ಮುಸ್ಲಿಂ ಯುವತಿಯರನ್ನು‌ ಮದುವೆಯಾದರೆ ₹5 ಲಕ್ಷ ಹೇಳಿಕೆ; ಯತ್ನಾಳ್ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು: ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದು ಯುವಕರಿಗೆ 5 ಲಕ್ಷ ರೂ. ನೀಡುವುದಾಗಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಪುರದ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಇದೇ ವೇಳೆ, ಪ್ರಕರಣದ ತನಿಖೆಗೆ ಸಹಕರಿಸುವಂತೆ ಯತ್ನಾಳ್ ಅವರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಕೊಪ್ಪಳ ಟೌನ್‌ ಪೊಲೀಸ್‌ ಠಾಣೆಯಲ್ಲಿ ದಾಖಾಗಿರುವ ಎಫ್‌ಐಆರ್‌ ರದ್ದು ಕೋರಿ ಬಸನಗೌಡ ಪಾಟೀಲ ಯತ್ನಾಳ್‌ ಸಲ್ಲಿಸಿರುವ ಅರ್ಜಿ ಕುರಿತು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ಇದಕ್ಕೂ ಮುನ್ನ ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಕಾನೂನಿನಲ್ಲಿ ಅಂತರಧರ್ಮೀಯ ವಿವಾಹಗಳಿಗೆ ನಿಷೇಧವಿಲ್ಲ. ಭಾರತೀಯ ಸಂವಿಧಾನದ ಪ್ರಕಾರ ನಮ್ಮದು ಜಾತ್ಯಾತೀತ ದೇಶವಾಗಿದೆ. ಹೀಗಿರುವಾಗ, ಅರ್ಜಿದಾರರ ಹೇಳಿಕೆ ಯಾರಿಗೋ ಇಷ್ಟವಾಗಿಲ್ಲ ಎಂದ ಮಾತ್ರಕ್ಕೆ ಅದು ಅಪರಾಧ ಹೇಗಾಗುತ್ತದೆ ಎಂದು ಆಕ್ಷೇಪಿಸಿದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಕೊಪ್ಪಳ ಟೌನ್ ಪೊಲೀಸರು ಯಾವುದೇ ಬಲವಂತದ ಕ್ರಮ ಜರುಗಿಸಬಾರದು, ಅರ್ಜಿದಾರರು ತನಿಖೆಗೆ ಸಹಕಾರ ನೀಡಬೇಕು ಎಂದು ಮಧ್ಯಂತರ ಆದೇಶ ನೀಡಿತಲ್ಲದೆ, ಅರ್ಜಿ ಸಂಬಂಧ ಕೊಪ್ಪಳ ಟೌನ್ ಠಾಣೆ ಪೊಲೀಸರಿಗೆ ನೋಟಿಸ್ ಹಾಗೂ ದೂರುದಾರರಾದ ಖಮರ್‌ ಜುನೈದ್‌ ಖುರೇಷಿ, ಮೈನುದ್ದೀನ್‌ ಬೀಳಗಿ ಹಾಗೂ ಅಬ್ದುಲ್‌ ಕಲಾಂ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಹೈಕೋರ್ಟ್ ಕಿವಿಮಾತು:
ವಿಚಾರಣೆ ಮುಕ್ತಾಯವಾದ ಬಳಿಕ ಯತ್ನಾಳ್ ಪರ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, ವೈವಿದ್ಯಮಯ ದೇಶವಾಗಿರುವ ಭಾರತಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ಸಿಂಧು ನಾಗರಿಕತೆಯಿಂದ ಶುರುವಾಗಿ ಇಂದಿಗೂ ಸತತವಾಗಿ ಹರಿದು ಬಂದಿದೆ. ಕಲಹ ಎನ್ನುವುದು ಮನುಷ್ಯ ಸಹಜ ಗುಣವಾಗಿದೆ. ಒಂದು ಕುಟುಂಬದಲ್ಲಿ ಸಹೋದರರೇ ಹೊಡೆದಾಡಿಕೊಳ್ಳುತ್ತಾರೆ. ಹೀಗಿರುವಾಗ, ಒಂದು ಸಮುದಾಯ ಮತ್ತೊಂದು ಸಮುದಾಯದ ವಿರುದ್ಧ ಹೋರಾಡುವುದು ಹೊಸದಲ್ಲ. ಅದರ ಜತೆಗೇ ಅವರು ಪರಸ್ಪರ ಪ್ರೀತಿಸುತ್ತಾರೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ಜಾತಿ, ಧರ್ಮ, ಸಮುದಾಯಗಳ ವಿಚಾರವಾಗಿ ಕೆಲ ಅಡೆತಡೆಗಳು ಬರುತ್ತವೆ. ಅವುಗಳನ್ನು ನಾವು ತೊಡೆದು ಹಾಕಬೇಕಿದೆ. ಸಾಮರಸ್ಯಕ್ಕೆ ಧಕ್ಕೆ ತರುವಂತಹದ್ದಕ್ಕೆ ಮಹತ್ವ ನೀಡಬಾರದು. ಎಲ್ಲ ಧರ್ಮಗಳಲ್ಲೂ ಒಳ್ಳೆಯ ವಿಚಾರಗಳಿರುತ್ತವೆ. ಸಾಮಾಜಿಕ ಸಹಬಾಳ್ವೆ ಅತ್ಯವಶ್ಯಕವಾಗುತ್ತದೆ. ಈ ಕುರಿತು ನಿಮ್ಮ ಕಕ್ಷಿದಾರರಿಗೆ ಸಲಹೆ ನೀಡಬೇಕು ಎಂದು ಮೌಖಿಕವಾಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟೇಶ್ ದಳವಾಯಿ ಅವರು, ನ್ಯಾಯಾಲಯದ ಈ ಅಭಿಪ್ರಾಯಕ್ಕೆ ಸಹಮತವಿದೆ. ಆದರೆ, ಸಹಬಾಳ್ವೆ ಎನ್ನುವುದು ಏಕಮುಖವಾಗಿರಲು ಸಾಧ್ಯವಿಲ್ಲ, ಪ್ರತಿ ಹಂತದಲ್ಲೂ ಅದನ್ನು ನಾವು ನಿರೀಕ್ಷಿಸಬೇಕಾಗುತ್ತದೆ. ಎರಡೂ ಕಡೆಯಿಂದ ಇದೇ ರೀತಿಯ ಆಲೋಚನೆಗಳಿರಬೇಕಾಗುತ್ತದೆ ಎಂದರು.

ಪ್ರಕರಣವೇನು?
ಕೊಪ್ಪಳ ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿ ಗವಿಸಿದ್ದಪ್ಪ ಎನ್ನುವ ಯುವಕ ಅನ್ಯ ಕೋಮಿನ ಯುವಕರಿಂದ ಆಗಸ್ಟ್ 3ರಂದು ಕೊಲೆಯಾಗಿದ್ದರು ಎಂದು ಆರೋಪಿಸಲಾಗಿದ್ದು, ಕೊಲೆಯಾದ ಯುವಕನ ಕುಟುಂಬದವರಿಗೆ ಸ್ವಾಂತನ ಹೇಳಲು ಆಗಸ್ಟ್ 10ರಂದು  ಯತ್ನಾಳ್ ಕೊಪ್ಪಳಕ್ಕೆ ಬಂದಿದ್ದರು. ಈ ವೇಳೆ ಮಾತನಾಡಿದ್ದ ಅವರು, ಹಿಂದು ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷ ರೂ. ಕೊಡುತ್ತೇನೆ. ಕೊಲೆ ಮಾಡುವ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ‌. ಸದ್ಯ ರಾಜ್ಯದಲ್ಲಿ ಸಾಬರ ಸರ್ಕಾರವಿದೆ ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಹಿಂದು ಮತ್ತು ಮುಸ್ಲಿಮರ ನಡುವೆ ದ್ವೇಷ ಹರಡುವಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅಬ್ದುಲ್ ಕಲಾಂ ಮತ್ತಿತರರು ದೂರು ನೀಡಿದ್ದರು. ದೂರು ಆಧರಿಸಿ ಕೊಪ್ಪಳ ಟೌನ್‌ ಠಾಣೆ ಪೊಲೀಸರು ಯತ್ನಾಳ್ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

Related Articles

Comments (0)

Leave a Comment