ಅತ್ಯಾಚಾರ ಪ್ರಕರಣ; ಪ್ರಜ್ವಲ್ ರೇವಣ್ಣ ಶಿಕ್ಷೆ ಅಮಾನತಿನಲ್ಲಿರಿಸಿ, ಜಾಮೀನು ನೀಡಲು ಹೈಕೋರ್ಟ್ ನಕಾರ

ಬೆಂಗಳೂರು: ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಆಜೀವ ಸೆರೆವಾಸ ಶಿಕ್ಷೆ ಅಮಾನತಿನಲ್ಲಿರಿಸಿ, ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಶಿಕ್ಷೆಯನ್ನು ಅಮಾಮತಿನಲ್ಲಿರಿಸಿ, ಜಾಮೀನು ನೀಡುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಮಧ್ಯಂತರ ಅರ್ಜಿ ಕುರಿತು ಬುಧವಾರ ತೆರೆದ ನ್ಯಾಯಾಲಯದಲ್ಲಿ ಆದೇಶದ ಉಕ್ತಲೇಖನ ನೀಡಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಮೇಲ್ಮನವಿದಾರರು ಎಸಗಿದ್ದಾರೆ ಎನ್ನಲಾದ ಕೃತ್ಯದ‌ ಗಂಭೀರತೆ, ಪ್ರಕರಣದ ದಾಖಲೆಗಳು ಹಾಗೂ ಮೇಲ್ಮನವಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಅದು ಅವರ ವಿರುದ್ಧದ ಇತರ ಪ್ರಕರಣಗಳ ಮೇಲೆ ಬೀರುವ ಪರಿಣಾಮವನ್ನು ಪರಿಗಣಿಸಿದರೆ, ವಿಚಾರಣಾ ನ್ಯಾಯಾಲಯದ ಶಿಕ್ಷೆ ಅಮಾನತಿನಲ್ಲಿರಿಸಿ ಜಾಮೀನು ಮಂಜೂರು ಮಾಡಲು ಇದು ಅರ್ಹ ಪ್ರಕರಣವಲ್ಲ ಎಂದು ತಿಳಿಸಿ, ಮಧ್ಯಂತರ ಅರ್ಜಿ ತಿರಸ್ಕರಿಸಿತು. ಜತೆಗೆ, ಮೇಲ್ಮನವಿಯ ಅಂತಿಮ ವಿಚಾರಣೆಯನ್ನು ಜನವರಿ 12ಕ್ಕೆ ನಿಗದಿಪಡಿಸಿತು.

ವಿಚಾರಣಾ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆ ನಡೆದಿದ್ದು, ಮತ್ತೆ ಹೈಕೋರ್ಟ್‌ನಲ್ಲಿ ಸಾಕ್ಷಿಯ ವಿಚಾರಣೆ ನಡೆಸಲಾಗದು. ತೀರ್ಪಿನಲ್ಲಿರುವ ಅಲ್ಲೊಂದು ಇಲ್ಲೊಂದು ಲೋಪಗಳನ್ನು ನೋಡಲಾಗದು. ಮೇಲ್ಮನವಿದಾರರ ಪರ ಹಿರಿಯ ವಕೀಲರು, ಪ್ರಜ್ವಲ್‌ ವಿರುದ್ಧ ರಾಜಕೀಯ ಪ್ರತೀಕಾರ, ದೂರು ದಾಖಲಿಸುವಲ್ಲಿ ವಿಳಂಬ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿನ ವ್ಯತ್ಯಾಸ, ಅಶ್ಲೀಲ ವಿಡಿಯೊಗಳ ಜಪ್ತಿಯಾಗದಿರುವುದು, ಗನ್ನಿಗಢ ತೋಟವು ಪ್ರಜ್ವಲ್‌ಗೆ ಸೇರಿಲ್ಲವಾದ್ದರಿಂದ ಅವರು ಅಲ್ಲಿಗೆ ಹೋಗಿಯೇ ಇಲ್ಲ, ಬಸವನಗುಡಿಯ ಮನೆಗೂ ಪ್ರಜ್ವಲ್‌ ಹೋಗಿಲ್ಲ, ಸಂತ್ರಸ್ತೆಯು ಗನ್ನಿಗಢ ತೋಟದಲ್ಲಿ ಕೆಲಸವನ್ನೇ ಮಾಡಿಲ್ಲ, ಆ ತೋಟವು ಭವಾನಿ ರೇವಣ್ಣ ಅವರ ಸಹೋದರ ಪ್ರಕಾಶ್‌ ಎಂಬವರಿಗೆ ಸೇರಿದೆ, ವಂಶವಾಹಿ ಪರೀಕ್ಷೆಯನ್ನು ಕಾನೂನಿಗೆ ಅನ್ವಯವಾಗಿ ನಡೆಸಿಲ್ಲ ಎಂಬಿತ್ಯಾದಿ ವಿಚಾರಗಳ ಕುರಿತು ವಾದ ಮಂಡಿಸಿದ್ದು, ಈ ಎಲ್ಲ ವಿಚಾರಗಳನ್ನು ಪ್ರಕರಣದ ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಹಲವು ಹಳೆಯ ಮೇಲ್ಮನವಿಗಳು ಬಾಕಿ ಇದ್ದು, ಈ ಪ್ರಕರಣವನ್ನು ಆಲಿಸಲು ಸಮಯ ಬೇಕಾಗಬಹುದು. ಅಂತಿಮವಾಗಿ ಪ್ರಜ್ವಲ್‌ ಖುಲಾಸೆಗೊಳಿಸಿದರೆ ಅವರ ಸ್ವಾತಂತ್ರ್ಯವನ್ನು ಮರಳಿಸಲಾಗದು. ಆದ್ದರಿಂದ, ಶಿಕ್ಷೆ ಅಮಾನತಿನಲ್ಲಿರಿಸಿ, ಜಾಮೀನು ನೀಡಬೇಕು ಎಂಬ ಪ್ರಜ್ವಲ್‌ ಪರ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

Related Articles

Comments (0)

Leave a Comment