- ಟ್ರಯಲ್ ಕೋರ್ಟ್
- Like this post: 4
ಫೋರ್ಜರಿ ಪ್ರಕರಣ; ರಜನಿಕಾಂತ್ ಪತ್ನಿ ಲತಾ ವಿರುದ್ಧದ ಆರೋಪ ಕೈಬಿಡಲು ಕೋರ್ಟ್ ನಕಾರ
- by Jagan Ramesh
- October 15, 2025
- 30 Views

ಬೆಂಗಳೂರು: ಕೊಚಾಡಿಯನ್ ಚಲನಚಿತ್ರದ ಆರ್ಥಿಕ ನಷ್ಟ ವಿಚಾರ ಸಂಬಂಧ ದಾಖಲಾಗಿದ್ದ ಫೋರ್ಜರಿ ಪ್ರಕರಣದಲ್ಲಿ ನಟ ರಜನಿಕಾಂತ್ ಅವರ ಪತ್ನಿ ಲತಾ ವಿರುದ್ಧದ ಆರೋಪಗಳನ್ನು ಕೈಬಿಡಲು ಬೆಂಗಳೂರಿನ 48ನೇ ಎಸಿಜೆಎಂ ನ್ಯಾಯಾಲಯ ನಿರಾಕರಿಸಿದೆ.
ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಫೋರ್ಜರಿ ಪ್ರಕರಣದಿಂದ ಆರೋಪಮುಕ್ತಗೊಳಿಸುವಂತೆ ಕೋರಿ ಮೊದಲನೇ ಆರೋಪಿ ಲತಾ ರಜನಿಕಾಂತ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಾಧೀಶೆ ಜ್ಯೋತಿ ಶಾಂತಪ್ಪ ಕಾಳೆ ಅವರು ಇತ್ತೀಚೆಗೆ ವಜಾಗೊಳಿಸಿದ್ದಾರೆ.
ಕೋರ್ಟ್ ಆದೇಶವೇನು?
ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿದ್ದಾರೆ. ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದಾರೆ ಹಾಗೂ ಮಹಜರು ನಡೆಸಿದ್ದಾರೆ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ ಸಾಕ್ಷಿಗಳನ್ನು ಉಲ್ಲೇಖಿಸಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ. ಸಾಕ್ಷಿಗಳ ಹೇಳಿಕೆಗಳನ್ನು ಕೋರ್ಟ್ ದಾಖಲಿಸಿಕೊಂಡಿದೆ. ವಿವಾದಿತ ದಾಖಲೆಗಳು, ಮಹಜರು, ಆಸ್ತಿ ನಮೂನೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳೂ ಇದ್ದು, ಅವುಗಳ ಪರಿಶೀಲನೆ ನಡೆಸಬೇಕಿದೆ. ಕೇವಲ ಅಸ್ಪಷ್ಟ ಹೇಳಿಕೆ ನೀಡಿರುವುದು ಹೊರತಪಡಿಸಿ ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ದಾಖಲೆಗಳು ಮೇಲ್ನೋಟಕ್ಕೆ ಲಭ್ಯವಿಲ್ಲ ಎಂಬ ವಾದವನ್ನು ದೃಢಪಡಿಸುವಂತಹ ಯಾವುದೇ ಆಧಾರಗಳನ್ನು ಆರೋಪಿ ಕೋರ್ಟ್ ಮುಂದಿಟ್ಟಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಎಫ್‌ಐಆರ್, ದೂರು ಮತ್ತು ದೋಷಾರೋಪ ಪಟ್ಟಿಯಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲ ಮತ್ತು ಇದು ಸ್ವಂಪೂರ್ಣವಾಗಿ ಸಿವಿಲ್ ಸ್ವರೂಪದ ಪ್ರಕರಣವಾಗಿದೆ ಎಂದು ಆರೋಪಿ ನೀಡಿರುವ ಕಾರಣಗಳು ಅವರ ವಿರುದ್ಧದ ಆರೋಪಗಳನ್ನು ಕೈ ಬಿಡಲುವುದಕ್ಕೆ ಸಾಕಾಗುವುದಿಲ್ಲ. ಆರೋಪಗಳನ್ನು ಹೊರಿಸುವ ಸಂದರ್ಭದಲ್ಲಿ ಆರೋಪಿ ವಿರುದ್ಧದ ಪ್ರಕ್ರಿಯೆ ಮುಂದುವರಿಯಲು ಮೇಲ್ನೋಟಕ್ಕೆ ಲಭ್ಯವಿರುವ ದಾಖಲೆಗಳನ್ನು ಪರಿಗಣಿಸಬೇಕಾಗುತ್ತದೆ ಎಂಬುದು ಸಿದ್ಧಸೂತ್ರವಾಗಿದೆ. ಆರೋಪಿಗಳ ವಿರುದ್ಧ ಮುಂದುವರಿಯಲು ತನಿಖಾಧಿಕಾರಿಗಳು ಪ್ರಾಥಮಿಕ ದಾಖಲೆ ಮತ್ತು ಹೇಳಿಕೆಗಳನ್ನು ಮೇಲ್ನೋಟಕ್ಕೆ ತೋರಿಸಿದ್ದಾರೆ. ಆದ್ದರಿಂದ, ಲತಾ ಅವರ ವಿರುದ್ಧದ ಆರೋಪಗಳನ್ನು ಕೈ ಬಿಡಲು ಸಕಾರಣಗಳಿಲ್ಲ ಎಂದಿರುವ ನ್ಯಾಯಾಲಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ರಜನಿಕಾಂತ್ ಪುತ್ರಿ ತಮಿಳು ಚಿತ್ರ ಕೊಚಾಡಿಯನ್ ಸಿನಿಮಾ ನಿರ್ದೇಶಿಸಿದ್ದರು. ಆ ಚಿತ್ರದ ಸಂಬಂಧ ಆ್ಯಡ್ ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮೀಡಿಯಾ ಒನ್ ಗ್ಲೋಬಲ್ ಎಂಟರ್ಟೇನ್ಮೆಂಟ್ ಲಿಮಿಟೆಡ್ ನಡುವೆ ಆರ್ಥಿಕ ವಹಿವಾಟು ನಡೆದಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಅವರು ಭದ್ರತಾ ಖಾತ್ರಿ ನೀಡಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾಗಿದರೂ ಆ್ಯಡ್ ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ. ಈ ವಿವಾದ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಸಾಕಷ್ಟು ಪ್ರಸಾರವಾಗಿತ್ತು.
ಈ ಕುರಿತ ಸುದ್ದಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ ಅವರು ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು 2014ರ ಡಿಸೆಂಬರ್ 2ರಂದು ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ನೀಡಿತ್ತು. ಆದರೆ, ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಆದೇಶ ಪಡೆಯಲು ಬೆಂಗಳೂರು ಪ್ರೆಸ್‌ಕ್ಲಬ್ ಅಧೀನದಲ್ಲಿರದ ಸಂಸ್ಥೆಯೊಂದರ ಸಂಬಂಧ ಲತಾ ಅವರು ನಕಲಿ ದಾಖಲೆಯನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿ, 2015ರ ಮೇ 30ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಖಾಸಗಿ ದೂರು ದಾಖಲಿಸಿತ್ತು.
ಈ ದೂರು ಆಧರಿಸಿ ಪೊಲೀಸರು ಲತಾ ರಜನಿಕಾಂತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ, ದೋಷಾರೋಪ ಪಟ್ಟಿಯಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಕೈ ಬಿಡಬೇಕು ಎಂದು ಕೋರಿ ಲತಾ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿದ್ದರು.
Related Articles
Thank you for your comment. It is awaiting moderation.
Comments (0)