ಮಲ್ಲೇಶ್ವರ ಬಾಂಬ್ ಸ್ಫೋಟ ಪ್ರಕರಣ; ಆರೋಪಿ ಬುಹಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
- by Jagan Ramesh
- December 2, 2025
- 18 Views
ಬೆಂಗಳೂರು: ಹನ್ನೆರಡು ವರ್ಷಗಳ ಹಿಂದೆ ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದ 3ನೇ ಆರೋಪಿಯಾದ ತಮಿಳುನಾಡು ಮೂಲದ ಕಿಚನ್ ಬುಹಾರಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಪ್ರಕರಣದಲ್ಲಿ ಜಾಮೀನು ನಿರಾಕರಿಸಿ 2024ರ ಫೆಬ್ರವರಿ 23ರಂದು ಎನ್‌ಐಎ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಕಿಚನ್ ಬುಹಾರಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ಇತ್ತೀಚೆಗೆ ವಜಾಗೊಳಿಸಿದೆ.
ಹೈಕೋರ್ಟ್ ಆದೇಶವೇನು?
ಮೇಲ್ಮನವಿದಾರ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದು, ಪ್ರಕರಣದಲ್ಲಿ ಆತ ಭಾಗಿಯಾಗಿರುವುದನ್ನು ದೋಷಾರೋಪ ಪಟ್ಟಿಯ ದಾಖಲೆಗಳು ಮೇಲ್ನೋಟಕ್ಕೆ ತೋರಿಸುತ್ತವೆ. ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆ ರಕ್ಷಿಸುವ ಕರ್ತವ್ಯಗಳಿಗೆ ವಿರುದ್ಧವಾಗಿ ಆರೋಪಿ ವರ್ತಿಸಿದ್ದಾನೆ. ಧಾರ್ಮಿಕ ವೈವಿಧ್ಯತೆಗಳನ್ನು ಮೀರಿ ಭಾರತದ ಜನರಲ್ಲಿ ಸಾಮಾನ್ಯ ಸಹೋದರತ್ವದ ಮನೋಭಾವ ಹೊಂದಲು, ಸಂಯೋಜಿತ ಸಂಸ್ಕೃತಿ ಗೌರವಿಸಲು ಮತ್ತು ಸಂರಕ್ಷಿಸಲು, ಸಾರ್ವಜನಿಕ ಆಸ್ತಿ ರಕ್ಷಿಸಲು ಮತ್ತು ಹಿಂಸೆ ತ್ಯಜಿಸಲು ಮೇಲ್ಮನವಿದಾರ ವಿಫಲರಾಗಿದ್ದಾನೆ ಎಂಬುದನ್ನು ದಾಖಲೆಗಳು ತೋರಿಸುತ್ತವೆ. ಆದ್ದರಿಂದ, ಆತನ ಜಾಮೀನು ಅರ್ಜಿ ತಿರಸ್ಕರಸಿರುವ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಲೋಪ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು?
ಮಲ್ಲೇಶ್ವರದಲ್ಲಿ ಬಿಜೆಪಿ ಕಚೇರಿ ಎದುರು 2013ರ ಏಪ್ರಿಲ್ 17ರಂದು ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆ ಸಂಬಂಧ ವೈಯಾಲಿಕಾವಲ್ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾವಣೆಯಾಗಿತ್ತು. ಪ್ರಕರಣ ಸಂಬಂಧ ಒಟ್ಟು 23 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಸದ್ಯ ಪ್ರಕರಣವನ್ನು ಎನ್‌ಐಎ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಕಿಚನ್ ಬುಹಾರಿ, ನಿಷೇದಿತ ಅಲ್-ಉಮ್ಮಾ ಸಂಘಟನೆಯ ಸದಸ್ಯನಾಗಿದ್ದು, ಮೂಲಭೂತ ಧಾರ್ಮಿಕ ಸಿದ್ಧಾಂತಗಳಿಂದ ಪ್ರೇರಿತಗೊಂಡು ಜಿಹಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ಭಾರತದ ವಿರುದ್ಧ ಯುದ್ಧ ಹೂಡಲು ಸಂಚು ರೂಪಿಸಿದ್ದ. ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿರುವ ಆತ, ಬಾಂಬ್ ಸ್ಫೋಟಿಸುವ ಹೊಣೆ ಹೊತ್ತಿದ್ದ. ಇತರ ಆರೋಪಿಗಳಿಂದ ಸ್ಫೋಟಕ ಸಾಮಗ್ರಿ ಖರೀದಿಸಿ ಸಂಗ್ರಹಣೆ ಮಾಡಿದ್ದ. ಅದನ್ನು ತಮಿಳುನಾಡಿನ ಕೊಯಮತ್ತೂರಿನಿಂದ ಈರೋಡ್‌ಗೆ ಕಾರಿನಲ್ಲಿ ಸಾಗಿಸಿ 9ನೇ ಆರೋಪಿಗೆ ನೀಡಿದ್ದ ಎಂಬ ಆರೋಪ ಬುಹಾರಿ ಮೇಲಿದೆ.
Related Articles
Thank you for your comment. It is awaiting moderation.


Comments (0)