ಸೆಣಬಿನ ಚೀಲದಲ್ಲಿ ಸಕ್ಕರೆ ಪ್ಯಾಕಿಂಗ್; ಕೇಂದ್ರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್
- by LegalSamachar
- September 4, 2025
- 8 Views

ಬೆಂಗಳೂರು: ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇ.20 ಪ್ರಮಾಣವನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿ ತುಂಬಬೇಕು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್, ರಾಜ್ಯದ ಲೆಕ್ಕವಿಲ್ಲದಷ್ಟು ಚಟುವಟಿಕೆ ನಿಯಂತ್ರಿಸುವ ನೀತಿಗಳ ಆಡಳಿತಕ್ಕೆ ಸರ್ವೋಚ್ಚ ಸಲಹೆಗಾರನ ಪಾತ್ರವನ್ನು ನ್ಯಾಯಾಧೀಶರು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಜವಳಿ ಸಚಿವಾಲಯ 2023ರ ಡಿಸೆಂಬರ್ 26 ಹಾಗೂ 2024ರ ಜೂನ್ 28ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಸ್ಥೆ-ಕರ್ನಾಟಕ ಹಾಗೂ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಎತ್ತಿಹಿಡಿದಿದೆ.
ಹೈಕೋರ್ಟ್ ಆದೇಶವೇನು?
ಸೆಣಬಿನ ಪ್ಯಾಕೇಜಿಂಗ್ ಉತ್ಪನ್ನಗಳ (ಪ್ಯಾಕೇಜಿಂಗ್ ಉತ್ಪನ್ನಗಳಲ್ಲಿನ ಕಡ್ಡಾಯ ಬಳಕೆ) ಕಾಯ್ದೆ 1987ರ ಅಡಿ ಬರುವ ಸಲಹಾ ಸಮಿತಿ ಮತ್ತು ಸೆಣಬಿನ ಬಾಚಿಂಗ್ ಎಣ್ಣೆಯಲ್ಲಿ (Jute Batching Oil) ಕ್ಯಾನ್ಸರ್‌ಕಾರಕ ಅಂಶ ಇರುವ ಕುರಿತು ತಜ್ಞರು ಪರಿಶೀಲಿಸಲಿದ್ದಾರೆ. 1987ರ ಕಾಯ್ದೆಯನ್ನು ಸೆಣಬು ಕ್ಷೇತ್ರವನ್ನು ಉತ್ತೇಜಿಸಲು ರೂಪಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಸಕ್ಕರೆ ತುಂಬಲು ಶೇ. 100 ಸೆಣಬಿನ ಚೀಲಗಳನ್ನು ಬಳಕೆ ಮಾಡುವುದು ಕಡ್ಡಾಯ ಎಂಬ ನೀತಿಯ ಸಿಂಧುತ್ವವನ್ನು ಹಲವು ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದರಿಂದ ಸಕ್ಕರೆ ತುಂಬಲು ಶೇ.20 ಸೆಣಬಿನ ಚೀಲಗಳನ್ನೇ ಬಳಕೆ ಮಾಡಬೇಕೆಂದು ಸಕ್ಕರೆ ಕಾರ್ಖಾನೆಗಳಿಗೆ ಹೇಳುವುದು ಸ್ವೇಚ್ಛೆಯ ಕ್ರಮವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಸೆಣಬಿನ ಬಾಚಿಂಗ್ ಎಣ್ಣೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿದ್ದು, ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಲಿದೆ ಎಂದು ಮೊದಲ ಬಾರಿಗೆ ವರದಿಗಳನ್ನು ಉಲ್ಲೇಖಿಸಿ ಅರ್ಜಿದಾರರು ಹೇಳುತ್ತಿದ್ದಾರೆ. ಈ ವರದಿಗಳನ್ನು ಸೆಣಬಿನ ಚೀಲಗಳ ಬಳಕೆಯ ಬಗ್ಗೆ ನಿರ್ಧರಿಸಲು ವಾರ್ಷಿಕವಾಗಿ ಸಭೆ ನಡೆಸುವ ಸಲಹಾ ಸಮಿತಿಯು ಪರಿಶೀಲಿಸಬೇಕಿದೆ. ನ್ಯಾಯಾಧೀಶರಾಗಿ ಪ್ರಮಾಣ ಸ್ವೀಕರಿಸುವ ಮೂಲಕ, ಒಬ್ಬ ಸಾಮಾನ್ಯ ವ್ಯಕ್ತಿ ತನ್ನನ್ನು ತಾನು ಮಾಂತ್ರಿಕ ದಂಡ ಹಿಡಿದ ವ್ಯಕ್ತಿಯಾಗಿ ಪರಿವರ್ತಿಸಿಕೊಳ್ಳುತ್ತಾನೆ ಮತ್ತು ನೀತಿಗಳ ಬಗ್ಗೆ ಸಲಹೆ ನೀಡುವ ಪ್ರಶ್ನಾತೀತ ಅಧಿಕಾರ ಹೊಂದಲು ಅರ್ಹತೆ ಪಡೆಯುತ್ತಾನೆ ಎಂಬುದು ಊಹಿಸಲೂ ಸಾಧ್ಯವಿಲ್ಲ. ಅಂತಹ ನೀತಿಗಳನ್ನು ರೂಪಿಸಿದ ತಜ್ಞರ ಸ್ಥಾನದಲ್ಲಿ ನಿಂತು ಅವುಗಳನ್ನು ನ್ಯಾಯಾಲಯ ರದ್ದುಗೊಳಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರ ಮನವಿ:
ಉತ್ಪಾದನೆಯಾಗುವ ಸಕ್ಕರೆಯ ಒಟ್ಟು ಪ್ರಮಾಣದಲ್ಲಿ ಶೇ.20ರಷ್ಟನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕ್ ಮಾಡಬೇಕು ಎಂದು ಜವಳಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. 2014ರ ರಂಗರಾಜನ್ ಸಮಿತಿಯ ಶಿಫಾರಸು, ಆರ್ಥಿಕ ಸಚಿವಾಲಯ, ಆಹಾರ ಸಚಿವಾಲಯ, ರಾಸಾಯನಿಕ ರಸಗೊಬ್ಬರ ಸಚಿವಾಲಯ, ಭಾರತೀಯ ಸ್ಪರ್ಧಾ ಆಯೋಗದ ಶಿಫಾರಸಿನಂತೆ ಸಕ್ಕರೆಯನ್ನು ಸೆಣಬಿನ ಪ್ಯಾಕೇಜಿಂಗ್ ಉತ್ಪನ್ನಗಳ (ಸರಕುಗಳಲ್ಲಿ ಕಡ್ಡಾಯ ಬಳಕೆ) ಕಾಯ್ದೆ-1987ರ (ಜೆಪಿಎಂಎ) ವ್ಯಾಪ್ತಿಯಿಂದ ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಸೆಣಬಿನ ಚೀಲಗಳಲ್ಲಿ ಸಕ್ಕರೆ ಪ್ಯಾಕೇಜಿಂಗ್‌ಗೆ 2022ರ ಜುಲೈ 21ರಂದು ನಡೆದ ಸ್ಥಾಯಿ ಸಲಹಾ ಸಮಿತಿಯ ಸಭೆಯಲ್ಲಿ ವಿನಾಯಿತಿ ನೀಡಲಾಗಿದೆ. ಸೆಣಬಿನ ಚೀಲ ತಯಾರಿಕೆಯಲ್ಲಿ ಬಳಸಲಾಗುವ ಎಣ್ಣೆಯು ಟ್ರೋಮೋಜನಿಕ್ (ಗಡ್ಡೆಜನಕ) ಎಂದು ಕೈಗಾರಿಕಾ ವಿಷಶಾಸ್ತ್ರ ಸಂಶೋಧನಾ ಕೇಂದ್ರ ಅಭಿಪ್ರಾಯಪಟ್ಟಿದೆ. ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದರಿಂದ ಸಕ್ಕರೆಯ ಗುಣಮಟ್ಟ ಹಾಳಾಗುವುದಲ್ಲದೆ ಅದು ಕಲುಷಿತಗೊಳ್ಳುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಸೆಣಬಿನ ಕಚ್ಚಾ ಪದಾರ್ಥಗಳ ಉತ್ಪನ್ನ ಹಾಗೂ ಸೆಣಬಿನ ಪ್ಯಾಕೇಜಿಂಗ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. 1 ಕ್ವಿಂಟಾಲ್ ಮೇಲ್ಪಟ್ಟ ಸಗಟು ಪ್ಯಾಕೇಜಿಂಗ್ ಹಾಗೂ ರಫ್ತಿಗೆ ಈ ಮಿತಿ ಅನ್ವಯವಾಗುವುದಿಲ್ಲ. ಕೇವಲ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ವಿತರಣೆಗಷ್ಟೇ ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.
Related Articles
Thank you for your comment. It is awaiting moderation.
Comments (0)