ಸತೀಶ್ ಸೈಲ್‌ಗೆ ಹೊಸದಾಗಿ ಆರೋಗ್ಯ ತಪಾಸಣೆಗೆ ಇಡಿ ಇಂಗಿತ; ವೈದ್ಯರ ಮಾಹಿತಿ ನೀಡಲು ಹೈಕೋರ್ಟ್ ನಿರ್ದೇಶನ
- by Prashanth Basavapatna
- December 11, 2025
- 19 Views
ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾದ ಶಾಸಕ ಸತೀಶ್ ಸೈಲ್ ಅವರನ್ನು ಹೊಸದಾಗಿ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಸೂಕ್ತ ಎಂದು ಜಾರಿ ನಿರ್ದೇಶನಾಲಯ (ಇಡಿ) ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ತಪಾಸಣೆ ನಡೆಸುವ ವೈದ್ಯರ ಮಾಹಿತಿ ನೀಡುವಂತೆ ಇಡಿಗೆ ಹೈಕೋರ್ಟ್ ನಿರ್ದೇಶಿಸಿದೆ.
ವಿಚಾರಣೆಗೆ ಸಹಕರಿಸದ ಕಾರಣಕ್ಕೆ ಜಾಮೀನುರಹಿತ ಬಂಧನ ವಾರಂಟ್ (ಎನ್‌ಬಿಡಬ್ಲ್ಯು) ಹೊರಡಿಸಿದ ಹಾಗೂ ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ರದ್ದುಪಡಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್ ಅವರು, ಸೈಲ್ ಆರೋಗ್ಯ ಕುರಿತಾದ ಎಲ್ಲ ವರದಿಗಳು ಅಂಗಾಂಗದ ಸದ್ಯದ ಸ್ಥಿತಿಗತಿಯ ಬಗ್ಗೆ ಹೇಳಿವೆ. ಇಎಸ್‌ಐ ಆಸ್ಪತ್ರೆ ವರದಿ ನೀಡಿದ ಬಳಿಕವೂ ಸೈಲ್ ಅವರು ಪ್ರವಾಸ ಕೈಗೊಂಡಿದ್ದಾರೆ. ನ್ಯಾಯಾಲಯವು ವೈದ್ಯಕೀಯ ಜಾಮೀನು ನೀಡುವ ಕುರಿತು ನಿರ್ಧರಿಸುವುದರಿಂದ ಆರೋಗ್ಯ ತಪಾಸಣಾ ವರದಿಯು ಶೇ. 100 ನಿಷ್ಪಕ್ಷಪಾತವಾಗಿರಬೇಕು. ಕೇಂದ್ರೀಯ ಆಸ್ಪತ್ರೆಯ ವೈದ್ಯರು ಅವರನ್ನು ಪರಿಶೀಲಿಸಿ ವರದಿ ನೀಡಿದರೆ ಅದು ಯಾವುದೇ ದೃಷ್ಟಿಕೋನದಿಂದಲೂ ನಿಷ್ಪಕ್ಷಪಾತವಾಗಿರಲಿದೆ ಎಂದರು.
ಸೈಲ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಇಡಿ ಕೋರಿಕೆಯ ಮೇರೆಗೆ ಮೂರು ಬಾರಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. 2025ರ ಸೆಪ್ಟೆಂಬರ್ 10ರಂದು ಸೈಲ್ ಅವರನ್ನು ಇಡಿ ಕಸ್ಟಡಿಗೆ ಪಡೆದಿತ್ತು. ಈ ಸಂದರ್ಭದಲ್ಲಿ ತಪಾಸಣೆ ನಡೆಸಲಾಗಿ, ಸೈಲ್‌ಗೆ ಯಕೃತ್ ಕಸಿ ಮಾಡಬೇಕು ಎಂದು ಹೇಳಲಾಗಿದೆ. ಇಡಿ ಕಸ್ಟಡಿಯಲ್ಲಿದ್ದಾಗಲೇ ಸೈಲ್ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಸೆಪ್ಟೆಂಬರ್ 12ರಂದು ಸೈಲ್ ಅನಾರೋಗ್ಯಕ್ಕೆ ತುತ್ತಾದ ಕಾರಣ ಇಡಿ ಅಧಿಕಾರಿಗಳು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆಗ ನ್ಯಾಯಾಲಯ ಅವರಿಗೆ ವೈದ್ಯಕೀಯ ಮಧ್ಯಂತರ ಜಾಮೀನು ನೀಡಿತ್ತು. ನವೆಂವರ್ 7ರಂದು ವಿಚಾರಣಾ ನ್ಯಾಯಾಲಯ ವೈದ್ಯಕೀಯ ಜಾಮೀನು ರದ್ದುಪಡಿಸಿತ್ತು. ಇದರ ಬೆನ್ನಿಗೇ ಸೈಲ್ ಹೈಕೋರ್ಟ್ ಮೆಟ್ಟಿಲೇರಿದ್ದು, ನವೆಂಬರ್ 10ರಂದು ಹೈಕೋರ್ಟ್ ವೈದ್ಯಕೀಯ ಜಾಮೀನು ವಿಸ್ತರಿಸಿತ್ತು ಎಂದು ವಿವರಿಸಿದರು.
ಆನಂತರ ಇಡಿ ಕೋರಿಕೆಯಂತೆ ಬಿಎಂಸಿ ಆಸ್ಪತ್ರೆಯಲ್ಲಿ ಸೈಲ್ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗುವಂತೆ ಇಡಿ ಸೂಚಿಸಿತ್ತು. ನವೆಂಬರ್ 27ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೂ ತಪಾಸಣೆಗೆ ಒಳಗಾಗಿ, ಅದರ ವರದಿಯನ್ನೂ ಸಲ್ಲಿಸಲಾಗಿದೆ. ಈಗ ಇಡಿ ಯಾವುದೇ ವೈದ್ಯಕೀಯ ವರದಿಗಳ ಬಗ್ಗೆ ಆಕ್ಷೇಪಿಸಿಲ್ಲ. ಆದರೆ, ಇನ್ನೊಂದು ಪರೀಕ್ಷೆ ನಡೆಸೋಣ ಎನ್ನುತ್ತಿದೆ. ಮೂರು ಬಾರಿ ಆರೋಗ್ಯ ತಪಾಸಣೆಗೆ ಒಳಗಾಗಿರುವ ವರದಿ ನೀಡಿದರೂ ಅದು ಸುಳ್ಳು ಅಥವಾ ತಿರುಚಿರುವ ವರದಿ ಎಂದು ಹೇಳುವುದಿಲ್ಲ. ಈಗ ದೆಹಲಿಯಿಂದ ವೈದ್ಯರೊಬ್ಬರು ಬಂದು ತಪಾಸಣೆ ನಡೆಸುತ್ತಾರೆ ಎಂದು ಹೇಳಲಾಗಿದೆ. ಇದು ಸೈಲ್ ಅವರ ಆರೋಗ್ಯ ಹಿತಾಸಕ್ತಿಯ ದೃಷ್ಟಿಯಿಂದ ಸರಿಯಲ್ಲ ಎಂದರು.
ವ್ಯಕ್ತಿಯೊಬ್ಬ ವೈದ್ಯಕೀಯ ಪರಿಸ್ಥಿತಿಗೆ ಚಿಕಿತ್ಸೆಗೆ ಒಳಪಡುವುದಕ್ಕೂ ಸೈಲ್ ಪ್ರಭಾವಿ ಎನ್ನುವುದಕ್ಕೆ ಏನು ಸಂಬಂಧ? ಈಗ ಸೈಲ್ ಅವರಿಗೆ ವೈದ್ಯಕೀಯ ಜಾಮೀನು ನಿರಾಕರಿಸಿದರೆ ಅವರು ಇಡಿ ಕಸ್ಟಡಿಗೆ ಹೋಗುವುದಿಲ್ಲ. ನ್ಯಾಯಾಂಗ ಬಂಧನಕ್ಕೆ ಹೋಗುತ್ತಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ ಆಲಿಸಿದ ನ್ಯಾಯಪೀಠ, ಸತೀಶ್ ಸೈಲ್ ಅವರನ್ನು ಹೊಸದಾಗಿ ವೈದ್ಯಕೀಯ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಜಾರಿ ನಿರ್ದೇಶನಾಲಯ ಹೊಂದಿದೆ. ಆದ್ದರಿಂದ, ಯಾವ ವೈದ್ಯರು ಆರೋಗ್ಯ ತಪಾಸಣೆ ನಡೆಸಬೇಕು ಎಂಬ ಮಾಹಿತಿಯನ್ನು ಇಡಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡಿತು. ಜತೆಗೆ, ಸೈಲ್ ಅವರಿಗೆ ನೀಡಿರುವ ವೈದ್ಯಕೀಯ ಮಧ್ಯಂತರ ಜಾಮೀನನ್ನು ಮುಂದಿನ ವಿಚಾರಣೆವರೆಗೆ ವಿಸ್ತಿರಿಸಿತು.
Related Articles
Thank you for your comment. It is awaiting moderation.


Comments (0)