ಶ್ರೀ ಹೊನ್ನೇಶ್ವರಸ್ವಾಮಿ ದೇವಾಲಯದ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದ ಶ್ರೀ ಹೊನ್ನೇಶ್ವರಸ್ವಾಮಿ ದೇವಾಲಯದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಮಾಂಸಹಾರ ಸೇವನೆ ನಿಷೇಧಿಸಿ ಪೊಲೀಸರು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಮಾಂಸಹಾರ ಸೇವನೆ ನಿಷೇಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ 2024ರ ಜುಲೈ 13ರಂದು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಟ್ರಸ್ಟ್‌‌ನ ಅಧ್ಯಕ್ಷ ಜೆ. ಮಂಜುನಾಥ ಹಾಗೂ ದೇವಾಲಯದ ಗುರುಗಳಾದ ಜಿ.ಎಸ್. ರಾಮಚಂದ್ರ ಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ತುಮಕೂರು ಜಿಲ್ಲಾಧಿಕಾರಿ, ಮಧುಗಿರಿ ತಹಶೀಲ್ದಾರ್, ಬಡವನಹಳ್ಳಿ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಮಾಂಸಾಹಾರ ಸೇವನೆ ನಿಷೇಧಿಸಿ ನೋಟಿಸ್ ನೀಡುವ ಮುನ್ನ ಸ್ಥಳೀಯ ಆಚಾರ, ಸಂಪ್ರದಾಯಗಳನ್ನು ಪರಿಶೀಲಿಸಲಾಗಿದೆಯೇ, ದೇವಸ್ಥಾನದ ಬಳಿ ಮಾಂಸಹಾರ ಸೇವನೆ ಯಾವ ಕಾರಣಕ್ಕಾಗಿ ನಿಷೇಧಿಸಲಾಗಿದೆ ಎಂಬ ಬಗ್ಗೆ ಪೊಲೀಸರಿಂದ ವರದಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಆರ್.ಎಸ್. ರವಿ ವಾದ ಮಂಡಿಸಿ, ಹೊನ್ನೇಶ್ವರಸ್ವಾಮಿ ದೇವಾಲಯ ಮುಜರಾಯಿ ವ್ಯಾಪ್ತಿಗೆ ಸೇರಿದ್ದಲ್ಲ. ಇದೊಂದು ಖಾಸಗಿ ದೇವಾಲಯವಾಗಿದ್ದು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ನಿರ್ವಹಣೆ ಮಾಡುತ್ತಿದ್ದಾರೆ. ದೇವಸ್ಥಾನದ ಬಳಿ ಯಾವುದೇ ಪ್ರಾಣಿ ಬಲಿ ಅಥವಾ ವಧೆ ಮಾಡುವುದಿಲ್ಲ. ಹೊರಗಿನಿಂದ ತಂದ ಮಾಂಸವನ್ನು ಅಡುಗೆ ಮಾಡಿ ದೇವಸ್ಥಾನದ ಬಳಿ ಇರುವ ಸಮುದಾಯ ಭವನ ಹಾಗೂ ಉಪಹಾರ ಗೃಹದಲ್ಲಿ ಸೇವನೆ ಮಾಡುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಆದರೆ, ಇದೀಗ ಪೊಲೀಸರು ಏಕಾಏಕಿ ನೋಟಿಸ್ ನೀಡಿ ಮಾಂಸಹಾರ ನಿಷೇಧಿಸಿದ್ದಾರೆ. ಇದು ಆಹಾರದ ಹಕ್ಕು ಹಾಗೂ ಹಲವು ವರ್ಷಗಳಿಂದ ನಡೆದು ಬಂದಿರುವ ಆಚರಣೆಗೆ ವಿರುದ್ಧವಾಗಿದೆ ಎಂದರು.

ಅರ್ಜಿಯಲ್ಲೇನಿದೆ?
ಶಿವನಗೆರೆ ಗ್ರಾಮದಲ್ಲಿರುವ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ಥಾನವು 500 ವರ್ಷಗಳ ಇತಿಹಾಸ ಹೊಂದಿದ್ದು, ಇಲ್ಲಿಯವರೆಗೆ ಯಾವುದೇ ಗೊಂದಲಗಳಿಲ್ಲದೆ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳೂ ಸೇರಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಭಕ್ತಾದಿಗಳು ಬರುತ್ತಾರೆ. ಬಹಳ ಹಿಂದಿನಿಂದಲೂ ದೇವಾಲಯದ ಬಳಿ ಮಾಂಸಹಾರ ಸೇವನೆ ಪದ್ದತಿ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ನಡುವೆ, 2024ರ ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ಆದೇಶ ಉಲ್ಲೇಖಿಸಿ ದೇವಸ್ಥಾನದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ಹಾಗೂ ಮಾಂಸಹಾರ ಸೇವನೆ ನಿಷೇಧಿಸಿ 2024ರ ಜುಲೈ 13ರಂದು ಬಡವನಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ನೋಟಿಸ್ ಜಾರಿಗೊಳಿಸಿದ್ದಾರೆ. ಇದರಿಂದ, ದೇವಸ್ಥಾನದ ಬಳಿ ಮಾತ್ರವಲ್ಲದೆ ಇಡೀ ಗ್ರಾಮದಲ್ಲಿ ಮಾಂಸಹಾರ ಸೇವನೆ ನಿಷೇಧವಾದಂತಾಗಿದೆ. ಇದು ಗ್ರಾಮಸ್ಥರ ಆಹಾರದ ಹಕ್ಕಿನ ಪ್ರಶ್ನೆಯಾಗಿದ್ದು, ಭಕ್ತಾದಿಗಳ ಹಲವು ವರ್ಷಗಳ ಆಚರಣಾ ಪದ್ದತಿಗೆ ವಿರುದ್ಧವಾಗಿದೆ. ಆದ್ದರಿಂದ, ಪೊಲೀಸರು ನೀಡಿರುವ ನೋಟಿಸ್ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment