ಧರ್ಮಸ್ಥಳ ಪ್ರಕರಣ; 74 ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಸೌಜನ್ಯಾ ತಾಯಿಯಿಂದ ಹೈಕೋರ್ಟ್‌ಗೆ ಪಿಐಎಲ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳಲ್ಲಿ ಹೂತುಹಾಕಲಾಗಿರುವ ಎಲ್ಲ 74 ಅನಾಥ ಶವಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶ ನೀಡುವಂತೆ ಕೋರಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

ಧರ್ಮಸ್ಥಳದಲ್ಲಿ 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಾ ತಾಯಿ ಕುಸುಮವತಿ ಈ ಪಿಐಎಲ್ ಸಲ್ಲಿಸಿದ್ದು, ಅರ್ಜಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿಯು ಇನ್ನಷ್ಟೇ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.

ಅರ್ಜಿಯಲ್ಲೇನಿದೆ?
ಧರ್ಮಸ್ಥಳ ಗ್ರಾಮದಲ್ಲಿ 1990ರಿಂದ 2021ರ ನಡುವಿನ 31 ವರ್ಷಗಳಲ್ಲಿ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ (ಯುಡಿಆರ್) ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ, ಸಮಗ್ರ ತನಿಖೆ ನಡೆಸುವಂತೆ ಕೋರಿ ಅರ್ಜಿದಾರರು ಹಾಗೂ ಇತರ ಬಾಧಿತ ಕುಟುಂಬಗಳ ವತಿಯಿಂದ 2025ರ ಅಕ್ಟೋಬರ್ 11ರಂದು ಎಸ್‌ಐಟಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿತ್ತು. ಎಲ್ಲ 74 ಪ್ರಕರಣಗಳಿಗೆ ಸಂಬಂಧಿಸಿದ ದಿನಾಂಕ, ಸ್ಥಳ, ಯುಡಿಆರ್ ಸಂಖ್ಯೆ, ಸಮಾಧಿಯ ಸ್ಥಳಗಳು ಇನ್ನಿತರ ಮಾಹಿತಿಯೊಳಗೊಂಡ ಸಂಪೂರ್ಣ ವಿವರಗಳನ್ನು ಒದಗಿಸಲಾಗಿತ್ತು. ಆದರೆ, ಎಸ್‌ಐಟಿ ಅಧಿಕಾರಿಗಳು ನಮ್ಮ ಮನವಿ ಆಧರಿಸಿ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ವಿಶೇಷ ತನಿಖಾ ತಂಡದ ಕೆಲಸವನ್ನು ಪ್ರಶ್ನಿಸಲು, ಟೀಕಿಸಲು ಅಥವಾ ಅದರಲ್ಲಿ ಹಸ್ತಕ್ಷೇಪ ಮಾಡಲು ಈ ಪಿಐಎಲ್ ಸಲ್ಲಿಸಲಾಗಿಲ್ಲ. ಬದಲಿಗೆ ರಾಜಕೀಯ, ಸಾಮಾಜಿಕ ಅಥವಾ ಬಾಹ್ಯ ಒತ್ತಡಗಳಿಂದ ಮುಕ್ತವಾಗಿ, ಪರಿಣಾಮಕಾರಿ ಮತ್ತು ವ್ಯವಸ್ಥಿತವಾಗಿ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಎಸ್‌ಐಟಿಗೆ ನ್ಯಾಯಾಲಯ ನಿರ್ದೇಶಿಸಬೇಕು. ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದರೆ ತನಿಖೆಯಲ್ಲಿ ಲೋಪಗಳಾಗದಂತೆ ಹಾಗೂ ಮತ್ತೆ ತನಿಖೆ ಹಳಿತಪ್ಪದಂತೆ ನೋಡಿಕೊಳ್ಳಬಹುದಾಗಿದ್ದು, ಇದಕ್ಕಾಗಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ಪಿಐಎಲ್‌ನಲ್ಲಿ ವಿವರಿಸಲಾಗಿದೆ.

ಮನವಿ ಏನು?
• ಅರ್ಜಿದಾರರು ಅಕ್ಟೋಬರ್ 11ರಂದು ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾದ ಎಲ್ಲ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಲು ಪ್ರತಿವಾದಿ ಎಸ್‌ಐಟಿಗೆ ನಿರ್ದೇಶಿಸಬೇಕು.

• ಪ್ರತಿ ಎಫ್‌ಐಆರ್‌ಗೂ ಪ್ರತ್ಯೇಕ ಎಫ್‌ಐಆರ್ ಸಂಖ್ಯೆ ಹಾಗೂ ಕೇಸ್ ಸಂಖ್ಯೆ ನಿಗದಿಪಡಿಸಬೇಕು ಹಾಗೂ ಪ್ರತಿ ನಿರ್ದಿಷ್ಟ ಪ್ರಕರಣದ ತನಿಖೆಗೂ ವೈಯಕ್ತಿಕ ಜವಾಬ್ದಾರಿ ಹೊಂದಿರುವ ತನಿಖಾಧಿಕಾರಿಯನ್ನು ನಿಯೋಜಿಸಲು ಆದೇಶಿಸಬೇಕು.

• ಭೂಮಿ ಒಳಹೊಕ್ಕುವ ರೇಡಾರ್‌ನಂತಹ ಆಧುನಿಕ ಸಾಧನಗಳನ್ನು ಬಳಸಿ ಸಮಾಧಿ ಸ್ಥಳವನ್ನು ಪತ್ತೆಹಚ್ಚಿ, ವಿಧಿವಿಜ್ಞಾನ ಪರೀಕ್ಷೆಗಾಗಿ ಅವಶೇಷಗಳನ್ನು ಹೊರತೆಗೆಯುವಂತೆ ಹಾಗೂ ಡಿಎನ್‌ಎ, ದೈಹಿಕ ಚಹರೆ, ಕಾಣೆಯಾದ ವ್ಯಕ್ತಿಗಳ ವರದಿಗಳೊಂದಿಗೆ ಹೊಂದಾಣಿಕೆ ಮಾಡಿ ಸಂತ್ರಸ್ತರನ್ನು ಪತ್ತೆ ಹಚ್ಚಲು, ವಿಧಿವಿಜ್ಞಾನ ರೋಗಶಾಸ್ತ್ರದ ಮೂಲಕ ಅವರ ಸಾವಿಗೆ ನಿಖರ ಕಾರಣವನ್ನು ನಿರ್ಧರಿಸಲು, ಸಾಕ್ಷಿಗಳನ್ನು ಗುರುತಿಸಿ ಅವರ ಹೇಳಿಕೆಗಳನ್ನು ದಾಖಲಿಸಲು ಹಾಗೂ ಅಪರಾಧಿಗಳನ್ನು ಗುರುತಿಸಿ, ವಿಚಾರಣೆಗೆ ಒಳಪಡಿಸಲು ಎಸ್‌ಐಟಿಗೆ ನಿರ್ದೇಶಿಸಬೇಕು.

• ಎಲ್ಲ 74 ಸಂತ್ರಸ್ತರ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಾಣೆಯಾದವರನ್ನು ಹುಡುಕುತ್ತಿರುವ ಕುಟುಂಬಗಳಿಗೆ ಮಾಹಿತಿ ಒದಗಿಸಲು ತಕ್ಷಣವೇ ಕ್ರಮ ಕೈಗೊಳ್ಳಲು ಎಸ್‌ಐಟಿಗೆ ನಿರ್ದೇಶಿಸಬೇಕು. ಶವಗಳು ದೊರೆತ ದಿನಾಂಕ, ಸ್ಥಳ, ಲಿಂಗ, ವಯಸ್ಸು ಇನ್ನಿತರ ಮಾಹಿತಿಗಳು ಸೇರಿ ಎಲ್ಲ 74 ಪ್ರಕರಣಗಳ ವಿವರಗಳನ್ನು ವ್ಯಾಪಕವಾಗಿ ವಿತರಣೆಯಾಗುವ ಕನಿಷ್ಠ ಮೂರು ಪತ್ರಿಕೆಗಳಲ್ಲಿ (ಕನ್ನಡ, ಇಂಗ್ಲಿಷ್‌) ಹಾಗೂ ಸಾರ್ವಜನಿಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಆದೇಶಿಸಬೇಕು.

• ಸಾರ್ವಜನಿಕ ಪ್ರಕಟಣೆಯಲ್ಲಿ ಕಾಣೆಯಾದ ವ್ಯಕ್ತಿಗಳ ಸಂಬಂಧಿಕರು ಸೂಕ್ತ ಮಾಹಿತಿಯೊಂದಿಗೆ ಎಸ್‌ಐಟಿಯನ್ನು ಸಂಪರ್ಕಿಸಲು ಸ್ಪಷ್ಟ ಸೂಚನೆ ನೀಡಲು ಹಾಗೂ ನಿಯೋಜಿತ ಅಧಿಕಾರಿಗಳ ಸಂಪರ್ಕ ವಿವರಗಳನ್ನು ಒದಗಿಸಲು ನಿರ್ದೇಶಿಸಬೇಕು.

• ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ವಸ್ತುಸ್ಥಿತಿ ವರದಿಯನ್ನು ತಿಂಗಳಿಗೊಮ್ಮೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶಿಸಬೇಕು.

Related Articles

Comments (0)

Leave a Comment