ಅತ್ಯಾಚಾರ ಪ್ರಕರಣದ ಪ್ರಾಸಿಕ್ಯೂಷನ್ ಸಾಕ್ಷಿಗಳ ನಡುವೆ ಹೊಂದಾಣಿಕೆ ಇಲ್ಲ; ಹೈಕೋರ್ಟ್ನಲ್ಲಿ ಪ್ರಜ್ವಲ್ ವಕೀಲರ ವಾದ
- by Prashanth Basavapatna
- November 13, 2025
- 34 Views
ಬೆಂಗಳೂರು: ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳ ನಡುವೆ ಹೊಂದಾಣಿಕೆಯ ಕೊರತೆ ಇದ್ದು, ಇಡೀ ಪ್ರಕರಣಕ್ಕೆ ಭದ್ರ ಬುನಾದಿಯೇ ಇಲ್ಲದಿರುವ ಕಾರಣ ಪ್ರಜ್ವಲ್ ರೇವಣ್ಣ ಅವರನ್ನು ಕಸ್ಟಡಿಯಲ್ಲಿ ಮುಂದುವರಿಸಬಾರದು ಎಂದು ಪ್ರಜ್ವಲ್ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದರು.
ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಪ್ರಜ್ವಲ್ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿ, ಹಾಲಿ ಪ್ರಕರಣದಲ್ಲಿ ಸಾಕ್ಷಿಗಳ ನಡುವೆ ಹೊಂದಾಣಿಕೆ ಇಲ್ಲ. ಇಡೀ ಪ್ರಕರಣಕ್ಕೆ ಭದ್ರ ಅಡಿಪಾಯವೇ ಇಲ್ಲದಿರುವುದರಿಂದ ಮೇಲ್ಮನವಿದಾರರನ್ನು ಕಸ್ಟಡಿಯಲ್ಲಿ ಮುಂದುವರಿಸಬಾರದು. ಇದು ಯಾವುದೇ ಆರೋಪ ಸಾಬೀತಾಗುವ ಪುರಾವೆಗಳಿಲ್ಲದ ಪ್ರಕರಣವಾಗಿದ್ದು, ಮಾಧ್ಯಮ ವಿಚಾರಣೆಗೆ ಒಳಪಟ್ಟಿದೆ. ವಿದ್ಯುನ್ಮಾನ, ವೈದ್ಯಕೀಯ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಾಕ್ಷಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಓಪನ್ ಸೋರ್ಸ್ನಿಂದ ಪಡೆದ ಆಕ್ಷೇಪಿತ ವಿಡಿಯೊಗಳು ವಿಶ್ವಾಸಾರ್ಹವಾಗಿಲ್ಲ ಎಂದರು.
ಆಪಾದಿತ ಕೃತ್ಯವು 3-4 ವರ್ಷಗಳ ಬಳಿಕ ವರದಿಯಾಗಿದ್ದು, ಸಂತ್ರಸ್ತೆ ಪೊಲೀಸರ ನಿಯಂತ್ರಣಕ್ಕೆ ಬಂದರೂ ಆಕೆಯ ದೂರು ದಾಖಲಿಸಿಕೊಳ್ಳುವಲ್ಲಿ ವಿಳಂಬವಾಗಿದೆ. ಘಟನೆ ನಡೆದಿದೆ ಎನ್ನಲಾದ ತೋಟದ ಮನೆ ಈಗ ಇಲ್ಲ. ಅದರ ಮಾಲೀಕತ್ವ ಪ್ರಕಾಶ್ ಎಂಬುವರ ಹೆಸರಿನಲ್ಲಿದೆ. ಇದಲ್ಲದೇ ತನಿಖಾಧಿಕಾರಿಗಳು ಸಂತ್ರಸ್ತೆಯ ಕರೆ ದಾಖಲೆ (ಸಿಡಿಆರ್) ಹಾಜರುಪಡಿಸಲು ವಿಫಲರಾಗಿದ್ದಾರೆ. ಘಟನೆ ನಡೆದಾಗ ಆಕೆ ಎಲ್ಲಿ ಇದ್ದರು ಎಂಬುದನ್ನು ಖಾತ್ರಿಪಡಿಸಲು ಸಿಡಿಆರ್ ಅಗತ್ಯವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಸಂತ್ರಸ್ತೆಯನ್ನು 2024ರ ಮೇ 9 ರಂದು ತೋಟದ ಮನೆಗೆ ಕರೆದೊಯ್ಯಲಾಗಿದ್ದು, ಆ ಸಂದರ್ಭದಲ್ಲಿ ಕೃತ್ಯ ನಡೆದ ಮನೆ ಇರಲಿಲ್ಲ. ಅಂದು ಸಂತ್ರಸ್ತೆ ತೊಟ್ಟಿದ್ದ ಬಟ್ಟೆಗಳು ಸಿಕ್ಕಿಲ್ಲ. ತನಿಖಾಧಿಕಾರಿಗೆ ವರ್ಷಗಳ ಬಳಿಕ ತೋಟದ ಮನೆಗೆ ಹೋಗಿ ಕೃತ್ಯ ನಡೆದ ದಿನ ತೊಟ್ಟಿದ್ದ ಬಟ್ಟೆ ಜಪ್ತಿ ಮಾಡಬೇಕು ಎಂಬ ಯೋಚನೆ ಬಂದಿದ್ದು, ಅಂದು ತನಿಖಾಧಿಕಾರಿಯ ಜತೆ ಸಂತ್ರಸ್ತೆ ತೆರಳಿರಲಿಲ್ಲ. ಇದು ಪ್ರಶ್ನಾರ್ಹವಾದ ಜಪ್ತಿಯಾಗಿದ್ದು, ಇದಕ್ಕೆ ತನಿಖಾಧಿಕಾರಿಯಿಂದ ಯಾವುದೇ ವಿವರಣೆ ಇಲ್ಲ ಎಂದು ಆಕ್ಷೇಪಿಸಿದರು.
ಆಗಸ್ಟ್ 1ರಂದು ಪ್ರಜ್ವಲ್ರನ್ನು ದೋಷಿ ಎಂದು ಘೋಷಿಸಲಾಗಿದ್ದು, ಆಗಸ್ಟ್ 2ರಂದು ಶಿಕ್ಷೆ ವಿಧಿಸಲಾಗಿದೆ. ಪ್ರಜ್ವಲ್ಗೆ ಜೀವನ ಪರ್ಯಂತ ಶಿಕ್ಷೆ ವಿಧಿಸುವುದಕ್ಕೂ ಮುನ್ನ ಅವರನ್ನು ಸಮರ್ಥಿಸಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಲಾಗಿಲ್ಲ ಎಂದು ತಿಳಿಸಿದ ಸಿದ್ಧಾರ್ಥ್ ಲೂಥ್ರಾ ತಮ್ಮ ವಾದ ಪೂರ್ಣಗೊಳಿಸಿದರು.
ವಾದ ಆಲಿಸಿದ ನ್ಯಾಯಪೀಠ, ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರ ವಾದ ಮಂಡನೆಗೆ ನವೆಂಬರ್ 25ರಂದು ದಿನ ನಿಗದಿಗೊಳಿಸಿತಲ್ಲದೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)