ಜೈಲಿನಲ್ಲಿ ದರ್ಶನ್‌ಗೆ ಸೌಲಭ್ಯ ಕಲ್ಪಿಸದ ಆರೋಪ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೋರಿದ ಮನವಿಯ ಆದೇಶ ಕಾಯ್ದಿರಿಸಿದ ಸೆಷನ್ಸ್ ಕೋರ್ಟ್

ಬೆಂಗಳೂರು: ನಟ ದರ್ಶನ್‌ಗೆ ಕಾರಾಗೃಹ ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಲು ಶಿಫಾರಸು ಮಾಡಬೇಕೆಂಬ ಮನವಿ ಕುರಿತ ಆದೇಶವನ್ನು ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ.

ನ್ಯಾಯಾಲಯದ ಆದೇಶದ ಹೊರತಾಗಿಯೂ ಕನಿಷ್ಠ ಸೌಲಭ್ಯ ಕಲ್ಪಿಸದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸಲು ಶಿಫಾರಸು ಮಾಡುವಂತೆ ಕೋರಿ ದರ್ಶನ್‌ ಅರ್ಜಿ ಸಲ್ಲಿಸಿದ್ದ ಅರ್ಜಿ ಕುರಿತು ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ವಿಚಾರಣೆ ನಡೆಸಿತು.

ದರ್ಶನ್‌ ಪರ ವಕೀಲರು ಹಾಗೂ ಜೈಲು ಅಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರ (ಎಸ್‌ಪಿಪಿ) ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಅಕ್ಟೋಬರ್ 9ಕ್ಕೆ ಆದೇಶ ಕಾಯ್ದಿರಿಸಿತು.

ಕೈಪಿಡಿಯಲ್ಲಿರುವ ಸೌಲಭ್ಯವೆಲ್ಲ ಕೊಟ್ಟಿದ್ದೇವೆ:
ಇದಕ್ಕೂ ಮುನ್ನ ದರ್ಶನ್‌‌ಗೆ ಕಲ್ಪಿಸಲಾಗಿರುವ ಸೌಲಭ್ಯಗಳ ಕುರಿತು ವಿವರಣೆ ನೀಡಲು ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಜೈಲು ಅಧೀಕ್ಷಕರಾದ ಸುರೇಶ್‌ ಅವರು ನ್ಯಾಯಾಧೀಶ ಐ.ಪಿ. ನಾಯ್ಕ್ ಅವರ ಮುಂದೆ ಖುದ್ದು ಹಾಜರಾಗಿ ಲಿಖಿತ ರೂಪದಲ್ಲಿ ವಿವರಣೆ ನೀಡಿದರು.

ಬಳಿಕ ಜೈಲು ಅಧಿಕಾರಿಗಳ ಪರ ವಾದ ಮಂಡಿಸಿದ ಎಸ್‌ಪಿಪಿ ಪಿ. ಪ್ರಸನ್ನ ಕುಮಾರ್, ಜೈಲಿನ ಕೈಪಿಡಿಯಲ್ಲಿ ಏನೆಲ್ಲ ಸೌಲಭ್ಯ ನೀಡಬಹುದು ಅವೆಲ್ಲವನ್ನೂ ಕೊಡಲಾಗಿದೆ. ಟೆಲಿಫೋನ್, ವಿಡಿಯೊ ಕಾನ್ಫರೆನ್ಸ್‌ಗೆ ಅವಕಾಶ, ಕಂಬಳಿ, ಚಾದರ, ಬೆಡ್‌ಶೀಟ್, ದಿಂಬು, ತಟ್ಟೆ, ಚೊಂಬು ಕೊಡಲಾಗಿದೆ. ಆದರೆ, ಅವರು ಪಲ್ಲಂಗ ಕೇಳಿದರೆ ಕೊಡಲು ಜೈಲು ಕೈಪಿಡಿಯಲ್ಲಿ ಅವಕಾಶವಿಲ್ಲ. ಓಡಾಡಲು ಅವಕಾಶ ಕೇಳಿದ್ದರು, ಎಷ್ಟು ಜಾಗವಿದೆಯೋ ಅಷ್ಟರಲ್ಲಿ ಬೆಳಗ್ಗೆ ಮತ್ತು ಸಂಜೆ 1 ಗಂಟೆ ಓಡಾಡಲು ಅವಕಾಶ ನೀಡಿದ್ದೇವೆ. ಆದರೆ, ಇಂಥದ್ದೇ ಬ್ಯಾರಕ್ ಬೇಕು, ಬಿಸಿಲು ಬರಬೇಕು, ಇವೆಲ್ಲವನ್ನೂ ಮೂಲಭೂತ ಹಕ್ಕಿನಂತೆ ಕೇಳಲಾಗದು. ಜೈಲಿನಲ್ಲಿರುವವರಿಗೆ ಎಲ್ಲ ಮೂಲಭೂತ ಹಕ್ಕುಗಳನ್ನೂ ಕೊಡಲಾಗುವುದಿಲ್ಲ ಎಂದರು‌.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಸುನೀಲ್, ನ್ಯಾಯಾಲಯದ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ. ಆದೇಶ ಪ್ರತಿಯನ್ನು ನೀಡಿದರೆ, ಎಸೆದಿದ್ದಾರೆ. ನಾವೇನು ಚಿನ್ನದ ಮಂಚ ಕೇಳುತ್ತಿಲ್ಲ. ಕೇವಲ ಚಳಿಯಿಂದ ರಕ್ಷಣೆ ಪಡೆಯಲು ಹಾಸಿಗೆ, ದಿಂಬು ಕೇಳುತ್ತಿದ್ದೇವೆ. ಚೊಂಬು, ಲೋಟ, ಚಾಪೆಯನ್ನು ಈ ಮೊದಲೇ ನೀಡಲಾಗಿತ್ತು. ಕೋರ್ಟ್ ಆದೇಶದ ಬಳಿಕ ಕಂಬಳಿ ಮಾತ್ರ ಕೊಡಲಾಗಿದೆ. ಬ್ಯಾರಕ್ ಒಳಗೆ ಮಾತ್ರ ಅರ್ಧ ಗಂಟೆ ಕಾಲ ವಾಕಿಂಗ್‌ ಮಾಡಲು ಬಿಡಲಾಗಿದೆ. ಅಲ್ಲಿಂದ ಹೊರಗಡೆಗೆ ಬಿಡುತ್ತಿಲ್ಲ ಎಂದು ಕೋರ್ಟ್‌ಗೆ ವಿವರಿಸಿದರು.

ಉಮೇಶ್ ರೆಡ್ಡಿಗಿರುವ ಸೌಲಭ್ಯವೂ ದರ್ಶನ್‌ಗಿಲ್ಲ:
ಮುಂದುವರಿದು, ದರ್ಶನ್‌ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದೆ. ಬೇರೆ ಯಾರಿಗೂ ಈ ರೀತಿ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿಲ್ಲ. ಬೇರೆ ಬ್ಯಾರಕ್‌ಗೆ ವರ್ಗಾಯಿಸಲು ಜೈಲು ಅಧಿಕಾರಿಗಳೇ ಹೆದರುತ್ತಿದ್ದಾರೆ. ಕೇಳಿದರೆ, ಸೆಲೆಬ್ರಿಟಿ ರಕ್ಷಣೆಗೆ ಕ್ರಮವೆಂದು ನೆಪ ಹೇಳುತ್ತಿದ್ದಾರೆ. ಆದರೆ, ಉಗ್ರರನ್ನು ಇರಿಸಿದ್ದ ಸೆಲ್ ಪಕ್ಕದಲ್ಲೇ ದರ್ಶನ್‌ ಅವರನ್ನು ಇರಿಸಿದ್ದಾರೆ. ಕ್ವಾರಂಟೈನ್ ಸೆಲ್‌ನಲ್ಲಿ 14 ದಿನ ಮಾತ್ರ ಇರಿಸಬಹುದು. ಜೈಲಿನಲ್ಲಿದ್ದಾಗ ಅಪರಾಧ ಎಸಗಿದರೆ ಮಾತ್ರ ಪ್ರತ್ಯೇಕವಾಗಿ 60 ದಿನ ಇಡಬಹುದು. ಜೈಲಿನಲ್ಲಿ ಸಿಗರೇಟ್ ಸೇದಿದರು, ಮಗ್‌ನಲ್ಲಿ ಕಾಫಿ ಕುಡಿದರು ಎಂಬ ಕಾರಣಕ್ಕೆ ದೇಶದಲ್ಲೇ ಇಲ್ಲದ ನಿಯಮಗಳನ್ನು ದರ್ಶನ್ ಮೇಲೆ ಹೇರಲಾಗುತ್ತಿದೆ ಎಂದು ಆರೋಪಿಸಿದರು.

ಅತ್ಯಾಚಾರಿ ಉಮೇಶ್ ರೆಡ್ಡಿಗೆ ಕಲರ್ ಟಿವಿ ಇರುವ ಕೊಠಡಿ ನೀಡಲಾಗಿದೆ. ಇತರ ವಿವಿಐಪಿ ಕೈದಿಗಳಿಗೆ ವಿಶೇಷ ಸವಲತ್ತು ನೀಡಲಾಗಿದೆ. ದರ್ಶನ್‌ಗೆ ಮಾತ್ರ ಯಾವ ಸೌಲಭ್ಯವನ್ನೂ ನೀಡುತ್ತಿಲ್ಲ. ಜೈಲು ಅಧಿಕಾರಿಗಳಿಗೆ ಆರೋಪಿಗಳ ರಕ್ಷಣೆಯ ಜವಾಬ್ದಾರಿಯೂ ಇದೆ. ಅದನ್ನು ಅವರು ನಿಭಾಯಿಸಬೇಕಲ್ಲವೇ? ಜೈಲು ಅಧಿಕಾರಿಗಳಿಗೆ ಕೋರ್ಟ್ ನೀಡಿದ ನಿರ್ದೇಶನ ಅರ್ಥವಾಗಿಲ್ಲ ಎಂದು ಆಕ್ಷೇಪಿಸಿದರು.

ಕ್ರಮ‌ ಸಮರ್ಥಿಸಿಕೊಂಡ ಎಸ್‌ಪಿಪಿ:
ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿ, ಕ್ವಾರಂಟೈನ್ ಸೆಲ್ ಕೂಡಾ ಜೈಲಿನ ಒಂದು ಭಾಗವೇ ಆಗಿದೆ. ಜೈಲಿನ ಆಡಳಿತಕ್ಕೆ ಸೂಕ್ತವೆನಿಸುವ ಸೆಲ್ ಒದಗಿಸಲು ಅವಕಾಶವಿದೆ. ದರ್ಶನ್ ವಿಚಾರಣಾಧೀನ ಕೈದಿ. ಜೈಲಿನಲ್ಲಿ ಎಲ್ಲಿ ಬೇಕಾದರೂ ಇಡಬಹುದು. ವಿಚಾರಣಾಧೀನ ಕೈದಿಗಳಿಗೆ ವಿಶೇಷ, ಸಾಮಾನ್ಯ ಎಂಬ ವರ್ಗೀಕರಣವಿದೆ. ಅಪರಾಧಿಗಳಿಗೆ ಎ, ಬಿ, ಸಿ ಎಂಬ ವರ್ಗೀಕರಣವಿದೆ. ಕೈದಿಗಳಿಗಿರುವ ಭದ್ರತಾ ಅಪಾಯವನ್ನು ಗಮನಿಸಿ ಸೆಲ್ ನೀಡಲಾಗುತ್ತದೆ. ಈ ಹಿಂದೆ ಜೈಲಿನಲ್ಲಿದ್ದಾಗ ಸೌಲಭ್ಯ ದುರುಪಯೋಗ ಪಡಿಸಿಕೊಂಡಿದ್ದಾರೆ. ಇತರ ಕಾರಣಗಳಿಗೆ ಪ್ರತ್ಯೇಕವಾದ ಸೆಲ್‌ನಲ್ಲಿ ಇಡಲು ಜೈಲು ಅಧಿಕಾರಿಗಳಿಗೆ ನಿಯಮದಲ್ಲಿ ಅಧಿಕಾರವಿದೆ ಎಂದು ತಿಳಿಸಿದರು.

Related Articles

Comments (0)

Leave a Comment