ರೈತರು ಕಬ್ಬು ಬೆಳೆಯದಿದ್ದರೆ ಫ್ಯಾಕ್ಟರಿಗಳನ್ನಿಟ್ಟುಕೊಂಡು ಏನು ಮಾಡುತ್ತೀರಿ? ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹೈಕೋರ್ಟ್ ತರಾಟೆ
- by Jagan Ramesh
- December 19, 2025
- 10 Views
ಬೆಂಗಳೂರು: ರಾಜ್ಯ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ದರ ಪಾವತಿಸಲು ಮೀನಮೇಷ ಎಣಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ರೈತರು ಕಬ್ಬು ಬೆಳೆಯುವುದನ್ನು ನಿಲ್ಲಿಸಿದರೆ ನಿಮ್ಮ ಕಾರ್ಖಾನೆಗಳನ್ನಿಟ್ಟುಕೊಂಡು ಏನು ಮಾಡುವಿರಿ? ಹಣ ನೀಡಲು ಸಾಧ್ಯವಾಗದಿದ್ದರೆ ಕಬ್ಬು ಬೆಳಯಬೇಡಿ ಎಂದು ರೈತರಿಗೆ ಹೇಳಿ, ಅವರು ಬೇರೆ ಏನನ್ನಾದರೂ ಬೆಳೆಯುತ್ತಾರೆ ಎಂದು ಕಿಡಿ ಕಾರಿದೆ.
ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ದರಕ್ಕಿಂತಲೂ (ಎಫ್ಆರ್ಪಿ) ಹೆಚ್ಚಿನ ದರ ನಿಗದಿಪಡಿಸಿ ರಾಜ್ಯ ಸರ್ಕಾರ ನವೆಂಬರ್ 8ರಂದು ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಸೌತ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ಸ್, ಬಿಜೆಪಿ ನಾಯಕ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಲಿಮಿಟೆಡ್, ರೇಣುಕಾ ಶುಗರ್ಸ್, ಜೆಮ್ ಶುಗರ್ಸ್, ಕೆಪಿಆರ್ ಶುಗರ್ಸ್ ಆ್ಯಂಡ್ ಅಪರಾಲ್ಸ್ ಲಿಮಿಟೆಡ್ ಹಾಗೂ ಗೋದಾವರಿ ಬಯೋ ರಿಫೈನರೀಸ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಎಚ್.ಎನ್. ಶಶಿಧರ್ ವಾದ ಮಂಡಿಸಿ ದಕ್ಷಿಣ ಕರ್ನಾಟಕದಲ್ಲಿ 81 ಕಾರ್ಖಾನೆಗಳ ಪೈಕಿ 19 ಕಾರ್ಖಾನೆಗಳು ಈಗಾಗಲೇ ಹಣ ಪಾವತಿಸಿವೆ. ಉಳಿದ 62ರಲ್ಲಿ 12 ಸಂಸ್ಥೆಗಳು ನ್ಯಾಯಾಲಯದ ಮುಂದೆ ಬಂದಿವೆ. ಸೌತ್ ಇಂಡಿಯನ್ ಶುಗರ್ಸ್ ಸಂಸ್ಥೆಯು 50 ಕಾರ್ಖಾನೆಗಳನ್ನು ಪ್ರತಿನಿಧಿಸುತ್ತದೆ. ನಾವು ಎಫ್ಆರ್ಪಿಯನ್ನು ಪಾವತಿಸಿದ್ದೇವೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನಿಗದಿಪಡಿಸಿರುವ ದರವನ್ನು ಪಾವತಿಸುವಂತೆ ಆದೇಶಿಸಿದರೆ ಸಾಕಷ್ಟು ಕಾರ್ಖಾನೆಗಳು ದಿವಾಳಿಯಾಗಲಿವೆ. ಆದ್ದರಿಂದ, ನ್ಯಾಯಾಲಯ ನಮ್ಮ ನೆರವಿಗೆ ಧಾವಿಸಬೇಕು ಎಂದು ಕೋರಿದರು.
ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಟನ್ ಕಬ್ಬಿಗೆ 200 ರೂ. ದರ ಹೆಚ್ಚಿಸಿರುವುದಕ್ಕೆ ಸಂಬಂಧಿಸಿದಂತೆ ಸಕ್ಕರೆ ನಿಯಂತ್ರಣ ಮಂಡಳಿಗೆ ಅರ್ಜಿದಾರ ಸಕ್ಕರೆ ಕಾರ್ಖಾನೆಗಳು ಮತ್ತು ಸೌತ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ಸ್ 10 ದಿನಗಳಲ್ಲಿ ಮನವಿ ಸಲ್ಲಿಸಲಿವೆ. ಕಬ್ಬು ಬೆಳೆಗಾರರಿಗೆ ತಕ್ಷಣ ಹಣ ಬಿಡುಗಡೆ ಮಾಡುವುದಕ್ಕೆ ಸಕ್ಕರೆ ಕಾರ್ಖಾನೆಗಳಿಗೆ ಎದುರಾಗಿರುವ ಸಮಸ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗುವುದು. ಈ ಕುರಿತು ನಿರ್ಧಾರ ಕೈಗೊಳ್ಳಲು ಆದೇಶಿಸಬೇಕು ಎಂದರು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಸರ್ಕಾರಕ್ಕೆ ಸಲ್ಲಿಸುವ ಮನವಿ ಸಂಬಂಧ ನಿರ್ಧಾರ ಕೈಗೊಳ್ಳಲು ತಿಂಗಳು ಕಾಲಾವಕಾಶ ನೀಡಬೇಕು ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕರ್ನಾಟಕ ಕಬ್ಬು (ಖರೀದಿ ಮತ್ತು ಪೂರೈಕೆ ನಿಯಂತ್ರಣ) ಕಾಯ್ದೆ-2013ರ ಅನ್ವಯ ಸಕ್ಕರೆ ಕಾರ್ಖಾನೆಗಳು ಮತ್ತು ಸೌತ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ಸ್ ಸಲ್ಲಿಸುವ ಮನವಿ ಕುರಿತು ಸಕ್ಕರೆ ನಿಯಂತ್ರಣ ಮಂಡಳಿಯು ಆದಷ್ಟು ಶೀಘ್ರವಾಗಿ ಸೂಕ್ತ ಆದೇಶ ಹೊರಡಿಸಬೇಕು. ಸಕ್ಕರೆ ಕಾರ್ಖಾನೆಗಳು ಸಲ್ಲಿಸುವ ಮನವಿ ಸಂಬಂಧ ಸರ್ಕಾರ 3 ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ ತಿಂಗಳ ಕೊನೆಯ ವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)