- ಟ್ರಯಲ್ ಕೋರ್ಟ್
- Like this post: 22
ಧೂಮಪಾನಕ್ಕೆ ಅವಕಾಶವಿದೆ, ಸ್ಥಳಾಂತರ ಬೇಡವೇ? ಎಸ್ಪಿಪಿ ಪ್ರಶ್ನೆ; ದರ್ಶನ್ ಸ್ಥಳಾಂತರ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿದ ಕೋರ್ಟ್
- by Jagan Ramesh
- September 2, 2025
- 143 Views

ಬೆಂಗಳೂರು: ಜೈಲಿನಲ್ಲಿ ಧೂಮಪಾನ ಮಾಡಲು ‘ಕಾರಾಗೃಹ ಕೈಪಿಡಿ’ಯಲ್ಲಿ ಅವಕಾಶವಿದೆ ಎನ್ನುವ ದರ್ಶನ್ ಪರ ವಕೀಲರು, ಅದೇ ಕೈಪಿಡಿಯ ಅನ್ವಯ ದರ್ಶನ್ ಅವರನ್ನು ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸುವುದನ್ನು ನಿರಾಕರಿಸುವುದೇಕೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಪಿ. ಪ್ರಸನ್ನ ಕುಮಾರ್ ಪ್ರಶ್ನಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಹಾಗೂ ಜೈಲಿನಲ್ಲಿ ಹಾಸಿಗೆ-ಹೊದಿಕೆ ಇತರ ಸೌಲಭ್ಯ ಕಲ್ಪಿಸಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಗಳನ್ನು ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಅವರು ಮಂಗಳವಾರ ವಿಚಾರಣೆ ನಡೆಸಿದರು.
ನಟ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು, ಸುಪ್ರೀಂಕೋರ್ಟ್ ಆರೋಪಿಗಳ ಜಾಮೀನು ರದ್ದುಪಡಿಸಿದೆಯೇ ಹೊರತು ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಬೇಕು ಎಂದು ಆದೇಶಿಸಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 272 ಸಾಕ್ಷಿಗಳಿವೆ. ಸುಪ್ರೀಂಕೋರ್ಟ್ ಕೂಡ ತ್ವರಿತ ವಿಚಾರಣೆಗೆ ಸೂಚಿಸಿದೆ. ಹೀಗಿರುವಾಗ, ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ವಿಚಾರಣೆಗೆ ಹಾಜರಾಗುವುದು ಸೂಕ್ತವಲ್ಲ. ಆರೋಪಿಗಳು ತಮ್ಮ ವಕೀಲರ ಜತೆ ಮಾತನಾಡುವ ಅಗತ್ಯವಿರುತ್ತದೆ. ವಿಸಿ ಮೂಲಕ ಅದು ಸಾಧ್ಯವಾಗುವುದಿಲ್ಲ. ಅಲ್ಲದೆ, ಬಳ್ಳಾರಿ ಹಾಗೂ ಬೆಂಗಳೂರಿನ ನಡುವೆ 310 ಕಿ.ಮೀ. ಅಂತರವಿದ್ದು, ಪ್ರತಿ ಬಾರಿ ವಿಚಾರಣೆ ಸಮಯದಲ್ಲಿ ಬಳ್ಳಾರಿಯಿಂದ ಬಂದು ಹೋಗಲು ಸಾಧ್ಯವಿಲ್ಲ. ಆದ್ದರಿಂದ, ದರ್ಶನ್ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಬಾರದು ಎಂದು ಮನವಿ ಮಾಡಿದರು.
ಜೈಲು ಕೈಪಿಡಿಯ ಪ್ರಕಾರ ಜೈಲಿನಲ್ಲಿ ಸಿಗರೇಟ್ ಸೇದುವುದು ಅಪರಾಧವಲ್ಲ. ಆದರೆ, ಅಲ್ಲಿ ಧೂಮಪಾನಕ್ಕೆ ನಿಗದಿಪಡಿಸಿರುವ ನಿರ್ದಿಷ್ಟ ಸ್ಥಳದಲ್ಲಿ (ಸ್ಮೋಕಿಂಗ್ ಜೋನ್) ಮಾತ್ರ ಸಿಗರೇಟ್ ಸೇದಬೇಕು. ಹಿಂದೆ ಹೈಕೋರ್ಟ್ನಲ್ಲಿ ಈ ಬಗ್ಗೆ ಕೇಳಿದ್ದಾಗ ಜೈಲಿನಲ್ಲಿ ಸ್ಮೋಕಿಂಗ್ ಜೋನ್ ಇಲ್ಲ ಎಂಬ ಮಾಹಿತಿ ನೀಡಲಾಗಿತ್ತು. ಜೈಲಿನಲ್ಲಿ ಸಿಗರೇಟ್ ಹಿಡಿದು ಕುಳಿತಿದ್ದ ದರ್ಶನ್ ಫೋಟೋ ಬಯಲಾಗಿದ್ದರಿಂದ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅದೇ ಕಾರಣಕ್ಕೆ ಈ ಬಾರಿಯೂ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಿಗರೇಟ್ ಸೇದಬಹುದು; ಸ್ಥಳಾಂತರ ಬೇಡವೇ?
ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಎಸ್ಪಿಪಿ ಪಿ. ಪ್ರಸನ್ನ ಕುಮಾರ್ ಅವರು, ಧೂಮಪಾನಕ್ಕೆ ಜೈಲು ಕೈಪಿಡಿಯಲ್ಲಿ ಅನುಮತಿ ಇದೆ ಎನ್ನುವುದು ಆರೋಪಿಯ ಪರ ವಕೀಲರ ವಾದವಾಗಿದೆ. ಆದರೆ, ಕೈಪಿಡಿಯ ಅನ್ವಯ ಬೇರೆಡೆಗೆ ಸ್ಥಳಾಂತರ ಮಾಡುತ್ತೇವೆ ಎಂದರೆ ಒಪ್ಪುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಜಾಮೀನು ರದ್ದುಪಡಿಸಿರುವ ಆದೇಶದಲ್ಲಿ ಸುಪ್ರೀಂಕೋರ್ಟ್ ಈ ಹಿಂದೆ ಆರೋಪಿಗಳು ಜೈಲಿನಲ್ಲಿ ತೋರಿರುವ ವರ್ತನೆಗಳನ್ನು ಗಮನಿಸಿದೆ. ಹೀಗಿರುವಾಗ, ಆರೋಪಿಗಳನ್ನು ಸ್ಥಳಾಂತರಿಸಲು ಬೇರೆ ಕಾರಣಗಳ ಅಗತ್ಯವಿಲ್ಲ. ಆಡಳಿತಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಬೇರೆಡೆಗೆ ಸ್ಥಳಾಂತರಿಸಬಹುದು ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಮುಂದುವರಿದು, 70, 80ರ ದಶಕಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ಕೆಲ ತೀರ್ಪುಗಳನ್ನು ದರ್ಶನ್ ಪರ ವಕೀಲರು ಉಲ್ಲೇಖಿಸುತ್ತಿದ್ದಾರೆ. ಆದರೆ, ಅವೆಲ್ಲವೂ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿ ಹೊಂದುವುದಕ್ಕೂ ಹಿಂದಿನ ತೀರ್ಪುಗಳಾಗಿವೆ. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಕೋರ್ಟ್ಗಳು ಹಾಗೂ ಜೈಲುಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯಗಳಿವೆ. ವಿಡಿಯೋ ಕಾನ್ಫರೆನ್ಸ್ಗಾಗಿ ಹೈಕೋರ್ಟ್ ನಿಯಮಗಳನ್ನೇ ರೂಪಿಸಿದೆ. ಕೋರ್ಟ್ಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆ ನಿಯಮಗಳಲ್ಲಿ ಹೇಳಲಾಗಿದೆ. ಆರೋಪಿ ಎಲ್ಲಿದ್ದರೂ ವಿಸಿ ಮೂಲಕ ವಿಚಾರಣೆಗೆ ಹಾಜರುಪಡಿಸಬಹುದಾಗಿದೆ. ಇನ್ನು ವಕೀಲರು ಹಾಗೂ ಕುಟುಂಬದವರ ಜತೆ ಮಾತನಾಡಲು ಇ-ಮುಲಾಕಾತ್ ಎಂಬ ವ್ಯವಸ್ಥೆ ಪರಿಚಯಿಸಲಾಗಿದೆ ಎಂದು ತಿಳಿಸಿದರು.
ಹಾಸಿಗೆ-ಹೊದಿಕೆಗೆ ಮನವಿ:
ಜೈಲಿನಲ್ಲಿ ನಟ ದರ್ಶನ್ ಅವರಿಗೆ ಹಾಸಿಗೆ, ತಲೆದಿಂಬು, ಹೊದಿಕೆ ನೀಡಲು ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಮನವಿ ಮಾಡಿದ ದರ್ಶನ್ ಪರ ವಕೀಲರು, ಕಾನೂನು ಪ್ರಕಾರ ಏನು ಕೊಡಬೇಕೋ ಅದನ್ನು ಕೊಡಲಿ, ವಿಚಾರಣಾಧೀನ ಕೈದಿಗೆ ನೀಡಬಹುದಾದ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವಂತೆ ಕೇಳುತ್ತಿದ್ದೇವೆ. ಯಾವ ಕಾನೂನಿನ ಅಡಿ ಕೊಡಲಾಗುವುದಿಲ್ಲವೆಂದು ಜೈಲು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದರು.
ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿ, ದರ್ಶನ್ ಜೈಲು ಸೇರಿದ ಎರಡು ದಿನದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕರ್ನಾಟಕ ಸಜಾಬಂದಿಗಳ ಕಾಯ್ದೆ ಅಡಿಯಲ್ಲಿ ಕಾರಣ ನೀಡಲಾಗಿದೆ. ಆದರೆ, ಈ ಕಾಯ್ದೆ ಕೋರ್ಟ್ನಿಂದ ಶಿಕ್ಷೆಗೆ ಗುರಿಯಾಗಿರುವವರಿಗೆ (ಅಪರಾಧಿಗಳಿಗೆ) ಅನ್ವಿಸಲಿದೆಯೇ ಹೊರತು ವಿಚಾರಣಾಧೀನ ಕೈದಿಗಳಿಗಲ್ಲ. ಇನ್ನು ಆರೋಪಿಗಳಿಗೆ ತಪಾಸಣೆ ನಡೆಸಿ ಪುಸ್ತಕ, ದಿನಪತ್ರಿಕೆಗಳನ್ನು ಒದಗಿಸಬಹುದು. ಅವರದೇ ಖರ್ಚಿನಲ್ಲಿ ಹಾಸಿಗೆ-ದಿಂಬು ಒದಗಿಸಲು ಅವಕಾಶವಿದೆಯಾದರೂ, ಕೊಲೆ ಆರೋಪಗಳನ್ನು ಎದುರಿಸುತ್ತಿರುವವರಿಗೆ ಈ ಅವಕಾಶವಿಲ್ಲ ಎಂದು ವಿವರಿಸಿದರು.
ಎರಡೂ ಅರ್ಜಿಗಳ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ದಿನದ ಕಲಾಪದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಬುಧವಾರ ಸಂಜೆ 4 ಗಂಟೆಗೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)