ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗಮುದ್ರೆ; ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್

ಬೆಂಗಳೂರು: ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕನ್ನಡದ ‘ಬಿಗ್‌ ಬಾಸ್‌ 12’ ರಿಯಾಲಿಟಿ ಶೋ ಚಿತ್ರೀಕರಣ ನಡೆಯುತ್ತಿರುವ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್‌ ಸ್ಟುಡಿಯೋಸ್‌ ಆ್ಯಂಡ್‌ ಅಡ್ವೆಂಚರ್ಸ್‌ ಪಾರ್ಕ್‌ಗೆ ಬೀಗಮುದ್ರೆ ಹಾಕಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್‌ ಸ್ಟುಡಿಯೋಸ್‌ ಆ್ಯಂಡ್ ಅಡ್ವೆಂಚರ್ಸ್‌ ಪಾರ್ಕ್‌ ಮುಚ್ಚುವ ಸಂಬಂಧ ಹೊರಡಿಸಲಾಗಿರುವ ಆದೇಶ ರದ್ದು ಕೋರಿ ಅದರ ಮಾಲೀಕರಾದ ‘ವೇಲ್ಸ್ ಸ್ಟುಡಿಯೋಸ್‌ ಆ್ಯಂಡ್‌ ಎಂಟರ್‌ಟೇನ್ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌’ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿಯು ನ್ಯಾಯಪೀಠದ ಮುಂದೆ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಅರ್ಜಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ರಾಮನಗರ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ, ಕೆಎಸ್‌ಪಿಸಿಬಿ ಅಧ್ಯಕ್ಷರು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ.

ಅರ್ಜಿದಾರರ ಆಕ್ಷೇಪವೇನು?
ಜಾಲಿವುಡ್ ಸ್ಟುಡಿಯೋಸ್ ಮುಚ್ಚುವ ಸಂಬಂಧ 2025ರ ಅಕ್ಟೋಬರ್‌ 6ರಂದು ಕೆ‌ಎಸ್‌ಪಿಸಿಬಿ ಆದೇಶ ಹೊರಡಿಸಿದೆ. ಈ ಸಂಬಂಧ ಸೂಕ್ತ ಕಾಲಾವಕಾಶವನ್ನೂ ನೀಡದೇ ಮರುದಿನವೇ (ಅಕ್ಟೋಬರ್‌ 7) ಜಾಲಿವುಡ್‌ ಸ್ಟುಡಿಯೋಸ್‌ ಆ್ಯಂಡ್ ಅಡ್ವೆಂಚರ್ಸ್‌ ಪಾರ್ಕ್‌ಗೆ ರಾಮನಗರ ತಹಶೀಲ್ದಾರ್‌ ಬೀಗ ಜಡಿದಿದ್ದಾರೆ. ಇದು ಕಾನೂನುಬಾಹಿರ ಮತ್ತು ಸ್ವೇಚ್ಛೆಯ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಜಾಲಿವುಡ್‌ ಸ್ಟುಡಿಯೋಸ್‌ ಆ್ಯಂಡ್‌ ಅಡ್ವೆಂಚರ್ಸ್‌ ಪಾರ್ಕ್‌ನಲ್ಲಿ ದೇಶಾದ್ಯಂತ ಜನಪ್ರಿಯವಾಗಿರುವ ಬಿಗ್‌ ಬಾಸ್‌ ಕಾರ್ಯಕ್ರಮ ಸೇರಿ ಟಿವಿ ಕಾರ್ಯಕ್ರಮಗಳ ಚಿತ್ರೀಕರಣ ನಡೆಯುತ್ತದೆ. ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಆಕ್ಷೇಪಾರ್ಹ ಆದೇಶ ಮಾಡಲಾಗಿದ್ದು, ಇದು ನಿರ್ದಿಷ್ಟ ಗುರಿ ಇಟ್ಟುಕೊಂಡು ಮಾಡಿರುವ ಆದೇಶವಾಗಿದೆ. ಇದು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಬಿಗ್‌ ಬಾಸ್‌ ರಿಯಾಲಿಟಿ ಶೋ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎರಡು ಸಾವಿರಕ್ಕೂ ಅಧಿಕ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ವಾಯು (ಮಾಲಿನ್ಯ ನಿಯಂತ್ರಣ ಮತ್ತು ನಿಷೇಧ) ಕಾಯ್ದೆಗೆ ವಿರುದ್ಧವಾಗಿ ನೋಟಿಸ್‌ ಜಾರಿ ಮಾಡಲಾಗಿದೆ. ವಿವಾದಿತ ಪ್ರದೇಶವು ಬಿಗ್‌ ಬಾಸ್‌ ಸ್ಪರ್ಧಿಗಳು ನೆಲೆಸುವ ತಾಣವಾಗಿದ್ದು, ಅದು ಕೈಗಾರಿಕೆಯಾಗುವುದಿಲ್ಲ. ಕಾಯ್ದೆಯ ಸೆಕ್ಷನ್‌ 2(ಡಿ) ಅಡಿ ಮನುಷ್ಯನ ಬದುಕಿಗೆ ಎರವಾಗುವ ಅಂಶ ಇರಬೇಕು. ಇದಕ್ಕೆ ಪ್ರಯೋಗಾಲಯದ ದತ್ತಾಂಶ/ಕ್ಲಿನಿಕಲ್‌ ಪರೀಕ್ಷೆ ಪೂರಕವಾಗಿರಬೇಕು. ಇಂಥ ಯಾವುದೇ ದತ್ತಾಂಶ ಇಲ್ಲದೆ ಕೇವಲ ಊಹೆಗಳ ಆಧಾರದಲ್ಲಿ ಆದೇಶ ಮಾಡಲಾಗಿದೆ. ಆದ್ದರಿಂದ, ಆಕ್ಷೇಪಾರ್ಹ ಆದೇಶ ರದ್ದುಪಡಿಸಬೇಕು ಎಂದು ಕೋರಿರುವ ಅರ್ಜಿದಾರರು, ಅರ್ಜಿ ಇತ್ಯರ್ಥವಾಗುವರೆಗೆ ಕೆ‌ಎಸ್‌ಪಿಸಿಬಿ ಆದೇಶ ಜಾರಿಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

Related Articles

Comments (0)

Leave a Comment