ಗಡಿಪಾರು ಆದೇಶ ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್
- by Jagan Ramesh
- October 13, 2025
- 191 Views

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಇದೇ ವೇಳೆ, ತಿಮರೋಡಿ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದಿನ ಆದೇಶದ ವರೆಗೆ ವಿಸ್ತರಿಸಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಸೆಪ್ಟೆಂಬರ್ 18ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಮಹೇಶ್ ಶೆಟ್ಟಿ ತಿಮರೋಡಿ ಪರ ಹಿರಿಯ ವಕೀಲ ತಾರಾನಾಥ್ ಪೂಜಾರಿ ಹಾಗೂ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಆತುರದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿರುವ ಮಧ್ಯಂತರ ಆದೇಶ ವಿಸ್ತರಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಮಧ್ಯಂತರ ಆದೇಶವನ್ನು ನ್ಯಾಯಾಲಯದ ಮುಂದಿನ ಆದೇಶದವರೆಗೆ ವಿಸ್ತಿರಿಸಿತು.
ಕಾನೂನು ಪ್ರಕ್ರಿಯೆಯಲ್ಲಿ ಲೋಪವಾಗಿಲ್ಲ:
ವಿಚಾರಣೆ ವೇಳೆ ವಾದ ಮಂಡಿಸಿದ ತಿಮರೋಡಿ ಪರ ಹಿರಿಯ ವಕೀಲ ತಾರಾನಾಥ ಪೂಜಾರಿ, ಅರ್ಜಿದಾರರ ವಿರುದ್ಧ ಹೊರಡಿಸಲಾಗಿರುವ ಆದೇಶದಲ್ಲಿ ವ್ಯಾಪಕ ಕಾನೂನು ಪ್ರಕ್ರಿಯೆಯ ಲೋಪಗಳಿವೆ. ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ತಿಮರೋಡಿ ವಿರುದ್ಧದ ಭಾವನೆ ಹೊಂದಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂಬುದರ ಕುರಿತಾದ ಯಾವುದೇ ವಿವರಗಳನ್ನು ಸಮರ್ಪಕವಾಗಿ ಒದಗಿಸಿಲ್ಲ. ಈಗಾಗಲೇ ಸುಮಾರು 10 ಪ್ರಕರಣಗಳಲ್ಲಿ ಅವರ ವಿರುದ್ಧ ತನಿಖಾಧಿಕಾರಿಗಳು ಬಿ ವರದಿ ಸಲ್ಲಿಸಿದ್ದಾರೆ. ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೊಂಬಿ ಮಾಡಿ ಗಲಾಟೆ ನಡೆಸುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ. ಆದರೆ, ಇದಕ್ಕೆ ಸಾಕ್ಷಿಗಳೇ ಇಲ್ಲ ಎಂದು ಆಕ್ಷೇಪಿಸಿದರು.
ಇದನ್ನು ಬಲವಾಗಿ ಅಲ್ಲಗಳೆದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಹೇಳುತ್ತಿರುವ ವಿವರಗಳು ಸರಿಯಲ್ಲ. ಸ್ಥಳೀಯ ನಿವಾಸಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯಾ ಚಳವಳಿ ಹೆಸರಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಸರ್ಕಾರ ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ತಿಮರೋಡಿ ಅವರಿಗೆ ಗಡಿಪಾರು ಆದೇಶ ಹೊರಡಿಸಿರುವುದಲ್ಲಿ ಯಾವುದೇ ಕಾನೂನು ಪ್ರಕ್ರಿಯೆಯ ಲೋಪ ಆಗಿಲ್ಲ ಎಂದು ಗಡಿಪಾರು ಕ್ರಮವನ್ನು ಸಮರ್ಥಿಸಿಕೊಂಡರು.
Related Articles
Thank you for your comment. It is awaiting moderation.
Comments (0)