ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿದ ಪಿಐಎಲ್; ಮಾರ್ಚ್ 5ಕ್ಕೆ ಅಂತಿಮ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್
- by Prashanth Basavapatna
- December 5, 2025
- 15 Views
ಬೆಂಗಳೂರು: ರಾಜ್ಯದ ನಾಗರಿಕರ ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್ 2026ರ ಮಾರ್ಚ್ 5ಕ್ಕೆ ನಿಗದಿಪಡಿಸಿದೆ.
ಸಮೀಕ್ಷೆಗಾಗಿ 2025ರ ಆಗಸ್ಟ್ 13ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಒಕ್ಕಲಿಗರ ಸಂಘದ ಪರ ವಕೀಲ ಕೆ.ಅಭಿಷೇಕ್ ವಾದ ಮಂಡಿಸಿ, ಹಾಲಿ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ದತ್ತಾಂಶಗಳನ್ನು ಸಂರಕ್ಷಿಸಿಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಅದರಂತೆ ರಾಜ್ಯ ಸರ್ಕಾರ ದತ್ತಾಂಶ ರಕ್ಷಿಸಿರುವುದರ ಸಂಬಂಧ ಪ್ರಮಾಣಪತ್ರ ಸಲ್ಲಿಸಿದೆ. ನಾಲ್ಕು ವಾರಗಳಲ್ಲಿ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತ್ತು. ಆದರೆ, ಸರ್ಕಾರ ಅದನ್ನು ಅನುಪಾಲಿಸಿಲ್ಲ ಎಂದರು.
ರಾಜ್ಯ ಸರ್ಕಾರ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಆಕ್ಷೇಪಣೆ ಸಿದ್ಧವಾಗಿದ್ದು, ಇಂದು ಸಲ್ಲಿಸಲಾಗುವುದು ಎಂದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಭಾರತೀಯ ಜನಗಣತಿ ಆಯೋಗ ಮತ್ತು ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿತು. ಜತೆಗೆ, ಎಲ್ಲ ಪಕ್ಷಕಾರರಿಗೆ ವಾದಾಂಶ ಸಲ್ಲಿಸಲು ನಿರ್ದೇಶಿಸಿದ ನ್ಯಾಯಪೀಠ ಅಂತಿಮ ವಿಚಾರಣೆಯನ್ನು ಮಾರ್ಚ್ 5ಕ್ಕೆ ನಿಗದಿಪಡಿಸಿತು.
ಇದೇ ವೇಳೆ, ತೃತೀಯ ಲಿಂಗಿಗಳಿಗೆ ಸಂಬಂಧಿಸಿದ ಸಮೀಕ್ಷೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುತ್ತಿದೆಯೇ ವಿನಾ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿಲ್ಲ. ಆದ್ದರಿಂದ, ಅವುಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕು ಎಂಬ ಅಡ್ವೊಕೇಟ್ ಜನರಲ್ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಪೀಠ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಪ್ರಶ್ನಿಸಿದ ಅರ್ಜಿಗಳಿಂದ ತೃತೀಯ ಲಿಂಗಿಗಳ ಸಮೀಕ್ಷೆ ಪ್ರಶ್ನಿಸಿದ ಅರ್ಜಿಗಳನ್ನು ಪ್ರತ್ಯೇಕಿಸಿ, ವಿಚಾರಣೆಯನ್ನು ಮಾರ್ಚ್ 8ಕ್ಕೆ ಮುಂದೂಡಿತು.
ಪ್ರಕರಣವೇನು?
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೆಪ್ಟೆಂಬರ್ 22ರಿಂದ ರಾಜ್ಯದ ನಾಗರಿಕರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸೆಪ್ಟೆಂಬರ್ 25ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಸಮೀಕ್ಷೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತಾದರೂ, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಮಾಹಿತಿ ಒದಗಿಸುವಂತೆ ಸಮೀಕ್ಷೆ ನಡೆಸುವವರು ಒತ್ತಾಯಿಸಬಾರದು, ಸಂಗ್ರಹಿಸಲಾಗುವ ದತ್ತಾಂಶವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹೊರತುಪಡಿಸಿ ಬೇರಾರಿಗೂ ಸೋರಿಕೆಯಾಗದಂತೆ ಗೌಪ್ಯತೆ ಕಾಯ್ದುಕೊಳ್ಳಬೇಕು ಮತ್ತು ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಡಿಸೆಂಬರ್ ಮೊದಲ ವಾರಕ್ಕೆ ಮುಂದೂಡಿತ್ತು.
Related Articles
Thank you for your comment. It is awaiting moderation.


Comments (0)