ಆನ್‌ಲೈನ್ ಆರ್ಥಿಕ ವಂಚನೆ ಪ್ರಕರಣಗಳ ನಿರ್ವವಣೆಗೆ ಕರಡು ಎಸ್‌ಒಪಿ ಸಿದ್ಧ; ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

ಬೆಂಗಳೂರು: ಆನ್‌ಲೈನ್‌ ಹಣಕಾಸು ವಂಚನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಖಾತೆ ಸ್ಥಗಿತ (ಫ್ರೀಜಿಂಗ್‌) ಮತ್ತು ಹಣ ಮರುಜಮೆ ಮಾಡುವುದು ಸೇರಿ ಸೈಬರ್‌ ಅಪರಾಧ ಪ್ರಕರಣಗಳನ್ನು ವ್ಯವಹರಿಸಲು ಕರಡು ಪ್ರಮಾಣೀಕೃತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಸೈಬರ್‌ ಅಪರಾಧಗಳ ಸಂಬಂಧ ಬ್ಯಾಂಕ್‌ ಖಾತೆಗಳನ್ನು ಸ್ಥಗತಿಗೊಳಿಸುವ ಮುನ್ನ ಖಾತೆದಾರರಿಗೆ ಶೋಕಾಸ್‌ ನೋಟಿಸ್‌ ನೀಡುವ ಪ್ರಕ್ರಿಯೆ ಕಡ್ಡಾಯ ಪಾಲನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ನಗರದ ಪವನ್ ವಿಜಯ್ ಶರ್ಮ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೇಂದ್ರ ಸರ್ಕಾರದ ಪರ ಉಪ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್‌ ಹಾಜರಾಗಿ, ನ್ಯಾಷನಲ್‌ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌, ಸಿಟಿಜನ್‌ ಫೈನಾನ್ಸಿಯಲ್‌ ಫ್ರಾಡ್‌ ರಿಪೋರ್ಟಿಂಗ್‌ (ಸಿಎಫ್‌ಸಿಎಫ್‌ಆರ್‌), ಮ್ಯಾನೇಜ್ಮೆಂಟ್‌ ಸಿಸ್ಟಮ್‌ ಆ್ಯಂಡ್‌ ಪ್ರೊಟೋಕಾಲ್ಸ್‌ಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ಕರಡು ಎಸ್‌ಒಪಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರಲ್ಲದೆ, ಈ ಎಸ್‌ಒಪಿಯನ್ನು ಸಂಬಂಧಪಟ್ಟ ಪಾಲುದಾರರ ಜತೆ ಹಂಚಿಕೊಳ್ಳಲಾಗಿದೆ. ಅವರಿಂದ ಅವಶ್ಯ ಅಭಿಪ್ರಾಯಗಳನ್ನು ಸ್ವೀಕರಿಸಿ, ಅಳವಡಿಸಿದ ಬಳಿಕ ಎಸ್‌ಒಪಿಯನ್ನು ಅಂತಿಮಗೊಳಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸೈಬರ್‌ ಅಪರಾಧ ನಡೆದ ನಂತರದ ಮೊದಲ ಒಂದು ಗಂಟೆಯ ಅವಧಿಯು ಗೋಲ್ಡನ್‌ ಅವರ್‌ ಆಗಿರುತ್ತದೆ. ಆಗ ಶೋಕಾಸ್‌ ನೋಟಿಸ್‌ ನೀಡುವ ಪ್ರಕ್ರಿಯೆಯನ್ನು ಅಧಿಕಾರಿಗಳಿಂದ ನಿರೀಕ್ಷೆ ಮಾಡಲಾಗದು. ಕ್ರೆಡಿಟ್‌ ಕಾರ್ಡ್‌ ದುರುಪಯೋಗವಾಗಿ ಹಣ ವರ್ಗಾವಣೆಯಾದರೆ, ಹಣ/ಖಾತೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ನುಡಿಯಿತಲ್ಲದೆ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ತನ್ನ ಬ್ಯಾಂಕ್‌ ಖಾತೆಗಳು ಸ್ಥಗಿತಗೊಂಡ ನಂತರ ಕಾನೂನು ಅಡಿಯಲ್ಲಿ ಸೂಕ್ತ ಪರಿಹಾರ ಕೋರಲು ಸ್ವತಂತ್ರರಿದ್ದಾರೆ. ಅದಕ್ಕೆ ಈ ಆದೇಶ ಅಡ್ಡಿಪಡಿಸುವುದಿಲ್ಲ ಎಂದು ತಿಳಿಸಿ, ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿದಾರರ ಆಕ್ಷೇಪವೇನು?
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಸೈಬರ್‌ ಅಪರಾಧಗಳಿಗೆ ಸಂಬಂಧಿಸಿದಂತೆ 2012ರಲ್ಲಿ 4.6 ಲಕ್ಷ ಮತ್ತು 2024ರಲ್ಲಿ 22.6 ಲಕ್ಷ ದೂರುಗಳು ದಾಖಲಾಗಿವೆ. ಸೈಬರ್‌ ಅಪರಾಧಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಇಂಥ ಪ್ರಕರಣಗಳಲ್ಲಿ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸುವಂತಹ ಮಹತ್ವದ ಕ್ರಮ ಜರುಗಿಸುವ ಮುನ್ನ ಖಾತೆದಾರರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡುವುದು ನ್ಯಾಯಸಮ್ಮತವಾದ ಕ್ರಮ. ಆ ಕುರಿತಂತೆ ಸೂಕ್ತ ಮಾರ್ಗಸೂಚಿ ರಚನೆ ಮಾಡಬೇಕಿದೆ ಎಂದು ಹೇಳಿದ್ದರು.

ಅದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಅಧಿಕಾರಿಗಳು ಶೋಕಾಸ್‌ ನೋಟಿಸ್‌ ನೀಡುವ ಸಲುವಾಗಿ ಸಮಯ ಕಳೆದರೆ, ವಂಚನೆಗೆ ಒಳಗಾದ ಅಪರಾಧದ ಹಣ ಮರುಪಡೆಯಲು ಅಡ್ಡಿಯಾಗಬಹುದು ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

Related Articles

Comments (0)

Leave a Comment