ಪೇಂಟರ್ ಕೊಲೆ ಪ್ರಕರಣ; ಜೀವಾವಧಿ ಶಿಕ್ಷೆಯನ್ನು 6 ವರ್ಷ ಕಾರಾಗೃಹ ಶಿಕ್ಷೆಗೆ ಇಳಿಕೆ ಮಾಡಿದ ಹೈಕೋರ್ಟ್
- by Prashanth Basavapatna
- October 6, 2025
- 90 Views

ಬೆಂಗಳೂರು: ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಹುಬ್ಬಳ್ಳಿಯ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ತೀರ್ಪನ್ನು ಮಾರ್ಪಡಿಸಿರುವ ಹೈಕೋರ್ಟ್, ಶಿಕ್ಷೆಯ ಪ್ರಮಾಣವನ್ನು 6 ವರ್ಷಗಳ ಕಠಿಣ ಶಿಕ್ಷೆಗೆ ಇಳಿಕೆ ಮಾಡಿದೆ.
ಜತೆಗೆ, 2020ರ ಮಾರ್ಚ್ 12ರಿಂದ ಆರೋಪಿಗಳು ನ್ಯಾಯಾಂಗ ಬಂಧಲ್ಲಿರುವುದರಿಂದ ಈಗ ಆ ಅವಧಿಯು ಶಿಕ್ಷೆಯ ಪ್ರಮಾಣದಿಂದ ಕಡಿತವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಧಾರವಾಡದ 5ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ತೀರ್ಪು ಪ್ರಶ್ನಿಸಿ ಆರೋಪಿಗಳಾದ ಶಂಶುದ್ದೀನ್ ಸವಣೂರು ಹಾಗೂ ಜುಬೇರ್ ಅಹ್ಮದ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್. ಆರ್. ಕೃಷ್ಟಕುಮಾರ್ ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ (ಧಾರವಾಡ) ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಮೃತ ವ್ಯಕ್ತಿಯ ಮೂವರು ಸಂಬಂಧಿಗಳ ಜತೆ ಇಬ್ಬರು ಸ್ವತಂತ್ರ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಲಾಗಿದ್ದು, ಆರೋಪಿಗಳು ಸಂತ್ರಸ್ತನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಸಾಕ್ಷಿಗಳು ಹೇಳಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಐಪಿಸಿ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯ ಅಪರಾಧವಾಗಬೇಕಾದರೆ ಕೊಲೆ ಮಾಡುವ ಉದ್ದೇಶ, ಪೂರ್ವಸಿದ್ಧತೆಯ ಅಂಶಗಳಿರಬೇಕು ಎಂದು ವಿಭಾಗೀಯ ನ್ಯಾಯಪೀಠ ಅದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಮೇಲ್ಮನವಿದಾರರನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 300 (ಕೊಲೆ) ಅಡಿ ದೋಷಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಸೆಕ್ಷನ್ 302 ಅಡಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಪೂರಕ ದಾಖಲೆಗಳಿಲ್ಲ. ಬದಲಿಗೆ, ಮೇಲ್ಮನವಿದಾರರ ಕೃತ್ಯವು ಐಪಿಸಿ ಸೆಕ್ಷನ್ 304 (ಕೊಲೆ ಎಂದು ಪರಿಗಣಿಸಲಾಗದ ಅಪರಾಧಿಕ ನರಹತ್ಯೆ) ಅಡಿ ಶಿಕ್ಷಾರ್ಹ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ಮಾರ್ಪಾಡುಗೊಳಿಸಿದೆ.
ಜೀವಾವಧಿ ಶಿಕ್ಷೆಯನ್ನು 6 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಇಳಿಕೆ ಮಾಡಿರುವ ಹೈಕೋರ್ಟ್, ಇಬ್ಬರಿಗೂ ತಲಾ 25 ಸಾವಿರ ರೂ. ದಂಡ ವಿಧಿಸಿದೆ. ಜತೆಗೆ, ದಂಡದ ಒಟ್ಟು ಮೊತ್ತ 50 ಸಾವಿರ ರೂ. ಗಳನ್ನು ಮೃತನ ತಂದೆಗೆ ಪಾವತಿಸಬೇಕೆಂದು ಆದೇಶಿಸಿದೆ.
ಪ್ರಕರಣವೇನು?
ಶಂಶುದ್ದೀನ್ ಸವಣೂರು ಮತ್ತು ಜುಬೇರ್ ಅಹ್ಮದ್ ಅವರು ಫ್ಯಾಬ್ರಿಕೇಶನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. 2020ರ ಮಾರ್ಚ್ 11ರಂದು ಮಧ್ಯಾಹ್ನ 12 – 12.30ರ ಸುಮಾರಿಗೆ ಪತಂಜಲಿ ಟೀ ಅಂಗಡಿಯ ಮುಂದೆ ಪೇಂಟರ್ ಶಹಬುದ್ದೀನ್ ಬಿಕಾನಬಾಯ್ ಜತೆ ಮೇಲ್ಮನವಿದಾರರು ವಾಗ್ವಾದಕ್ಕೆ ಇಳಿದಿದ್ದರು. ಕಲಹ ವಿಕೋಪಕ್ಕೆ ತಿರುಗಿ ಶಹಬುದ್ದೀನ್ಗೆ ಚಾಕುವಿನಿಂದ ಇರಿದಿದ್ದರು. ಶಹಬುದ್ದೀನ್ ತಂದೆ ಮೆಹಬೂಬ್ ಸಾಬ್ ಇಬ್ರಾಹಿಂ ಬಿಕಾನಬಾಯ್ ನೀಡಿದ ದೂರಿನ ಮೇರೆಗೆ ಕಸಬಾಪೇಟೆ ಪೊಲೀಸರು ಕೊಲೆ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು.
ಸಂತ್ರಸ್ತನ ತಂದೆ, ಆತನ ಭಾವ ಹಾಗೂ ಸ್ವತಂತ್ರ ಸಾಕ್ಷಿಗಳ ಹೇಳಿಕೆ ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ 2022ರ ಮಾರ್ಚ್ 25ರಂದು ಇಬ್ಬರೂ ಆರೋಪಿಗಳನ್ನು ಕೊಲೆ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಮಾನಿಸಿ, ಜೀವಾವಧಿ ಶಿಕ್ಷೆಯ ಜತೆಗೆ ತಲಾ 75,000 ರೂ. ದಂಡ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಶಂಶುದ್ದೀನ್ ಹಾಗೂ ಜುಬೇರ್ ಅಹ್ಮದ್, ಶಹಬುದ್ದೀನ್ಗೆ ಚಾಕುವಿನಿಂದ ಇರಿದಿರುವುದಕ್ಕೆ ಸಂಬಂಧಿಸಿದ ಸಾಕ್ಷಿಗಳ ಹೇಳಿಕೆಯಲ್ಲಿ ವ್ಯತ್ಯಾಸಗಳಿವೆ. ಸಾಕ್ಷಿದಾರರ ಹೇಳಿಕೆಗಳು ಹೊಂದಿಕೆಯಾಗುತ್ತಿಲ್ಲ. ಇದನ್ನು ಪರಿಗಣಿಸದೇ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ತೀರ್ಪು ರದ್ದುಪಡಿಸಬೇಕು ಎಂದು ಕೋರಿದ್ದರು.
Related Articles
Thank you for your comment. It is awaiting moderation.
Comments (0)