ಸಮೀಕ್ಷೆಯ ಹ್ಯಾಂಡ್‌ಬುಕ್‌ನಲ್ಲಿ ಸೇರಿಸಲಾದ 1,561 ಜಾತಿ-ಧರ್ಮ ವರ್ಗೀಕರಣಕ್ಕೆ ಆಧಾರವೇನು? ಹೈಕೋರ್ಟ್‌ ಪ್ರಶ್ನೆ

ಬೆಂಗಳೂರು: ರಾಜ್ಯದ ನಾಗರಿಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಹ್ಯಾಂಡ್‌ಬುಕ್‌ನಲ್ಲಿ ಸೇರ್ಪಡೆ ಮಾಡಲಾಗಿರುವ 1,561 ಜಾತಿ/ಧರ್ಮ ವರ್ಗೀಕರಣಕ್ಕೆ ಆಧಾರವೇನು? ಸಮೀಕ್ಷೆ ಭಾಗವಾಗಿ ದತ್ತಾಂಶ ಸಂಗ್ರಹಿಸುವವರಿಗೆ ಜನರು ಸಮೀಕ್ಷೆಯಲ್ಲಿ ಭಾಗಿಯಾಗುವುದು ಕಡ್ಡಾಯವಲ್ಲ ಎಂದು ಮನವರಿಕೆ ಮಾಡಿಕೊಡಲಾಗಿದೆಯೇ? ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಹೈಕೋರ್ಟ್ ಬುಧವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಂದಿಟ್ಟಿತು.

ಸಮೀಕ್ಷೆಗಾಗಿ ಆಗಸ್ಟ್‌ 13ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್‌. ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರವೂ ಮುಂದುವರಿಸಿತು.

ಹಿಂದುಳಿದ ವರ್ಗಗಳ ಆಯೋಗದ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ವಾದ ಮಂಡಿಸಿ, ಸಮೀಕ್ಷೆಯ ಅನುಕೂಲಕ್ಕಾಗಿ ಮಾತ್ರವೇ 1,561 ಜಾತಿಗಳನ್ನು ಗುರುತಿಸಲಾಗಿದೆ. ನಮ್ಮ ಜಾತಿ ಸೇರಿಸಿಲ್ಲವೆಂಬ ಕೆಲವರ ಮನವಿ ಮೇರೆಗೆ ಹೊಸ ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಸಮಾಲೋಚನೆ ನಡೆಸಿ ಈ ಮನವಿಗಳನ್ನು ಪರಿಗಣಿಸಲಾಗಿದೆ. ಸಮೀಕ್ಷೆಯಲ್ಲಿ ಜನರು ಹೇಳುವ ಜಾತಿಗಳನ್ನು ನಮೂದಿಸಿಕೊಳ್ಳುತ್ತೇವೆ. ವ್ಯಕ್ತಿಯ ಗುರುತು ಖಾತ್ರಿಗೆ ಮಾತ್ರವೇ ಆಧಾರ್ ಸಂಖ್ಯೆ ಪಡೆಯಲಾಗುತ್ತಿದೆ. ಬೇರೆ ರಾಜ್ಯದವರನ್ನು ಪರಿಗಣಿಸದೇ ಇರಲು ಈ ಆಧಾರ್ ಸಂಖ್ಯೆ ಸಹಾಯವಾಗುತ್ತದೆ. 60 ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯ ಮಾಡುವುದಿಲ್ಲ. ಮಾಹಿತಿ ನಿರಾಕರಿಸಲಾಗಿದೆ ಎಂಬುದನ್ನು ನಮೂದಿಸಲು ಕಲಂ 10ರಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಮೀಕ್ಷೆಗೆ ಒಳಪಡುವ ವ್ಯಕ್ತಿಗಳು ನೀಡುವ ಉತ್ತರವನ್ನಷ್ಟೇ ಬರೆದುಕೊಳ್ಳಲು ಸೂಚಿಸಲಾಗಿದೆ ಎಂದರು.

ಸಾಲು ಸಾಲು ಪ್ರಶ್ನೆ ಕೇಳಿದ ಹೈಕೋರ್ಟ್:
ಈ ಹಂತದಲ್ಲಿ ನ್ಯಾಯಪೀಠ, ಸಮೀಕ್ಷೆಯಲ್ಲಿ ಕೇಳುವ ಮಾಹಿತಿ ಒದಗಿಸುವುದು ಕಡ್ಡಾಯವಲ್ಲ, ಆಧಾರ್‌ ನೀಡಬೇಕಿಲ್ಲ ಎಂದು ದತ್ತಾಂಶ ಸಂಗ್ರಹಿಸುವ ಸಮೀಕ್ಷೆದಾರರಿಗೆ ಸೂಚನೆ ನೀಡಲಾಗಿದೆಯೇ? ಅದನ್ನು ನಮಗೆ ತೋರಿಸಿ. ಸಮೀಕ್ಷೆಯಲ್ಲಿ ತೊಡಗಿರುವ 1.61 ಲಕ್ಷ ಮಂದಿಗೆ ಮಾಹಿತಿ ಪಡೆಯುವುದು ಕಡ್ಡಾಯವಲ್ಲ ಎಂದು ತಿಳಿಸಲಾಗಿದೆಯೇ? ಸಮೀಕ್ಷೆಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕ ಪ್ರಕಟಣೆ ನೀಡಿ ಎಷ್ಟು ದಿನ ಕಾಯಲಾಗಿದೆ? 2015ರಲ್ಲಿ ಸರ್ಕಾರ ನಡೆಸಿರುವ ಸಮೀಕ್ಷೆಯನ್ನು ಬಹಿರಂಗಪಡಿಸಿಲ್ಲವಾದರೂ ಅದನ್ನು ಆಧರಿಸುವುದು ಹೇಗೆ, ಸಮೀಕ್ಷೆಯ ಹ್ಯಾಂಡ್‌ಬುಕ್‌ನಲ್ಲಿ ಸೇರ್ಪಡೆ ಮಾಡಲಾಗಿರುವ 1,561 ಜಾತಿ/ಧರ್ಮ ವರ್ಗೀಕರಣಕ್ಕೆ ಆಧಾರವೇನು? ಎಂದು ಆಯೋಗದ ಪರ ವಕೀಲರನ್ನು ಪ್ರಶ್ನಿಸಿತು.

ಈ ಸಂಬಂಧ ಖಚಿತ ಮಾಹಿತಿಯನ್ನು ನ್ಯಾಯಪೀಠಕ್ಕೆ ಒದಗಿಸಲು ಪ್ರೊ. ಕುಮಾರ್‌ ಅವರು ಪರದಾಡಿದರು. ಅಂತಿಮವಾಗಿ, ಜನರು ಮಾಹಿತಿ ನೀಡುವುದು ಕಡ್ಡಾಯವಲ್ಲ. ಹಿಂದಿನ ಸಮೀಕ್ಷೆಯ ಆಧಾರದಲ್ಲಿ 1,561 ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆಯಷ್ಟೆ. ಜಾತಿ, ಧರ್ಮದ ಮಾಹಿತಿ ನೀಡುವುದು ಸಮೀಕ್ಷೆಯಲ್ಲಿ ಭಾಗವಹಿಸುವ ಜನರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.

ಈ ಮಧ್ಯೆ, ಸಮೀಕ್ಷೆಗೆ ಈವರೆಗೆ ಎಷ್ಟು ಹಣ ವೆಚ್ಚ ಮಾಡಲಾಗಿದೆ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಪ್ರೊ. ರವಿವರ್ಮ ಕುಮಾರ್‌ ಅವರು, 20.31 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು. ಆಗ ನ್ಯಾಯಪೀಠ, ಸಮೀಕ್ಷೆಗೆ ತಡೆ ನೀಡಿದರೆ ಬಾಕಿ ಹಣ ಸರ್ಕಾರಕ್ಕೆ ಉಳಿತಾಯವಾಗುತ್ತದೆಲ್ಲವೇ ಎಂದು ಲಘುಧಾಟಿಯಲ್ಲಿ ಹೇಳಿತು.

ಒಂದು ಹಂತದಲ್ಲಿ ನ್ಯಾಯಪೀಠ, ಸೈಬರ್ ಅಪರಾಧ ಹೆಚ್ಚುತ್ತಿರುವ ಈ ದಿನಗಳಲ್ಲಿ ಎಲ್ಲರ ಆಧಾರ್ ಸಂಖ್ಯೆ ಪಡೆಯುವುದು ಜನರ ಖಾಸಗಿತನ ಉಲ್ಲಂಘನೆಯ ಭೀತಿಯನ್ನು ತರುವುದಿಲ್ಲವೇ? ಎಂದು ಸರ್ಕಾರವನ್ನು ಪ್ರಶ್ನಿಸಿತು.

ಈ ಮಧ್ಯೆಯೇ ವಾದ ಮುಂದುವರಿಸಿದ ರವಿವರ್ಮ ಕುಮಾರ್, 1918 ರಿಂದಲೂ ಸಾಮಾಜಿಕ, ಆರ್ಥಿಕ ಸಮೀಕ್ಷೆಗಳನ್ನು ನಡೆಸಲಾಗಿದೆ. ಬ್ರಿಟಿಷರ ಕಾಲದಲ್ಲೂ ಮಿಲ್ಲರ್ ಸಮಿತಿ ವರದಿ ನೀಡಿದೆ. ಈಗ 2 ಕೋಟಿ ಮನೆಗಳ ವಿದ್ಯುತ್‌ ಮೀಟರ್‌ಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಇದಕ್ಕಾಗಿ ಮಾತ್ರವೇ ಮೀಟರ್ ರೀಡರ್‌ಗಳನ್ನು ಬಳಸಿಕೊಳ್ಳಲಾಗಿದೆ. ಸ್ಟಿಕರ್ ಅಂಟಿಸಿ ಕ್ಯೂಆರ್ ಕೋಡ್ ನಮೂದಿಸಲಾಗಿದೆ. ಸಮೀಕ್ಷೆಯ ನಂತರವೇ ಈ ಸ್ಟಿಕರ್ ಭರ್ತಿ ಮಾಡಲಾಗುತ್ತದೆ. ಸ್ಟಿಕ್ಕರ್ ತೆಗೆಯಬಾರದು ಎಂದು ಬಲವಂತ ಏನಿಲ್ಲ. ಅದೇನಿದ್ದರೂ ಕೇವಲ ಮನವಿಯಷ್ಟೇ. ದೇಶದಲ್ಲೇ ಮೊದಲ ಬಾರಿಗೆ ಹೌಸ್ ಲಿಸ್ಟಿಂಗ್ ಮಾಡಲಾಗಿದೆ ಎಂದರು.

ಜನಗಣತಿಗೂ, ಸಾಮಾಜಿಕ ಆರ್ಥಿಕ ಸಮೀಕ್ಷೆಗೂ ವ್ಯತ್ಯಾಸವಿದೆ. ಜನಗಣತಿಗಿಂತ ಸಮೀಕ್ಷೆಯಲ್ಲಿ ವಿವರಗಳ ಮಾಹಿತಿಯನ್ನು ಪಡೆಯಲಾಗುತ್ತದೆ. ಸಮೀಕ್ಷೆಯಲ್ಲಿ ಸ್ವಯಂಪ್ರೇರಣೆಯಿಂದ ಉತ್ತರ ನೀಡಬಹುದು. ಜನಗಣತಿ ವೇಳೆ ವಿವರ ನೀಡುವುದು ಕಡ್ಡಾಯವಾಗಿದೆ. ಸಂಗ್ರಹಿಸುವ ದತ್ತಾಂಶ ನ್ಯಾಯಾಂಗ ಪರಾಮರ್ಶೆಗೆ ಒಳಪಡಬಹುದು. ಜನಗಣತಿಯ ದತ್ತಾಂಶ ನ್ಯಾಯಾಂಗದ ಪರಾಮರ್ಶೆ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ಸಮೀಕ್ಷೆಗೆ ತಡೆ ನೀಡದಂತೆ ಸರ್ಕಾರದ ಮನವಿ:
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ವಾದ ಮುಂದುವರಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಅರ್ಜಿದಾರರು ಸಂವಿಧಾನದ ಪರಿಚ್ಛೇದ 342 ಎ(3) ಅನ್ನು ಪ್ರಶ್ನಿಸಿಲ್ಲ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ–1995ರ ಸೆಕ್ಷನ್‌ 9 ಮತ್ತು 11ಕ್ಕೆ ತಡೆ ನೀಡುವಂತೆಯೂ ಕೋರಿಲ್ಲ. ಸಮೀಕ್ಷೆಯಲ್ಲಿ ಯಾವ ತಪ್ಪಿದೆ ಎಂಬುದನ್ನು ಸಹ ತೋರಿಸಿಲ್ಲ. ಆದ್ದರಿಂದ, ಸಮೀಕ್ಷೆಗೆ ಮಧ್ಯಂತರ ತಡೆ ನೀಡಬಾರದು ಎಂದು ಮನವಿ ಮಾಡಿದರು.

ಜಾತಿಗಳ ಅಂಕಿ-ಅಂಶಗಳನ್ನು ಸಂಗ್ರಹಿಸದೇ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಅಂಕಿ-ಅಂಶಗಳನ್ನು ಸಂಗ್ರಹಿಸುವ ಮುನ್ನವೇ ತಪ್ಪು ಹುಡುಕಲಾಗದು. ಸಮೀಕ್ಷೆ ನಡೆದ ಬಳಿಕ ಅದರಲ್ಲಿ ಲೋಪವಿದ್ದರೆ ಪ್ರಶ್ನಿಸಲಿ. ಆದರೆ, ಸಮೀಕ್ಷೆಯ ಆರಂಭಕ್ಕೂ ಮೊದಲೇ ಪ್ರಶ್ನಿಸಲಾಗಿದೆ. ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸಲು ಐದಾರು ವರ್ಷಗಳೇ ಬೇಕಾಗಬಹುದು. ಅಲ್ಲಿಯವರೆಗೆ ರಾಜ್ಯಗಳು ಜಾತಿಗಳ ಸಮೀಕ್ಷೆ ನಡೆಸಬಾದು ಎಂದೇನಿಲ್ಲ. ಹಿಂದುಳಿದ ಜನರಿಗೆ ಸವಲತ್ತು ನೀಡಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಮಾಹಿತಿಗಳನ್ನು ಸಂಗ್ರಹಿಸುವುದು ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಕೇಂದ್ರದ ವಾದವೇನು?
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ. ಅರವಿಂದ್ ಕಾಮತ್, ಕೇಂದ್ರ ಸರ್ಕಾರವೇ 2027ರಲ್ಲಿ ಜಾತಿಗಣತಿ ಆರಂಭಿಸಲಿದೆ. ಜನಗಣತಿ ಜತೆಗೆ ಜಾತಿ ಗಣತಿಯನ್ನೂ ನಡೆಸಲಾಗುವುದು. ಕೇಂದ್ರ, ರಾಜ್ಯದ ಸಮೀಕ್ಷೆಗಳಲ್ಲಿ ವಿರೋಧಾಭಾಸ ಇರಬಾರದು. ಎಲ್ಲ ರಾಜ್ಯಗಳೂ ಪ್ರತ್ಯೇಕ ಸಮೀಕ್ಷೆಗೆ ಮುಂದಾದರೆ ಸಮಸ್ಯೆ ಎದುರಾಗಲಿದೆ ಎಂದರು.

ರಾಜ್ಯದ ಸಮೀಕ್ಷೆಯಲ್ಲಿ ಜನರು ಉತ್ತರ ನೀಡುವುದು ಕಡ್ಡಾಯ ಅಲ್ಲ ಎನ್ನುವುದಾದರೆ ಇಂತಹ ಸಮೀಕ್ಷೆಯಿಂದ ಆಗುವ ಪ್ರಯೋಜನವಾದರೂ ಏನು? ಬೆಂಗಳೂರಿನಂತಹ ಮಹಾನಗರದಲ್ಲಿ ಶ್ರೀಮಂತರು ವಾಸಿಸುವ ಅಪಾರ್ಟ್‌ಮೆಂಟ್‌ಗಳಿಗೂ ಹೋಗಿ ಸಮೀಕ್ಷೆ ನಡೆಸುವ ಅಗತ್ಯವೇನಿದೆ? ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಮೀಕ್ಷೆಗೆ ಇತಿಮಿತಿಗಳಿವೆ. ಸಮೀಕ್ಷೆಯ ಹೆಸರಿನಲ್ಲಿ ಸರ್ಕಾರ ಜನಗಣತಿ ಮಾಡುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ನ್ಯಾಯಪೀಠ, ಸವಲತ್ತು ನೀಡಲು ಮಾತ್ರ ಸಮೀಕ್ಷೆ ನಡೆಸುವುದಿಲ್ಲ. ಸವಲತ್ತು ನಿರಾಕರಿಸಲೂ ಸಮೀಕ್ಷೇ ಬೇಕಾಗುತ್ತದೆ ಎಂದು ಹೇಳಿತು.

ಆಧಾರ್ ಮಾಹಿತಿ ದುರುಪಯೋಗವಾಗದು:
ಹಿಂದುಳಿದ ವರ್ಗಗಳ ಒಕ್ಕೂಟದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿ, ಆಧಾರ್ ಸಂಖ್ಯೆಯನ್ನು ಸಿಸ್ಟಮ್‌ನಲ್ಲಿ ದಾಖಲಿಸಿದ ಬಳಿಕ ಉಳಿದವರಿಗೆ ಸಿಗುವುದಿಲ್ಲ. ಆದ್ದರಿಂದ, ಇಲ್ಲಿ ದುರುಪಯೋಗವಾಗುವ ಪ್ರಶ್ನೆಯಿಲ್ಲ. ಸುಪ್ರೀಂಕೋರ್ಟ್ ಸಹ ಹಿಂದುಳಿದ ವರ್ಗಗಳ ಸಮೀಕ್ಷೆಗೆ ಸೂಚಿಸಿದೆ. ರಾಜಕೀಯ ಮೀಸಲಾತಿಗೂ ಸಮೀಕ್ಷೆ ಅಗತ್ಯ ಎಂದಿದೆ. ಯಾವುದಾದರೂ ಜಾತಿ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಅದನ್ನು ನಮೂದಿಸುವುದಿಲ್ಲ ಎಂದು ಸಮೀಕ್ಷೆಗೆ ಅನುಮತಿಸಬೇಕು ಎಂದರು.

ಈ ವೇಳೆ ನ್ಯಾಯಪೀಠ, ಸರ್ಕಾರಕ್ಕೆ ಸಮೀಕ್ಷೆ ನಡೆಸುವ ಅಧಿಕಾರ ಇಲ್ಲ ಎಂದು ಅರ್ಜಿದಾರರು ಹೇಳಿಲ್ಲ. ಆದರೆ, ಸರ್ವೆ ನಡೆಸುತ್ತಿರುವ ರೀತಿಯನ್ನು ಪ್ರಶ್ನಿಸಿದ್ದಾರೆ. ಜಾತಿಗಳ ನಡುವೆ ಧರ್ಮವನ್ನು ಸೇರಿಸಿದ್ದೀರ ಮತ್ತು ಜಾತಿಗಳ ಪಟ್ಟಿ ಪ್ರಕಟಿಸುವ ಮುನ್ನ ವಿಶ್ಲೇಷಣೆ ನಡೆಸಿಲ್ಲ ಎಂಬ ಆರೋಪವಿದೆಯಲ್ಲ? ಎಂಬ ಪ್ರಶ್ನೆಯನ್ನು ಆಯೋಗಕ್ಕೆ ಕೇಳಿತು.

ಅಂತೆಯೇ ವಿಚಾರಣೆಯ ಮತ್ತೊಂದು ಹಂತದಲ್ಲಿ ನ್ಯಾಯಪೀಠವು ಅರ್ಜಿದಾರರನ್ನು ಕುರಿತು, ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಅನುಸಾರ ಜಾತಿಗಳ ಪಟ್ಟಿ ತಯಾರಿಸಲು ಅವಕಾಶ ನೀಡಲಾಗಿದೆ. ಮೀಸಲಾತಿಗೆ ಅಲ್ಲದಿದ್ದರೂ ಸವಲತ್ತು ನೀಡಲು ಸಮೀಕ್ಷೆ ಬೇಕಾಗಬಹುದಲ್ಲಾ. ಈಗಿನ ಸಮೀಕ್ಷೆಯಲ್ಲಿ ಪ್ರಶ್ನೆಗಳನ್ನು 60 ರಿಂದ 5ಕ್ಕೆ ಇಳಿಸಬೇಕು ಎಂಬುದು ನಿಮ್ಮ ಬೇಡಿಕೆಯೇ? ಪ್ರತಿ ಮನೆಯ ಸಮೀಕ್ಷೆ ಮಾಡಬಾರದೆಂದು ಕೇಳುತ್ತಿದ್ದೀರ? ಎಂದು ಪ್ರಶ್ನಿಸಿತು.

ದಿನದ ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳ ಆಯೋಗ ಮತ್ತು ರಾಜ್ಯ ಸರ್ಕಾರದ ವಾದಕ್ಕೆ ಪ್ರತ್ಯುತ್ತರ ದಾಖಲಿಸಲು ಅರ್ಜಿದಾರರಿಗೆ ಸೂಚಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Related Articles

Comments (0)

Leave a Comment