ಜೋಡಿ ಸುರಂಗ ಮಾರ್ಗ ಯೋಜನೆ ಟೆಂಡರ್ ಪ್ರಶ್ನಿಸಿ ಪಿಐಎಲ್; ಮಧ್ಯಂತರ ತಡೆಗೆ ಹೈಕೋರ್ಟ್ ನಕಾರ: ಸರ್ಕಾರ, ಜಿಬಿಎಗೆ ನೋಟಿಸ್
- by Ramya B T
- September 25, 2025
- 269 Views

ಬೆಂಗಳೂರು: ನಗರದ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ಕೋಟ್ಯಂತರ ರೂಪಾಯಿ ವೆಚ್ಚದ ಜೋಡಿ ಸುರಂಗ ಮಾರ್ಗ ಯೋಜನೆಯ ಟೆಂಡರ್ಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಉದ್ದೇಶಿತ ಸುರಂಗ ಮಾರ್ಗದ ಟೆಂಡರ್ ರದ್ದು ಕೋರಿ ಇಂದಿರಾನಗರದ ಆದಿಕೇಶವುಲು ರವೀಂದ್ರ (82), ಜೆಪಿ ನಗರದ ವಿನೋದ್ ವ್ಯಾಸುಲು (78) ಹಾಗೂ ಬಸವನಗುಡಿಯ ಎನ್.ಎಸ್.ಮುಕುಂದ್ (78) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರಾಜ್ಯ ಪರಿಸರ ಅಧ್ಯಯನ ಮೌಲ್ಯಮಾಪನ ಪ್ರಾಧಿಕಾರ, ನಗರ ಭೂ ಸಾರಿಗೆ ನಿರ್ದೇಶನಾಲಯ, ಬೆಂಗಳೂರು ಸ್ಮಾರ್ಟ್ ಮೂಲಸೌಕರ್ಯ ನಿಯಮಿತ (ಬಿ-ಸ್ಮೈಲ್) ರಾಡಿಕ್ ಕನ್ಸಲ್ಟೆಂಟ್ಸ್ ಮತ್ತು ಆಲ್ಟಿನೋಕ್ ಕನ್ಸಲ್ಟೆಂಟ್ಸ್ ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ರಾಜ್ಯ ಸರ್ಕಾರ ಯಾವುದೇ ಸಮಯದಲ್ಲಿ ಬೇಕಾದರೂ ಟೆಂಡರ್ ಅಂತಿಮಗೊಳಿಸುವ ಸಾಧ್ಯತೆ ಇದೆ. ಆದ್ದರಿಂದ, ಮಧ್ಯಂತರ ತಡೆ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಟೆಂಡರ್ ಅನ್ನು ಅವರು (ಸರ್ಕಾರ) ಅಂತಿಮಗೊಳಿಸಲಿ ಬಿಡಿ, ಸದ್ಯ ಅದರ ಬಗ್ಗೆ ಯಾವುದೇ ಪ್ರಶ್ನೆ ಇಲ್ಲವಲ್ಲ ಎಂದು ಹೇಳಿತು.
ವಿಚಾರಣೆಯ ಹಂತದಲ್ಲಿ ನ್ಯಾಯಪೀಠ, ಅರ್ಜಿದಾರರು ತಡವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಯೋಜನೆಯ ಬಗ್ಗೆ ಮಾಹಿತಿ ಸಿಗುವುದು ವಿಳಂಬವಾಯಿತು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರೂ ಹೆಚ್ಚಿನ ಮಾಹಿತಿ ದೊರೆಯಲಿಲ್ಲ ಎಂದರು. ಅಂತಿಮವಾಗಿ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಆದಷ್ಟು ಬೇಗ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು. ಆಗ ನ್ಯಾಯಪೀಠ, ಇದೊಂದು ದೀರ್ಘಕಾಲೀನ ಯೋಜನೆಯಾಗಿದೆ. ಯಾವುದೇ ಅವಸರ ಇಲ್ಲ. ಯೋಜನೆ ಪೂರ್ಣಗೊಳ್ಳಲು ಹಲವು ವರ್ಷಗಳ ಕಾಲ ಹಿಡಿಯುತ್ತದೆ. ನೀವು ಯೋಜನೆಯ ಕುರಿತು ಯಾವುದೇ ಪರಿಸರ ಪರಿಣಾಮ ಅಧ್ಯಯನ ನಡೆಸಿಲ್ಲವೆಂದು ಹೇಳುತ್ತಿದ್ದೀರಿ. ಹೀಗಿರುವಾಗ, ಯಾವುದಾದರೂ ಅಧ್ಯಯನ ನಡೆಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಲಿ. ಅದನ್ನು ಪರಿಶೀಲಿಸೋಣ ಎಂದು ಹೇಳಿತು.
ಅರ್ಜಿದಾರರ ಆಕ್ಷೇಪವೇನು?
ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸುವ ಸಲುವಾಗಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ಸುಮಾರು 19 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ಯೋಜನೆಯನ್ನು ಪ್ರಸ್ತಾಪಿಸಲಾಗಿದ್ದು, ಬೆಂಗಳೂರು ಜೋಡಿ ಸುರಂಗ ರಸ್ತೆ ಯೋಜನೆಗೆ 2025ರ ಜುಲೈ 14ರಂದು ಕರೆದಿರುವ ಟೆಂಡರ್ ಅಧಿಸೂಚನೆ ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದ್ದು, ಆರ್ಎಫ್ಪಿ ಪ್ರಕಟಣೆ, ಪೂರ್ವ-ಬಿಡ್ ಪ್ರಕ್ರಿಯೆಗಳು, ಬಿಡ್ ಸಲ್ಲಿಕೆ, ಬಿಡ್ ಮೌಲ್ಯಮಾಪನ ಮತ್ತು ಉದ್ದೇಶಿತ ಟೆಂಡರ್ ಪ್ರಸ್ತಾವ ಅಂತಿಮಗೊಳಿಸುವ ಪತ್ರ ಸೇರಿದಂತೆ ಎಲ್ಲ ಹಂತಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಗಿದೆ.
ಸರ್ಕಾರ ಕಡ್ಡಾಯ ಕಾನೂನು ಮಾನದಂಡಗಳನ್ನು ಪಾಲಿಸಿಲ್ಲ, ಆಂತರಿಕ ವ್ಯತ್ಯಯಗಳು ಮತ್ತು ಯೋಜನೆಯನ್ನು ವಿವೇಚನೆ ಬಳಸದೆ ರೂಪಿಸಿರುವ ಕಾರಣ, ಪ್ರತಿವಾದಿ ಸಂಖ್ಯೆ 7 (ಆಲ್ಟಿನೋಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್) ಸಿದ್ಧಪಡಿಸಿದ ಕಾರ್ಯಸಾಧ್ಯತಾ ಅಧ್ಯಯನ (ಡಿಸೆಂಬರ್ 2024) ಮತ್ತು ಪ್ರತಿವಾದಿ ಸಂಖ್ಯೆ 6 (ರಾಡಿಕ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್) ಸಿದ್ಧಪಡಿಸಿದ ವಿವರವಾದ ಯೋಜನಾ ವರದಿ ಮತ್ತು 2025ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಪರಿಷ್ಕೃತ ಡಿಪಿಆರ್ ಅನ್ನು ರದ್ದುಗೊಳಿಸಬೇಕು. ಸುರಂಗ ಮಾರ್ಗ ಯೋಜನೆಗೆ ಪೂರ್ವ ಪರಿಸರ ಅನುಮತಿ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ 2024ರ ನವೆಂಬರ್ 26ರಂದು ನೀಡಿರುವ ಪತ್ರ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಸುರಂಗ ರಸ್ತೆ ನಿರ್ಮಾಣಕ್ಕಾಗಿ ಪರಿಸರ ಪರಿಣಾಮ ಮೌಲ್ಯಮಾಪನ ನಡೆಸದೆ, ಸಂಚಾರ ಯೋಜನೆ ಸಿದ್ಧಪಡಿಸದೆ, ಸ್ವಾಧೀನದ ನಿರ್ದಿಷ್ಟ ವೆಚ್ಚದ ಪಟ್ಟಿ ಸಿದ್ಧಪಡಿಸದೆ, ಪ್ರಸ್ತುತ ಉಪಯುಕ್ತತೆ ಮತ್ತು ಒಳಚರಂಡಿ ನಕ್ಷೆಗಳನ್ನು ಒಳಗೊಂಡಿರುವ ವರದಿಯನ್ನು ಸಿದ್ಧಪಡಿಸದೆ, ಅಸ್ತಿತ್ವದಲ್ಲಿರುವ ಎಲ್ಲ ನೀರು, ಮಳೆನೀರು, ಒಳಚರಂಡಿ ಪೈಪ್ಗಳು/ಲೈನ್ಗಳು ಮತ್ತು ಅಸ್ತಿತ್ವದಲ್ಲಿರುವ ಯಾವುದೇ ಪೈಪ್ಗಳು/ಲೇಔಟ್ಗಳು ಪರಿಣಾಮ ಬೀರುತ್ತಿವೆಯೇ ಎಂದು ಸೂಚಿಸುವ ತಿರುವು ಯೋಜನೆ ಸಿದ್ಧಪಡಿಸದೆ ಬೆಂಗಳೂರು ಜೋಡಿ ಸುರಂಗ ರಸ್ತೆ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಆದ್ದರಿಂದ, ಯೋಜನೆ ಕುರಿತು ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳದಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು ಹಾಗೂ ಮಧ್ಯಂತರ ಪರಿಹಾರದ ಭಾಗವಾಗಿ ಟೆಂಡರ್ ತಡೆಹಿಡಿಯಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.
Comments (0)