- ಟ್ರಯಲ್ ಕೋರ್ಟ್
- Like this post: 12
ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಮತ್ತಿತರಿಂದ ಆರೋಪ ನಿರಾಕರಣೆ, ನ.10ರಂದು ವಿಚಾರಣೆ ದಿನಾಂಕ ನಿಗದಿಪಡಿಸಲಿರುವ ಕೋರ್ಟ್
- by Jagan Ramesh
- November 3, 2025
- 1013 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳ ವಿರುದ್ಧದ ದೋಷಾರೋಪ ನಿಗದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರೋಪಿಗಳು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ನವೆಂಬರ್ 10ರಂದು ಪ್ರಕರಣದ ಮುಂದಿನ ಹಂತದ ವಿಚಾರಣೆ (ಟ್ರಯಲ್) ದಿನಾಂಕ ನಿಗದಿಪಡಿಸುವುದಾಗಿ ನ್ಯಾಯಾಲಯ ತಿಳಿಸಿದೆ.
ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖಾಧಿಕಾರಿಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೊರಿಸಲಾಗಿರುವ ಆರೋಪ ನಿಗದಿ ಹಿನ್ನೆಯಲ್ಲಿ ಸೋಮವಾರ ನಟ ದರ್ಶನ್, ಪವಿತ್ರಾ ಗೌಡ ಸೇರಿ 17ಆರೋಪಿಗಳನ್ನು 64ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಐ.ಪಿ. ನಾಯ್ಕ್ ಅವರ ಮುಂದೆ ಹಾಜರು ಪಡಿಸಲಾಗಿತ್ತು.
ಆರೋಪಿಗಳನ್ನು ಕೋರ್ಟ್ ಆವರಣದೊಳಗೆ ನಿಲ್ಲಿಸಿ ಹಾಜರಾತಿ ಖಾತ್ರಿ ಪಡಿಸಿಕೊಳ್ಳಲಾಯಿತು. ಆ ನಂತರ ಆರೋಪ ನಿಗದಿ ಪ್ರಕ್ರಿಯೆ ಆರಂಭಿಸಿದ ನ್ಯಾಯಾಲಯ, ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳ ಹೆಸರುಗಳನ್ನು ಉಲ್ಲೇಖಿಸಿ ಅವರ ಮೇಲಿರುವ ಆರೋಪಗಳ ಬಗ್ಗೆ ಓದಿ ಹೇಳಿ, ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಆರೋಪಿಗಳಿಗೆ ಸೂಚಿಸಿತು. ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದರು. ಇದರಿಂದ, ನ್ಯಾಯಾಧೀಶರು ನವೆಂಬರ್ 10ರಂದು ವಿಚಾರಣೆಯ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿ, ಪ್ರಕರಣವನ್ನು ಮುಂದೂಡಿದರು.
ಆರೋಪಪಟ್ಟಿ ಓದಿದ ನ್ಯಾಯಾಧೀಶರು:
ಇದಕ್ಕೂ ಮುನ್ನ, ದೋಷಾರೋಪ ಪಟ್ಟಿಯಲ್ಲಿನ ಅಂಶಗಳನ್ನು ಓದಿದ ನ್ಯಾಯಾಧೀಶರು, ಪ್ರಕರಣದ 1ನೇ ಆರೋಪಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿಯಿಂದ ಬಂದ ಸಂದೇಶಕ್ಕೆ ಸಂಬಂಧಿಸಿದಂತೆ ಆರೋಪಿಗಳೆಲ್ಲರೂ ಒಳಸಂಚು, ಸಾಕ್ಷ್ಯನಾಶ, ಮಾರಣಾಂತಿಕ ಕೊಲೆ ಹಾಗೂ ಅಕ್ರಮಕೂಟದಲ್ಲಿ ಭಾಗಿಯಾಗಿರುವ ಆರೋಪವಿದೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಆರ್.ಆರ್. ನಗರದ ಪಟ್ಣಣಗೆರೆ ಶೆಡ್ಗೆ ಕರೆತಂದು ಮರದ ಪಟ್ಟಿ ಹಾಗೂ ಇತರ ವಸ್ತುಗಳಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಚಪ್ಪಲಿಯಿಂದ ಪವಿತ್ರಾ ಗೌಡ ಹೊಡೆದು ಹಲ್ಲೆ ಮಾಡಿದರೆ, ಪ್ರಕರಣದ 2ನೇ ಆರೋಪಿ ದರ್ಶನ್ ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿ ಆತನ ಮರ್ಮಾಂಗದ ಮೇಲೆ ಹಲ್ಲೆ ಮಾಡಿದ್ದಾರೆ. ದರ್ಶನ್ ಆಪ್ತರಾದ ನಾಗರಾಜ್ ಹಾಗೂ ಇತರ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ಕೃತ್ಯ ಎಸಗಿದ್ದಾರೆ. ಈ ವೇಳೆ ಕೆಲ ಆರೋಪಿಗಳಿಗೆ ಹಣದ ಆಸೆ ತೋರಿಸಿ ಸಂಚಿನಲ್ಲಿ ಭಾಗಿಯಾಗುವಂತೆ ಮಾಡಲಾಗಿದೆ. ಇನ್ನು ಕೆಲ ಆರೋಪಿಗಳಿಗೆ ಹಣದ ಅಮಿಷವೊಡ್ಡಿ ಕೊಲೆ ಎಸಗಿರುವುದಾಗಿ ಪೊಲೀಸರಿಗೆ ಶರಣಾಗುವಂತೆ ಮಾಡಲಾಗಿದೆ. ಕೃತ್ಯದ ವೇಳೆ ಮೊಬೈಲ್ನಲ್ಲಿ ಸೆರೆಹಿಡಿದಿದ್ದ ಫೋಟೊ ಡಿಲೀಟ್ ಮಾಡಿ, ಸಾಕ್ಷ್ಯ ನಾಶಪಡಿಸಿದ ಆರೋಪ ಮಾಡಲಾಗಿದೆ ಎಂದು ಹೇಳಿದರು.
ಕೊಲೆಗೂ ನಮಗೂ ಸಂಬಂಧವಿಲ್ಲ:
ಆರೋಪಗಳನ್ನು ಓದಿದ ಬಳಿಕ, ಹತ್ಯೆ ಪ್ರಕರಣದಲ್ಲಿ ನಿಮ್ಮ ಮೇಲಿನ ಆರೋಪಗಳ ಬಗ್ಗೆ ಏನು ಹೇಳುವಿರಿ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಆಗ ಆರೋಪಿಗಳು, ನಮಗೂ ಈ ಕೊಲೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಮೇಲಿನ ಆರೋಪಗಳು ಸುಳ್ಳಾಗಿವೆ. ಹೀಗಾಗಿ, ಪ್ರಕರಣದ ವಿಚಾರಣೆ ಎದುರಿಸಲು ಸಿದ್ಧ ಎಂದು ಉತ್ತರಿಸಿದರು.
ತಂದೆ ತಿಥಿ ಕಾರ್ಯ ಬಿಟ್ಟು ಕೋರ್ಟ್ಗೆ ಹಾಜರು:
ಪ್ರಕರಣದ 14ನೇ ಆರೋಪಿಯಾದ ಪ್ರದೂಷ್ ರಾವ್ಗೆ ಆತನ ತಂದೆ ನಿಧನ ಹಿನ್ನೆಲೆಯಲ್ಲಿ ನ್ಯಾಯಾಲಯ ಒಂದು ತಿಂಗಳ ಮಧ್ಯಂತರ ಜಾಮೀನು ನೀಡಿತ್ತು. ಸೋಮವಾರ ಆತನ ತಂದೆಯ 11ನೇ ದಿನದ ತಿಥಿ ಕಾರ್ಯ ಮಾಡಬೇಕಿತ್ತು. ಆದರೆ, ಕೋರ್ಟ್ ದೋಷಾರೋಪ ನಿಗದಿಪಡಿಸಿ ಎಲ್ಲ ಆರೋಪಿಗಳು ಖುದ್ದು ಹಾಜರಾಗುವಂತೆ ಸೂಚಿಸಿದ್ದರಿಂದ ಅನಿವಾರ್ಯವಾಗಿ ಪ್ರದೂಷ್ ನ್ಯಾಯಾಲಯಕ್ಕೆ ಹಾಜರಾದರು.
ಅಭಿಮಾನಿಗಳಿಂದ ‘ಡಿ ಬಾಸ್’ ಘೋಷಣೆ:
ಕೋರ್ಟ್ನಿಂದ ನಟ ದರ್ಶನ್ ಅವರನ್ನು ಕರೆದೊಯ್ಯುವಾಗ ಅವರ ಅಭಿಮಾನಿಗಳು ಡಿ ಬಾಸ್, ಡಿ ಬಾಸ್ ಎಂದು ಘೋಷಣೆ ಕೂಗಿದರು. ದರ್ಶನ್ನನ್ನು ನೋಡಲು ಮುಗಿ ಬಿದ್ದರು. ದರ್ಶನ್ ಇದ್ದ ವಾಹನದ ಹಿಂದೆ ಓಡಿದರು. ಬಿಗಿ ಭದ್ರತೆಯಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳನ್ನು ಪೊಲೀಸರು ವಾಹನದಲ್ಲಿ ಜೈಲಿಗೆ ಕರೆದೊಯ್ದರು.
ಕಿಕ್ಕಿರಿದು ಸೇರಿದ್ದ ವಕೀಲರು:
ಇದಕ್ಕೂ ಮುನ್ನ ಪ್ರಕರಣದ ವಿಚಾರಣೆಯನ್ನು ಸಮೀಪದಿಂದಲೇ ಗಮನಿಸಲು ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಕೋರ್ಟ್ ಹಾಲ್ನಲ್ಲಿ ಜಮಾಯಿಸಿದ್ದರು. ಕಿಕ್ಕಿರಿದು ಜಮಾಯಿಸಿದ್ದ ವಕೀಲರನ್ನು ಕಂಡ ನ್ಯಾಯಾಧೀಶರು, ಇಷ್ಟು ಮಂದಿ ಸೇರಿದರೆ ದೋಷಾರೋಪ ಹೊರಿಸುವುದಾದರು ಹೇಗೆ? ಆರೋಪಿಗಳನ್ನು ಕರೆದು ನಿಲ್ಲಿಸುವುದಾರೂ ಎಲ್ಲಿ? ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಮಾತ್ರವೇ ಹಾಲ್ನಲ್ಲಿ ಇರಬೇಕು. ಇಲ್ಲವಾದರೆ ವಿಚಾರಣೆ ಮುಂದೂಡಲಾಗುವುದು ಎಂದು ನ್ಯಾಯಾಧೀಶರು ಎಚ್ಚರಿಸಿದರು. ನ್ಯಾಯಾಧೀಶರ ಕೊಠಡಿಯಲ್ಲಿ ವಿಚಾರಣೆ ನಡೆಸುವಂತೆ ಬಳಿಕ ಆರೋಪಿಗಳ ಪರ ವಕೀಲರು ಮನವಿ ಮಾಡಿದರು. ಸ್ವಲ್ಪ ಮಂದಿ ಹೊರ ಹೋದ ಬಳಿಕ ವಿಚಾರಣೆ ಆರಂಭವಾಯಿತು.
ಆರೋಪ ನಿಗದಿ ಪ್ರಕ್ರಿಯೆ ಮಾಡಲಾಗಿದೆ. ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಸಾಕ್ಷ್ಯ ವಿಚಾರಣೆಗೆ ಪ್ರಾಸಿಕ್ಯೂಷನ್ ಅವರು ಮೊದಲೇ ನಮಗೆ ಅರ್ಜಿ ಕೊಡಬೇಕು. ಮೊದಲ ಸಾಕ್ಷಿ ಯಾರು? ಯಾರನ್ನು ಮೊದಲ ವಿಚಾರಣೆ ಮಾಡುತ್ತಾರೆ ಎಂಬ ಅರ್ಜಿ ಕೊಡಬೇಕು.
– ಸುನೀಲ್, ದರ್ಶನ್ ಪರ ವಕೀಲರು
Related Articles
Thank you for your comment. It is awaiting moderation.


Comments (0)