ಭಿಕ್ಷಾಟನೆಗೆ ದೂಡಲು ಮಗು ಅಪಹರಿಸಿದ ಆರೋಪ; ಭಿಕ್ಷುಕಿಗೆ ಹೈಕೋರ್ಟ್ ಜಾಮೀನು

ಬೆಂಗಳೂರು: ಭಿಕ್ಷಾಟನೆಗೆ ದೂಡಲು 2 ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಕಳೆದೊಂದು ವರ್ಷದಿಂದ ಜೈಲಿನಲ್ಲಿದ್ದ ಭಿಕ್ಷುಕಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾಮದ ರಾಧಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಆರೋಪಿ ಮಹಿಳೆಯಾಗಿದ್ದು, ಭಿಕ್ಷುಕಿ ಎಂದು ಹೇಳಲಾಗಿದೆ. ಆಕೆ 2024ರ ನವೆಂಬರ್ 19ರಿಂದ ಜೈಲಿನಲ್ಲಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ದೋಷಾರೊಪ ಪಟ್ಟಿಯೂ ಸಲ್ಲಿಕೆಯಾಗಿದೆ. ಹೆಚ್ಚಿನ ತನಿಖೆಗೆ ಆಕೆ ಅಗತ್ಯವಿಲ್ಲ. ಆದ್ದರಿಂದ, ಜಾಮೀನು ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿದಾರೆ 1 ಲಕ್ಷ ರೂ. ಮೊತ್ತಕ್ಕೆ ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಶ್ಯೂರಿಟಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂಬ ಷರತ್ತು ವಿಧಿಸಿ, ಜಾಮೀನು ನೀಡಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರೆ ಪರ ವಕೀಲರು, ರಾಧಾ ಭಿಕ್ಷುಕಿಯಾಗಿದ್ದು, ಮಗುವನ್ನು ಅಪಹರಿಸಿಲ್ಲ. ಬದಲಾಗಿ ಮಾನಸಿಕವಾಗಿ ಅಸ್ವಸ್ಥಳಾಗಿರುವ ಮಗುವಿನ ತಾಯಿಯೇ ಮಗುವನ್ನು ನೀಡಿದ್ದಾರೆ. ಈಗಾಗಲೇ ಪೊಲೀಸರು ತನಿಖೆ ಪೂರ್ಣಗೊಳಿಸಿ, ಅರ್ಜಿದಾರೆ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆಕೆ 2024ರ ನವೆಂಬರ್ 19ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅರ್ಜಿದಾರೆ ಮಹಿಳೆಯಾಗಿದ್ದು, ಮುಂದಿನ ತನಿಖೆಗೆ ಆಕೆಯನ್ನು ಬಂಧನದಲ್ಲಿರಿಸಿಕೊಳ್ಳುವ ಅಗತ್ಯವಿಲ್ಲದ ಕಾರಣವನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ಕೋರಿದ್ದರು.

ಈ ಮನವಿಯನ್ನು ಆಕ್ಷೇಪಿಸಿದ್ದ ಸರ್ಕಾರಿ ವಕೀಲರು, ಭಿಕ್ಷಾಟನೆಗೆ ದೂಡಲು ಮಗುವನ್ನು ತಾಯಿಯಿಂದ 2024ರ ನವೆಂಬರ್ 14ರಂದು ಅರ್ಜಿದಾರೆ ಅಪಹರಿಸಿದ್ದಾರೆ. ನವೆಂಬರ್ 19ರಂದು ಮಗುವಿನೊಂದಿಗೆ ರೈಲ್ವೇ ನಿಲ್ದಾಣದಲ್ಲಿ ಆರೋಪಿತೆ ಸಿಕ್ಕಿಬಿದ್ದಿದ್ದಾರೆ. ಆಕೆಯ ಮೇಲಿನ ಆರೋಪ ಸಾಬೀತುಪಡಿಸಲು ಸಾಕ್ಷ್ಯಧಾರಗಳು ಮೇಲ್ನೋಟಕ್ಕೆ ಲಭ್ಯವಿದೆ. ಜಾಮೀನು ನೀಡಿದರೆ, ಆಕೆ ತಲೆಮರೆಸಿಕೊಳ್ಳುವ ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆ ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದು, ಜಾಮೀನು ನೀಡಬಾರದು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ:
ಮಗುವಿನ ಅಜ್ಜಿ ಸರೋಜಮ್ಮ ಎಂಬುವರು ಚಾಮರಾಜನಗರ ಟೌನ್‌ ಪೊಲೀಸ್‌ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಮಗಳು ಅನಿತಾ ತನ್ನ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ 2024ರ ನವೆಂಬರ್ 8ರಿಂದ ಕಾಣೆಯಾಗಿದ್ದು, ಅನಿತಾ ಮಾನಸಿಕ ಅಸ್ವಸ್ಥಳಾಗಿದ್ದಾಳೆ. ನವೆಂಬರ್ 15ರಂದು ಅನಿತಾ ಪತ್ತೆಯಾಗಿದ್ದು, ಮಗುವನ್ನು ಮಹಿಳೆಯೊಬ್ಬಳು ಭಿಕ್ಷಾಟನೆಗಾಗಿ ತೆಗೆದುಕೊಂಡು ಹೋಗಿದ್ದು, ವಾಪಸ್‌ ಕೊಟ್ಟಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಅರ್ಜಿದಾರೆ ರಾಧಾ ನವೆಂಬರ್ 19ರಂದು ಮೈಸೂರು ರೈಲ್ವೇ ನಿಲ್ದಾಣದಲ್ಲಿ ಮಗುವಿನೊಂದಿಗೆ ಕಂಡುಬಂದಿದ್ದಳು.

Related Articles

Comments (0)

Leave a Comment