ಎಂಬಿಬಿಎಸ್, ಬಿಡಿಎಸ್ ತಾತ್ಕಾಲಿಕ ಹಂಚಿಕೆ ಪಟ್ಟಿ ರದ್ದು; ಹೊಸದಾಗಿ ಪ್ರಕ್ರಿಯೆ ನಡೆಸಲು ಕೆಇಎಗೆ ಹೈಕೋರ್ಟ್ ನಿರ್ದೇಶನ
- by Jagan Ramesh
- December 6, 2025
- 80 Views
ಬೆಂಗಳೂರು: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಕ್ಟೋಬರ್ 24 ರಂದು ಪ್ರಕಟಿಸಿದ್ದ 3ನೇ ಸುತ್ತಿನ ಕೌನ್ಸೆಲಿಂಗ್ನ ತಾತ್ಕಾಲಿಕ ಹಂಚಿಕೆ ಪಟ್ಟಿಯನ್ನು ರದ್ದುಪಡಿಸಿರುವ ಹೈಕೋರ್ಟ್, ಹೊಸದಾಗಿ 3ನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಕೈಗೊಳ್ಳಲು ಕೆಇಎಗೆ ನಿರ್ದೇಶಿಸಿದೆ.
ಚಂದನಾ ಎಂ. ಚವಾಣ್ ಸೇರಿ 26 ವಿದ್ಯಾರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್, ನ್ಯಾಯಮೂರ್ತಿ ಎಂ.ಐ. ಅರುಣ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿಗಳ ಕುರಿತ ತೀರ್ಪನ್ನು ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಿದೆ.
ಹೈಕೋರ್ಟ್ನ ಈ ಆದೇಶದಿಂದ 2025-26ನೇ ಶೈಕ್ಷಣಿಕ ವರ್ಷಕ್ಕೆ ಉಳಿದಿರುವ ಸುಮಾರು 900 ಪದವಿಪೂರ್ವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ಸಂಬಂಧಿಸಿದ ಅನಿಶ್ಚಿತತೆ ದೂರವಾದಂತಾಗಿದೆ.
ಆದೇಶವೇನು?
ಹೊಸದಾಗಿ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಅನುಮತಿ ಪಡೆದ ಅಭ್ಯರ್ಥಿಗಳಿಗೆ ಹೆಚ್ಚುವರಿ 443 ಸೀಟುಗಳಿಗೆ ಕೆಇಎ ಹಂಚಿಕೆ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಮತ್ತು ಈ ಪ್ರಕ್ರಿಯೆಯು ಈಗಾಗಲೇ ನಮೂದಿಸಿದ ಆಯ್ಕೆಗಳನ್ನು ಆಧರಿಸಿರಬೇಕು. ಮೊದಲ ಹಂತದಲ್ಲಿ ತೆಗೆದುಕೊಳ್ಳದ ಹೆಚ್ಚುವರಿ ಸೀಟುಗಳನ್ನು ಹಂಚಿಕೆ ಮಾಡಬೇಕು ಮತ್ತು ಪರಿಣಾಮವಾಗಿ ಸೀಟುಗಳ ಹಂಚಿಕೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಡಿಸೆಂಬರ್ 17ರೊಳಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಇದೇ ವೇಳೆ, ನ್ಯಾಯಾಲಯದ ಈ ನಿರ್ದೇಶನದಂತೆ ನಡೆಸಲಾಗುವ ಸೀಟು ಹಂಚಿಕೆ ಪ್ರಕ್ರಿಯೆ ನಂತರ ಕೆಇಎ ಸಲ್ಲಿಕೆ ಮಾಡುವ ಅಭ್ಯರ್ಥಿಗಳ ಪಟ್ಟಿಗೆ ಯಾವುದೇ ವಿಳಂಬ ಮಾಡದೆ ಅನುಮೋದನೆ ನೀಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್ಎಂಸಿ) ಸೂಚನೆ ನೀಡಿರುವ ನ್ಯಾಯಾಲಯ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೆಚ್ಚುವರಿ ಸೀಟುಗಳನ್ನು ಅನುಮೋದಿಸಲು ಎನ್ಎಂಸಿ ಬಯಸಿದರೆ, ಅವುಗಳನ್ನೂ ಸಹ ಗಮನದಲ್ಲಿರಿಸಿಕೊಂಡು ಸರ್ಕಾರ ಸೀಟು ಮ್ಯಾಟ್ರಿಕ್ಸ್ ಅನ್ನು ಪ್ರಕಟಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಜತೆಗೆ, ರಾಜ್ಯಕ್ಕೆ ಹೆಚ್ಚುವರಿ ಸೀಟುಗಳನ್ನು ಅನುಮೋದಿಸುವ ಮೊದಲು ಕೌನ್ಸೆಲಿಂಗ್ ಆರಂಭವಾಗಿದೆಯೇ ಆಥವಾ ಇಲ್ಲವೇ ಎಂಬುದನ್ನು ಎನ್ಎಂಸಿ ಗಮನಿಸಬೇಕು. ಒಂದು ವೇಳೆ ಸೀಟು ಹಂಚಿಕೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಿದ್ದರೆ ಹೆಚ್ಚುವರಿ ಸೀಟುಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಮೋದಿಸಬಾರದು. ಸೀಟು ಮ್ಯಾಟ್ರಿಕ್ಸ್ ಅನ್ನು ಪ್ರಕಟಿಸುವ ಮುನ್ನ ರಾಜ್ಯ ಸರ್ಕಾರ ಎಲ್ಲ ಆಯಾಮಗಳನ್ನು ಪರಿಶೀಲಿಸಿ, ಆನಂತರ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ತಾತ್ಕಾಲಿಕ ಸೀಟು ಆಯ್ಕೆ ಪಟ್ಟಿ ಸಂಬಂಧ ಕಳೆದ ನವೆಂಬರ್ 19ರಂದು ಹೈಕೋರ್ಟ್ ವಿಭಾಗೀಯಪೀಠ ಭಿನ್ನ ನಿಲುವು ಪ್ರಕಟಿಸಿತ್ತು. ವಿಭಾಗೀಯ ಪೀಠದ ಇಬ್ಬರೂ ನ್ಯಾಯಮೂರ್ತಿಗಳು ವ್ಯತಿರಿಕ್ತ ತೀರ್ಪು ನೀಡಿದ್ದರಿಂದ, ಪ್ರಕರಣವನ್ನು ಬಗೆಹರಿಸಲು ತ್ರಿಸದಸ್ಯ ನ್ಯಾಯಪೀಠವನ್ನು ರಚನೆ ಮಾಡಲಾಗಿತ್ತು. ಇದೀಗ ಸಮಗ್ರ ವಿಚಾರಣೆ ಬಳಿಕ ತ್ರಿಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
Related Articles
Thank you for your comment. It is awaiting moderation.


Comments (0)