ಕೊರಗಜ್ಜ ದೇವಸ್ಥಾನದ ಜಾಗದಲ್ಲಿ ಖಾಸಗಿ ಆಸ್ತಿ ಮಾಲೀಕರಿಗೆ ರಸ್ತೆ ನಿರ್ಮಾಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ
- by Jagan Ramesh
- December 3, 2025
- 14 Views
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಬಜಿರೆ ಗ್ರಾಮದ ಬಾಡಾರು ಪ್ರದೇಶದಲ್ಲಿ ಕೊರಗ ಕಲ್ಲು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಸೇರಿದ ಸರ್ಕಾರಿ ಜಾಗದಲ್ಲಿ ಖಾಸಗಿ ಆಸ್ತಿ ಮಾಲೀಕರಿಗಾಗಿ ರಸ್ತೆ ನಿರ್ಮಾಣ ಮಾಡದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಬಜಿರೆ ಗ್ರಾಮದ ಕೊರಗ ಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬಾಡಾರು ಪ್ರದೇಶದ ಸರ್ವೆ ನಂಬರ್ 39/1ಎ ರಲ್ಲಿ ಕೊರಗಜ್ಜ ದೈವಸ್ಥಾನಕ್ಕೆ ಸೇರಿದ 0.80 ಎಕರೆ ಸರ್ಕಾರಿ ಜಮೀನಿನಲ್ಲಿ ಪಕ್ಕದ ಖಾಸಗಿ ಆಸ್ತಿ ಮಾಲೀಕರ ಬಳಕೆಗೆ ರಸ್ತೆ ನಿರ್ಮಾಣ ಮಾಡದಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು.
ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ, ಮಂಗಳೂರು ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಖಾಸಗಿ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ವೇಣೂರು-ಮೂರ್ಜಿ ಜಿಲ್ಲಾ ಪಂಚಾಯತ್ ರಸ್ತೆಯ ಬದಿಯಲ್ಲಿ ಕೊರಗಜ್ಜ ದೈವದ ಸಾನಿಧ್ಯವು ಸುಮಾರು 400 ವರ್ಷಗಳಿಂದ ಇದೆ. ಇದು ಗ್ರಾಮದ ಸರ್ವೆ ನಂಬರ್ 39/1ಎ ರಲ್ಲಿ 0.80 ಎಕರೆ ಸರ್ಕಾರಿ ಜಾಗದಲ್ಲಿದ್ದು, ಸುತ್ತಲು ಕಲ್ಲಿನ ಕಂಬ ಹಾಗೂ ತಂತಿ ಹಾಕಲಾಗಿದೆ. ಏಳೆಂಟು ತಿಂಗಳ ಹಿಂದೆ ಕೊರಗಜ್ಜನ ಗುಡಿಯನ್ನು ಮರು ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಜನರು ಮತ್ತು ಭಕ್ತಾದಿಗಳು ತಮ್ಮ ಸೇವಾ ಕೈಂಕರ್ಯಗಳನ್ನು ಸಲ್ಲಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಈ ಜಾಗದ ಉತ್ತರ ದಿಕ್ಕಿನಲ್ಲಿ ಕೆಲ ಖಾಸಗಿ ವ್ಯಕ್ತಿಗಳ ಜಮೀನಿದ್ದು, ಆ ಜಮೀನಿಗೆ ದೈವಸ್ಥಾನದ ಮುಂಭಾಗದಿಂದ ಹಾದು ಹೋಗುವಂತೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ, ದೈವಸ್ಥಾನದ ಕಾರ್ಯಚಟುವಟಿಕೆಗೆ ತೊಂದರೆ ಆಗಲಿದೆ. ಈ ಸಂಬಂಧ 2025ರ ಅಕ್ಟೋಬರ್ 30ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆಯಾದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Related Articles
Thank you for your comment. It is awaiting moderation.


Comments (0)