ಬಿಜೆಪಿ ಮಾನಹಾನಿ ಪ್ರಕರಣದಲ್ಲಿ ರಾಹುಲ್ ವಿರುದ್ಧದ ಆರೋಪಕ್ಕೆ ದಾಖಲೆ ಇಲ್ಲ – ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಜಾಹೀರಾತು ಪ್ರಕಟಿಸಿ, ಮಾನಹಾನಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾವೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಯಾವುದೇ ದಾಖಲೆಗಳಿಲ್ಲ ಎಂದು ಹಿರಿಯ ವಕೀಲ ಕೆ. ಶಶಿಕಿರಣ್ ಶೆಟ್ಟಿ ಹೈಕೋರ್ಟ್‌‌ನಲ್ಲಿ ಪ್ರತಿಪಾದಿಸಿದರು.

ಬಿಜೆಪಿ ಹೂಡಿರುವ ಮಾನಹಾನಿ ಪ್ರಕರಣ ರದ್ದು ಕೋರಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ರಾಹುಲ್‌ ಗಾಂಧಿ ಪರ ಹಿರಿಯ ವಕೀಲ ಕೆ. ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ, ಆಕ್ಷೇಪಿತ ಜಾಹೀರಾತಿನ ಟ್ವೀಟ್‌ಗೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ತಳುಕು ಹಾಕಲು ಯಾವುದೇ ದಾಖಲೆಗಳಿಲ್ಲ ಎಂಬುದು ದೂರಿನಿಂದಲೇ ಬಹಿರಂಗವಾಗುತ್ತದೆ. ರಾಹುಲ್‌ ಅವರನ್ನು ಗುರಿಯಾಗಿಸಬಹುದಾದ ಯಾವುದೇ ಟ್ವೀಟ್‌ ಅಥವಾ ಪ್ರಕಟಣೆ ಇಲ್ಲ. ಯಾರೋ ಜಾಹೀರಾತಿನ ಪ್ರಕಟಣೆ ನೀಡಿದ್ದರೂ ಅದು ಸರ್ಕಾರದ ಕುರಿತದ್ದಾಗಿದೆಯೇ ಹೊರತು ಬಿಜೆಪಿಯನ್ನು ಗುರಿಯಾಗಿಸಿಲ್ಲ. ಅದಾಗ್ಯೂ ಅಂದಿನ ಬಿಜೆಪಿ ಸರ್ಕಾರ ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಆಕ್ಷೇಪಿತ ಜಾಹೀರಾತಿನ ರೀಟ್ವೀಟ್‌ ಮಾಡಿದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಪಕ್ಷದ ಉಪಾಧ್ಯಕ್ಷರಾಗಿದ್ದರು ಎಂದು ಹೇಳಲು ಯಾವುದೇ ದಾಖಲೆ ಇಲ್ಲ. ಟ್ವೀಟ್‌ ಮಾಡಿರುವ ಸಂದರ್ಭದಲ್ಲಿ ರಾಹುಲ್‌ ಉಪಾಧ್ಯಕ್ಷರಾಗಿರಲಿಲ್ಲ. ಲೋಕಸಭೆಯ ಸದಸ್ಯತ್ವದಿಂದಲೂ ಅನರ್ಹಗೊಂಡಿದ್ದರು ಎಂದು ತಿಳಿಸಿದ ಶಶಿಕಿರಣ್ ಶೆಟ್ಟಿ ಅವರು ಈ ಸಂಬಂಧ ಪ್ರಮಾಣಪತ್ರವನ್ನೂ ಸಲ್ಲಿಸಿದರು.

ಪ್ರಕರಣದಲ್ಲಿ ಸಮನ್ಸ್‌ ಜಾರಿ ಮಾಡುವಾಗ ಮ್ಯಾಜಿಸ್ಟ್ರೇಟ್‌ ವಿವೇಚನೆ ಬಳಸಿಲ್ಲ. ಜಾಹೀರಾತು ಪ್ರಕಟಿಸಲು ರಾಹುಲ್‌ ಗಾಂಧಿ ಅನುಮತಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲ. ಆರೋಪಿತ ಟ್ವೀಟ್‌ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನೂ ಸಲ್ಲಿಸಲಾಗಿಲ್ಲ. ಒಮ್ಮೆ ಸರ್ಕಾರ ಬಂದ ಮೇಲೆ ಅದು ಬಿಜೆಪಿಗೆ ಸೇರುವುದಿಲ್ಲ. ಅದು ಕರ್ನಾಟಕ ಸರ್ಕಾರವಾಗುತ್ತದೆಯೇ ಹೊರತು ಬಿಜೆಪಿ ಸರ್ಕಾರವಾಗುವುದಿಲ್ಲ ಎಂದರು.

ಬಿಜೆಪಿ ಪರ ವಕೀಲ ಎಂ. ವಿನೋದ್‌ಕುಮಾರ್‌ ಅವರು, 2019ರಿಂದ 2023ರವರೆಗೆ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದವರು ಯಾರು? ಬಿಜೆಪಿಯನ್ನೇ ಗುರಿಯಾಗಿಸಿ ಜಾಹೀರಾತು ನೀಡಲಾಗಿದೆ. ಅಂದು ಆಡಳಿತದಲ್ಲಿ ಬಿಜೆಪಿಯನ್ನು ಭ್ರಷ್ಟಾಚಾರಿ ಎಂದು ಬಿಂಬಿಸಲು ಎಲ್ಲ ಪ್ರಮುಖ ಪತ್ರಗಳಲ್ಲಿ ಸರಣಿ ಜಾಹೀರಾತು ನೀಡಲಾಗಿತ್ತು. ಇದರಲ್ಲಿ ಮುಖ್ಯಮಂತ್ರಿ, ಮಂತ್ರಿ, ಇಂಜಿನಿಯರ್‌, ಕುಲಪತಿ ಹೀಗೆ ಪ್ರತಿಯೊಂದು ಹುದ್ದೆಗೂ ಇಂತಿಷ್ಟು ಕೋಟಿ ಲಂಚ ಪಡೆಯಲಾಗುತ್ತದೆ ಎಂದು ಉಲ್ಲೇಖಿಸಿ ಮಾನಹಾನಿ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

ಶಾಸನಸಭೆಯ ಸದಸ್ಯರಾದ ಅರ್ಜಿದಾರರು ಅತ್ಯಂತ ಎಚ್ಚರಿಕೆಯಿಂದ ಇರಬೇಕಿತ್ತು. ಶೇ. 40 ಸರ್ಕಾರ ಎಂದು ಹೇಳಿ ಬಿಜೆಪಿಯನ್ನು ಗುರಿಯಾಗಿಸಲಾಗಿತ್ತು. ಜಾಹೀರಾತಿನಲ್ಲಿ ಬಿಜೆಪಿ ಉಲ್ಲೇಖಿಸಿದಿದ್ದರೂ ಸಂಪೂರ್ಣವಾಗಿ ಕಮಲ ಪಕ್ಷವನ್ನು ಗುರಿಯಾಗಿಸಿದ್ದರಿಂದ ದಾವೆ ಹೂಡುವ ಹಕ್ಕು ಇದೆ ಎಂದು ಸಮರ್ಥಿಸಿಕೊಂಡರಲ್ಲದೆ, ಬಿಜೆಪಿಯ ವಿರುದ್ಧದ ದುರುದ್ದೇಶಪೂರಿತ ಪ್ರಚಾರದಿಂದಾಗಿ ಪಕ್ಷದ ಹಲವು ಅಭ್ಯರ್ಥಿಗಳು 500ರಿಂದ 2 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸುವಂತಾಯಿತು ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್‌ 18ಕ್ಕೆ ಮುಂದೂಡಿತು. ಜತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

Related Articles

Comments (0)

Leave a Comment