- ಟ್ರಯಲ್ ಕೋರ್ಟ್
- Like this post: 14
ನ್ಯಾಯಾಲಯದ ಆದೇಶವಿದ್ದರೂ ದರ್ಶನ್ಗೆ ಸೌಲಭ್ಯ ಕಲ್ಪಿಸದ ಆರೋಪ; ಜೈಲು ಅಧಿಕಾರಿಗಳಿಂದ ವಿವರಣೆ ಕೇಳಿದ ಸೆಷನ್ಸ್ ಕೋರ್ಟ್
- by Jagan Ramesh
- September 15, 2025
- 286 Views
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಕಾರಾಗೃಹಗಳ ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬ ಆರೋಪದ ಕುರಿತು ವಿವರಣೆ ನೀಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಾಲಯದ ಆದೇಶದ ಹೊರತಾಗಿಯೂ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಜೈಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ದರ್ಶನ್ ಸಲ್ಲಿಸಿರುವ ಮೆಮೋ ಕುರಿತು ವಿಚಾರಣೆ ನಡೆಸಿದ ನಗರದ 64ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಅವರು, ಅರ್ಜಿದಾರರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 17 ಅಥವಾ ಅದಕ್ಕೂ ಮುಂಚಿತವಾಗಿ ಜೈಲಿನ ಸಂಬಂಧಪಟ್ಟ ಅಧಿಕಾರಿ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದರು.
ದರ್ಶನ್ ಆರೋಪವೇನು?
ಜೈಲು ಕೈಪಿಡಿಯ ಅನುಸಾರ ಸೌಲಭ್ಯ ಕಲ್ಪಿಸುವಂತೆ ನ್ಯಾಯಾಲಯ ನೀಡಿರುವ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ. ಇದರಿಂದ, ಕೋರ್ಟ್ ಆದೇಶದ ಪೂರ್ವ ಮತ್ತು ನಂತರದ ಪರಿಸ್ಥಿತಿಯಲ್ಲಿ ಯಾವುದೂ ಬದಲಾಗಿಲ್ಲ. ತಮ್ಮ ವಕೀಲರು ಜೈಲು ಅಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯಾಲಯದ ಆದೇಶದ ಪ್ರತಿ ಸಲ್ಲಿಸಿ, ತೀರ್ಪಿನ ಅಂಶಗಳನ್ನು ಅರ್ಥಮಾಡಿಸಲು ಯತ್ನಿಸಿದರು. ಆದರೆ, ಜೈಲು ಅಧಿಕಾರಿಗಳು ಮಾತ್ರ, ನಮಗೆ ನ್ಯಾಯಾಲಯದ ಆದೇಶ ತಲುಪಿದೆ. ಆದೇಶದ ಅನುಸಾರ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಅದನ್ನು ನೀವು ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ದರ್ಶನ್ ಮೆಮೋನಲ್ಲಿ ಆರೋಪಿಸಿದ್ದಾರೆ.
ನ್ಯಾಯಾಲಯದ ಆದೇಶ ಪಾಲಿಸದ ಪರಪ್ಪನ ಅಗ್ರಹಾರ ಕಾರಾಗೃಹದ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು. ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಲು ಶಿಫಾರಸು ಮಾಡಬೇಕು ಎಂದು ದರ್ಶನ್ ಮನವಿ ಮಾಡಿದ್ದಾರೆ.
ಪ್ರಕರಣವೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಜೈಲಿನಲ್ಲಿ ಹಾಸಿಗೆ, ಹೊದಿಕೆ, ತಲೆದಿಂಬು ಸೇರಿ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಈ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ದರ್ಶನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದರ್ಶನ್ ಅರ್ಜಿಯನ್ನು ಸೆಪ್ಟೆಂಬರ್ 9ರಂದು ಪುರಸ್ಕರಿಸಿದ್ದ ನ್ಯಾಯಾಲಯ, ಕರ್ನಾಟಕ ಕಾರಾಗೃಹಗಳ ಕೈಪಿಡಿಯ ಅನುಸಾರ ದರ್ಶನ್ ಗೆ ಕನಿಷ್ಠ ಸೌಲಭ್ಯ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಿತ್ತು.
Related Articles
Thank you for your comment. It is awaiting moderation.


Comments (0)