ಇಪ್ಪತ್ತೈದು ವರ್ಷಕ್ಕೂ ಹಿಂದಿನ ಗಲಭೆ ಪ್ರಕರಣ; ಎ‌ನ್‌ಆರ್‌ಐ‌ಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ಎರಡೂವರೆ ದಶಕಗಳ ಹಿಂದೆ ನಡೆದಿದ್ದ ಗಲಭೆ ಪ್ರಕರಣದ ಆರೋಪದಲ್ಲಿ ಮುಲ್ಕಿ ಪೋಲೀಸರಿಂದ ಬಂಧನಕ್ಕೊಳಗಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಹಳೆಯಂಗಡಿ ಮೂಲದ ಅನಿವಾಸಿ ಭಾರತೀಯ ಚಂದ್ರಹಾಸ ಕೇಶವ ಶೆಟ್ಟಿಗೆ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಚಂದ್ರಹಾಸ ಕೇಶವ ಶೆಟ್ಟಿ ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ಮತ್ತು ದಾಖಲೆಗಳು ಲಭ್ಯವಿಲ್ಲ ಎಂಬ ವಿಚಾರಣಾ ನ್ಯಾಯಾಲಯದ ಮುಚ್ಚಳಿಕೆಯನ್ನು ಪರಿಗಣಿಸಿದ್ದ ಹೈಕೋರ್ಟ್‌ನ ಸಮನ್ವಯ ನ್ಯಾಯಪೀಠ ಸೆಪ್ಟೆಂಬರ್ 23ರಂದು ಪ್ರಕರಣಕ್ಕೆ ತಡೆ ನೀಡಿದೆ. ಆದ್ದರಿಂದ, ಕಡತಗಳು ಮತ್ತು ದಾಖಲೆಗಳು ಲಭ್ಯವಿಲ್ಲದ ಆಧಾರದಲ್ಲಿ ತಡೆ ಸಿಕ್ಕಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧನದಲ್ಲಿಟ್ಟುಕೊಳ್ಳುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು ಕೇಶವ ಶೆಟ್ಟಿಗೆ 3 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿತು.

ಅರ್ಜಿದಾರರು 1 ಲಕ್ಷ ರೂ. ಮೊತ್ತದ ವೈಯುಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು, ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿಯಿಂದ ಹೊರಗೆ ಹೋಗಬಾರದು ಮತ್ತು ವಿದೇಶ ಪ್ರಯಾಣ ಮಾಡಬಾರದು, ಮೂಡಬಿದಿರೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು ಎಂಬ ಷರತ್ತುಗಳನ್ನು ನ್ಯಾಯಪೀಠ ವಿಧಿಸಿದೆ.

ಪ್ರಕರಣವೇನು?
ಚಂದ್ರಹಾಸ ಕೇಶವ ಶೆಟ್ಟಿ ಅವರನ್ನು 1998ರ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಗಲಭೆ ಪ್ರಕರಣವೊಂದರಲ್ಲಿ ಆರೋಪಿಯನ್ನಾಗಿಸಲಾಗಿತ್ತು. ಪ್ರಕರಣದ ಎಫ್ಐಆರ್ ಹಾಗೂ ಚಾರ್ಜ್ ಶೀಟ್‌ನಲ್ಲಿ ಆರೋಪಿ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ತಾಯಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಸ್ಕತ್‌ನಿಂದ ತವರೂರಿಗೆ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಮುಲ್ಕಿ ಪೋಲೀಸರು ಕೇಶವ ಶೆಟ್ಟಿ ಅವರನ್ನು ಆಗಸ್ಟ್ 28ರಂದು ಬಂದಿಸಿದ್ದರು. ವಿಚಾರಣಾ ನ್ಯಾಯಾಲಯ ಜಾಮೀನು ತಿರಸ್ಕರಿಸಿತ್ತು.

ಇದರಿಂದ, ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕೇಶವ ಶೆಟ್ಟಿ, 1992ರಿಂದಲೇ ಕುಟುಂಬ ಸಮೇತ ಮಸ್ಕತ್‌ನಲ್ಲಿ ನೆಲೆಸಿದ್ದು, ಅಧಿಕೃತವಾಗಿ ಅಲ್ಲಿನ ನಿವಾಸಿ ಗುರುತಿನ ಚೀಟಿ ಸಹ ಹೊಂದಿದ್ದೇನೆ. 2021ರಲ್ಲಿ ಪಾಸ್‌ಪೋರ್ಟ್ ನವೀಕರಣ ಮಾಡಿಸಿಕೊಂಡಿದ್ದೇನೆ. ಪ್ರಕರಣದಲ್ಲಿ ನನಗೆ ಯಾವುದೇ ಸಮನ್ಸ್ ಅಥವಾ ನೋಟಿಸ್ ನೀಡಿಲ್ಲ. ಆದರೂ, ತಲೆಮರೆಸಿಕೊಂಡಿದ್ದಾರೆ ಎಂದು ತೋರಿಸಲಾಗಿದೆ. ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

Related Articles

Comments (0)

Leave a Comment