿದ್ದರು. ಇದಕ್ಕೆ ಹೈಕೋರ್ಟ್ ನಿರಾಕರಿಸಿತ್ತು.

ಇದೀಗ, ವಿಚಾರಣಾ ನ್ಯಾಯಾಲಯವೂ ನಿರೀಕ್ಷಣಾ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಶಾಸಕ ಬೈರತಿ ಬಸವರಾಜ್‌ಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ.

Related Articles

Comments (0)

Leave a Comment