ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್; ನಿಂಗಪ್ಪ ಸಾವಂತ್ ವಿರುದ್ಧದ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- October 4, 2025
- 230 Views

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಮುಖ್ಯಪೇದೆ ನಿಂಗಪ್ಪ ಸಾವಂತ್ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಹೊಳಲ್ಕೆರೆ ತಾಲೂಕು ತಾಳಿಕಟ್ಟೆಯ ನಿಂಗಪ್ಪ ಸಾವಂತ್ (45) ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ಪ್ರಕಟಿಸಿದೆ.
ನಿಂಗಪ್ಪ ಸಾವಂತ್ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿ, ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಈ ಆದೇಶ ಹಾಗೂ ಅದರಲ್ಲಿ ಅವಲೋಕಿಸಲಾಗಿರುವ ಅಂಶಗಳು ಆಕ್ಷೇಪಾರ್ಹ ಎಫ್‌ಐಆರ್ ಪ್ರಶ್ನಿಸುವ ಸೀಮಿತ/ಪ್ರಾಥಮಿಕ ಹಂತಕ್ಕೆ ಮಾತ್ರ ಅನ್ವಯಿಸಲಿದೆ. ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಮತ್ತೆ ಈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದೂ ಸೇರಿ ಕಾನೂನಿನಲ್ಲಿ ಲಭ್ಯವಿರುವ ಪರಿಹಾರಗಳನ್ನು ಆಶ್ರಯಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕಾಯ್ದಿರಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಭ್ರಷ್ಟಾಚಾರ ನಿಗ್ರಹ (ಪಿಸಿ) ಕಾಯ್ದೆ ಸೆಕ್ಷನ್ 7(a) ಹಾಗೂ 7A ಅಡಿ ಎಫ್‌ಐಆರ್ ದಾಖಲಿಸಿದ್ದು, ಇದರಲ್ಲಿ ಯಾವುದೇ ಸರ್ಕಾರಿ ಅಧಿಕಾರಿಯನ್ನು ಆರೋಪಿಯನ್ನಾಗಿಸದೇ ತನ್ನನ್ನು ಮಾತ್ರ ಆರೋಪಿಯಾಗಿಸಿರುವುದರಿಂದ ದೂರು ಅನೂರ್ಜಿತವಾಗುತ್ತದೆ ಎಂಬ ನಿಂಗಪ್ಪ ವಾದದಲ್ಲಿ ಉರುಳಿಲ್ಲ. ಏಕೆಂದರೆ, ತನಿಖೆಯ ಬಳಿಕ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 173 ಅಡಿ ಕಾಯ್ದೆಯ ಸೆಕ್ಷನ್ 7, 8, 12 ಇತ್ಯಾದಿ ಅನ್ವಯಿಸಿ ಸರ್ಕಾರಿ ಅಧಿಕಾರಿಗಳನ್ನು ಹೆಚ್ಚುವರಿ ಆರೋಪಿಗಳನ್ನಾಗಿಸಲು ಅವಕಾಶವಿದೆ ಎಂದು ನ್ಯಾಯಪೀಠ ಹೇಳಿದೆ.
ಸದ್ಯ ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು, ಲೋಕಾಯುಕ್ತ ಪೊಲೀಸರಿಗೆ ಬಿಬಿಎಂಪಿ, ಅಬಕಾರಿ ಇಲಾಖೆ ಸೇರಿ ಬೇರೆ ಆರೋಪಿಗಳನ್ನು ಸೇರ್ಪಡೆ ಮಾಡಲು ನಿರಾಕರಿಸಲಾಗದು. ಆರೋಪ ಪಟ್ಟಿ ಸಲ್ಲಿಸುವಾಗ ತನಿಖಾಧಿಕಾರಿಯು ಕಾಯ್ದೆಯ ಬೇರೆ ಸೆಕ್ಷನ್‌ಗಳನ್ನು ಅನ್ವಯಿಸಿ ಆರೋಪ ಪಟ್ಟಿ ಸಲ್ಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರ್ಜಿದಾರ ಸಾವಂತ್ ವಿರುದ್ಧ ಕಾಯ್ದೆಯ ಸೆಕ್ಷನ್ 7A ಅನ್ವಯಿಸಲು ಮೇಲ್ನೋಟಕ್ಕೆ ಅಗತ್ಯವಾದ ಅಂಶಗಳು ಗೋಚರಿಸಿದ್ದು, ಆತನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ದೂರಿನಲ್ಲಿನ ವಿಸ್ತೃತ ಆರೋಪ ಮತ್ತು ವರದಿಯಲ್ಲಿನ ಅಂಶಗಳನ್ನು ನೋಡಿದರೆ ಕಾಯ್ದೆ ಸೆಕ್ಷನ್ 7A ಅನ್ವಯ ಪ್ರಕರಣದ ತನಿಖೆ ನಡೆಯುವುದು ಅಗತ್ಯವಾಗಿದೆ ಎಂದಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು?
ಭ್ರಷ್ಟ ಅಧಿಕಾರಿಗಳ ವಿರುದ್ಧ ನಡೆಸಲಾಗುವ ದಾಳಿಗಳ ಕುರಿತು ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುವ ಜತೆಗೆ, ದಾಳಿಗಳ ಬಗ್ಗೆ ಮುಂಚಿತವಾಗಿ ಮಾಹಿತಿ ಸೋರಿಕೆ ಮಾಡಿ ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ನಿಂಗಪ್ಪ ಸಾವಂತ್ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 7(a) ಮತ್ತು 7A ಅಡಿ ಬೆಂಗಳೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಡು, ಆನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಿಂಗಪ್ಪ ಸಾವಂತ್, ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
Related Articles
Thank you for your comment. It is awaiting moderation.
Comments (0)