ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಬಿ ರಿಪೋರ್ಟ್; ಹೈಕೋರ್ಟ್ಗೆ ಸರ್ಕಾರದ ಮಾಹಿತಿ
- by Prashanth Basavapatna
- September 3, 2025
- 362 Views
ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ನಗರದ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ವಿಚಾರಣಾ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಇನ್ನೂ ಅಂಗೀಕರಿಸಿಲ್ಲವೆಂದು ಸರ್ಕಾರದ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ.
ಪ್ರಕರಣ ರದ್ದು ಕೋರಿ ಆರೋಪಿಗಳಾದ ಮುನಿರತ್ನ, ವಸಂತ ಕುಮಾರ್, ಸಿ. ಚನ್ನಕೇಶವ ಹಾಗೂ ಕಮಲ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಶಾಸಕ ಮುನಿರತ್ನ ಪರ ವಕೀಲರು ಹಾಜರಾಗಿ, ಅರ್ಜಿದಾರರ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪ ಸಾಬೀತಾಗಿಲ್ಲವೆಂದು ತನಿಖೆ ನಡೆಸಿದ್ದ ಎಸ್ಐಟಿ ವಿಚಾರಣಾ ನ್ಯಾಯಾಲಯಕ್ಕೆ ಈಗಾಗಲೇ ಬಿ ವರದಿ ಸಲ್ಲಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿಪಿ ಪ್ರದೀಪ್, ಹೌದು ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಆದರೆ, ಆ ವರದಿಯನ್ನು ಕೋರ್ಟ್ ಇನ್ನೂ ಅಂಗೀಕರಿಸಿಲ್ಲ. ಆದ್ದರಿಂದ, ಈಗಲೇ ಯಾವುದೇ ಆದೇಶ ಮಾಡಬಾರದು ಎಂದು ಕೋರಿದರು.
ಆಗ ನ್ಯಾಯಾಲಯ, ಪ್ರಕರಣದ ಸಂಬಂಧ ಮುನಿರತ್ನ ಅವರನ್ನು ಬಂಧಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣವೇನು?
ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ತೆರಳಿ ಬಿಜೆಪಿ ಶಾಸಕ ಮುನಿರತ್ನ ಮತ್ತಿತರರ ವಿರುದ್ಧ ದೂರು ನೀಡಿದ್ದ 40 ವರ್ಷದ ಮಹಿಳೆಯೊಬ್ಬರು, ತಮ್ಮನ್ನು ವಿವಸ್ತ್ರಗೊಳಿಸಿ, ಸಹಚರರಿಂದ ಆತ್ಯಾಚಾರ ಮಾಡಿಸಿದ್ದಲ್ಲದೆ, ವೈರಸ್ ತಗುಲುವ ಚುಚ್ಚುಮದ್ದು ನೀಡಲಾಗಿದೆ ಎಂದು ಆರೋಪಿಸಿದ್ದರು.
ಈ ಮಧ್ಯೆ, ಮುನಿರತ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ಮುನಿರತ್ನ ವಿರುದ್ಧ ಕಗ್ಗಲಿಪುರ ಠಾಣೆಯಲ್ಲಿ ದಾಖಲಾಗಿದ್ದ ಆತ್ಯಾಚಾರ ಪ್ರಕರಣ, ವೈಯಾಲಿಕಾವಲ್ ಠಾಣೆಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣಗಳು ಎಸ್ಐಟಿಗೆ ವರ್ಗವಾಗಿದ್ದವು. ಆನಂತರ, ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನೂ ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿತ್ತು. ಪ್ರಕರಣದ ಸಂಬಂಧ ಎಸ್ಐಟಿ ತನಿಖೆ ನಡೆಸಿತ್ತು.
Related Articles
Thank you for your comment. It is awaiting moderation.


Comments (0)