ಬಯೋಕೆಮಿಸ್ಟ್ರಿಯಲ್ಲಿ ಐದನೇ ಬಾರಿಗೆ ಪರೀಕ್ಷೆಗೆ ಅನುಮತಿ ಕೋರಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ; ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ವೈದ್ಯಕೀಯ ಪದವಿಯ ವಿಷಯವೊಂದರಲ್ಲಿ ನಾಲ್ಕು ಬಾರಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿನಿಗೆ ಐದನೇ ಬಾರಿಗೆ ಪರೀಕ್ಷೆ ಬರೆಯಲು ಅನುಮತಿಸಲು ನಿರಾಕರಿಸಿರುವ ಹೈಕೋರ್ಟ್‌, ವಿಶ್ವವಿದ್ಯಾಲಯದ ನಿಯಮಕ್ಕೆ ವಿರುದ್ಧವಾಗಿ ಯಾವುದೇ ನ್ಯಾಯಾಲಯ ಆದೇಶ ಮಾಡಲಾಗದು ಎಂದು ಸ್ಪಷ್ಟಪಡಿಸಿದೆ.

ಜೀವರಸಾಯನ ಶಾಸ್ತ್ರ (ಬಯೋಕೆಮಿಸ್ಟ್ರಿ) ವಿಷಯದಲ್ಲಿ ನಾಲ್ಕು ಬಾರಿ ಅನುತ್ತೀರ್ಣಗೊಂಡಿದ್ದ ಡಾ. ಬಿ.ಆರ್‌. ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್‌ ಪದವಿ ವಿದ್ಯಾರ್ಥಿನಿ ನಿಶಾ ಆರ್‌. ಕೋಲ್ಯಾಲ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಆರ್‌. ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರ ವಿದ್ಯಾರ್ಥಿನಿ ಬಯೋಕೆಮಿಸ್ಟ್ರಿ ವಿಷಯ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ವೈದ್ಯಕೀಯ ಪರಿಷತ್‌ ಆಯೋಗ ನಿಯಮದ ಪ್ರಕಾರ ಒಬ್ಬ ವಿದ್ಯಾರ್ಥಿಗೆ ಒಂದು ವಿಷಯದಲ್ಲಿ ನಾಲ್ಕು ಬಾರಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ. ಈ ವಿಚಾರದಲ್ಲಿ ಕಾನೂನು ಬಹಳ ಸ್ಪಷ್ಟವಾಗಿದೆ. ವಿಶ್ವವಿದ್ಯಾಲಯದ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಕೋರ್ಟ್‌ ಆದೇಶ ಹೊರಡಿಸಲು ಸಾಧ್ಯವಿಲ್ಲ. ಆದ್ದರಿಂದ, ಅರ್ಜಿದಾರೆಯ ಮನವಿ ಪರಿಗಣಿಸುವ ಸ್ಥಿತಿಯಲ್ಲಿ ನ್ಯಾಯಾಲಯ ಇಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಪ್ರಕರಣವೇನು?
ಅರ್ಜಿದಾರೆ ಎಂಬಿಬಿಎಸ್‌ ಪದವಿಯ ಮೊದಲನೇ ವರ್ಷದ ಬಯೋಕೆಮಿಸ್ಟ್ರಿ ವಿಷಯದ ಪರೀಕ್ಷೆಯಲ್ಲಿ ನಾಲ್ಕು ಬಾರಿ ಅನುತ್ತೀರ್ಣರಾಗಿದ್ದಾರೆ. ಉಳಿದೆಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿದ್ದು, ಕರುಣೆಯ ಆಧಾರದಲ್ಲಿ ಸದ್ಯದಲ್ಲೇ ನಡೆಯಲಿರುವ ಬಯೋ ಕೆಮಿಸ್ಟ್ರಿ ವಿಷಯದ ಪರೀಕ್ಷೆಯನ್ನು ಐದನೇ ಬಾರಿಗೆ ಬರೆಯಲು ಅನುಮತಿಸಲು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

Related Articles

Comments (0)

Leave a Comment