- ಪ್ರಮುಖ ಸಮಾಚಾರಗಳು
- Like this post: 3
ಹೈಕೋರ್ಟ್ ಸಲಹೆಯಂತೆ ನಡೆದ ಶಾಂತಿಸಭೆ; ಚಿತ್ತಾಪುರದಲ್ಲಿ ನ.13 ಅಥವಾ 16ರಂದು ಪಥಸಂಚಲನಕ್ಕೆ ಅನುಮತಿಗೆ ಆರ್‌ಎಸ್‌ಎಸ್ ಮನವಿ
- by Jagan Ramesh
- November 5, 2025
- 6 Views
ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇದೇ 13 ಅಥವಾ 16ರಂದು ಪಥಸಂಚಲನಕ್ಕೆ ಅನುಮತಿ ನೀಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ರಾಜ್ಯ ಸರ್ಕಾರದ ಮುಂದೆ ಬುಧವಾರ ಪ್ರಸ್ತಾವನೆ ಮುಂದಿಟ್ಟಿದೆ.
ಪಥಸಂಚನಲಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಕಲಬುರಗಿ ಪೀಠದ ಸಲಹೆಯಂತೆ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಬುಧವಾರ ಸಂಜೆ ಶಾಂತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಆರ್‌ಎಸ್‌ಎಸ್ ಸಂಘಟನೆಯ ಪರ ವಕೀಲರು ಈ ಪ್ರಸ್ತಾವ ಮಂಡಿಸಿದ್ದು, ಇದೀಗ ಸರ್ಕಾರ ಅನುಮತಿ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಸಭೆಯಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಸರ್ಕಾರ ನವೆಂಬರ್ 7ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಲಿದೆ. ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಜಿಲ್ಲಾಡಳಿತದ ಅಧಿಕಾರಿಗಳು, ಮೂಲ ರಿಟ್ ಅರ್ಜಿದಾರ ಅಶೋಕ್ ಪಾಟೀಲ್, ಹಿರಿಯ ವಕೀಲ ಅರುಣ್ ಶ್ಯಾಮ್, ಕಡ್ಲೂರ್ ಸತ್ಯನಾರಾಯಣಾಚಾರ್ಯ ಮತ್ತಿತರರು ಶಾಂತಿಸಭೆಯಲ್ಲಿ ಭಾಗವಹಿಸಿದ್ದರು.
ಆರ್‌ಎಸ್‌ಎಸ್ ಪ್ರಸ್ತಾವನೆ:
ಚಿತ್ತಾಪುರದಲ್ಲಿ ನವೆಂಬರ್ 13 ಅಥವಾ 16ರಂದು ಪಥಸಂಚಲನ ನಡೆಸಲು ಉದ್ದೇಶಿಸಲಾಗಿದ್ದು ಅದಕ್ಕೆ ಅನುಮತಿ ನೀಡಬೇಕು. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಪಥಸಂಚಲನದಲ್ಲಿ ಚಿತ್ತಾಪುರ ತಾಲೂಕು ಆರ್‌ಎಸ್‌ಎಸ್ ಸ್ವಯಂ ಸೇವಕರು ಮಾತ್ರ ಭಾಗವಹಿಸುತ್ತಾರೆ. ನೆರೆಯ ತಾಲೂಕಿನವರು ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ಪಥಸಂಚಲನದಲ್ಲಿ 600ರಿಂದ 850 ಸ್ವಯಂ ಸೇವಕರು ಗಣವೇಶದಲ್ಲಿ ಭಾಗವಹಿಸುತ್ತಾರೆ. ಸಾಮಾನ್ಯವಾಗಿ ನಡೆಸುವ ನಾಲ್ಕು ಸಾಲಿನ ಬದಲು 3 ಸಾಲಿನಲ್ಲಿಯೇ 3 ಕಿ.ಮೀ. ಪಥಸಂಚನ ನಡೆಸಲಾಗುತ್ತದೆ. ಅದು ಸುಮಾರು 37ರಿಂದ 45 ನಿಮಿಷದೊಳಗೆ ಪೂರ್ಣಗೊಳ್ಳಲಿದೆ. ಈ ವೇಳೆ ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರಿಗೆ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಪಥಸಂಚಲನದ ವೇಳೆ ಯಾವುದೇ ಘೋಷಣೆ ಕೂಗುವುದಿಲ್ಲ. ಕೇವಲ ಬ್ಯಾಂಡ್ ವಾದ್ಯ ನುಡಿಸಲಾಗುತ್ತದೆ. ಯಾರ ಭಾವನೆಗಳಿಗೂ ಆರ್‌ಎಸ್‌ಎಸ್ ಧಕ್ಕೆ ತರುವುದಿಲ್ಲ. ಯಾರನ್ನೂ ಅಪಹಾಸ್ಯ ಮಾಡುವುದಿಲ್ಲ. ಶಾಂತಿ ಭಂಗ ತರುವುದಿಲ್ಲ. ಇಡೀ ಪಥಸಂಚಲವನ್ನು ಡ್ರೋನ್ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಲಾಗುತ್ತದೆ. ಗೂಗಲ್ ಮ್ಯಾಪ್ ಮೂಲಕ ಫೋಟೋಗಳನ್ನು ತೆಗೆಯಲಾಗುತ್ತದೆ. ಇದಲ್ಲದೆ, ಪಥಸಂಚಲನಕ್ಕೆ ಪರವಾನಗಿ ನೀಡಲು ಜಿಲ್ಲಾಡಳಿತ ವಿಧಿಸುವ ಎಲ್ಲ ಷರತ್ತುಗಳನ್ನು ಪಾಲಿಸಲಾಗುವುದು. ಸ್ವಯಂಸೇವಕರ ವಾಹನಗಳನ್ನು ಬಜಾಜ್ ಕಲ್ಯಾಣ ಮಂಟಪ ಆವರಣದಲ್ಲಿ ನಿಲ್ಲಿಸಲು ಅಗತ್ಯ ಸಿದ್ಧತೆ ಮಾಡಲಾಗಿದೆ. ಪಥಸಂಚಲನದ ಕೊನೆಯಲ್ಲಿ ಬಾಜಾಜ್ ಕಲ್ಯಾಣ ಮಂಟಪದೊಳಗೆ ಸ್ವಯಂಸೇವಕರ ಸಭೆ ನಡೆಸಲಿದ್ದು, ಅದಕ್ಕಾಗಿ ಅಗತ್ಯ ಅನುಮತಿಯನ್ನು ಈಗಾಗಲೇ ಪಡೆಯಲಾಗಿದೆ ಎಂದು ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
Related Articles
Thank you for your comment. It is awaiting moderation.


Comments (0)