- ಟ್ರಯಲ್ ಕೋರ್ಟ್
- Like this post: 26
ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಸೆಷನ್ಸ್ ಕೋರ್ಟ್
- by Jagan Ramesh
- September 2, 2025
- 115 Views

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಮೊದಲ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.
ಪ್ರಕರಣದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಬದಲಾಗಿ ಹಳೆಯ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಅಡಿ ಆರೋಪ ಪಟ್ಟಿ ಪರಿಗಣಿಸಿರುವುದು ಹಾಗೂ ಅದನ್ನು ಆಧರಿಸಿ ಸಂಜ್ಞೇ (ಕಾಗ್ನೈಜೆನ್ಸ್) ಪರಿಗಣಿಸಿರುವುದು ಕಾನೂನುಬಾಹಿರವಾಗಿರುವುದರಿಂದ ಡೀಫಾಲ್ಟ್ ಜಾಮೀನು ಮಂಜೂರು ಮಾಡುವಂತೆ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಧೀಶ ಐ.ಪಿ. ನಾಯ್ಕ್ ಅವರಿದ್ದ ಪೀಠ ಮಂಗಳವಾರ ಪ್ರಕಟಿಸಿತು.
ಪವಿತ್ರಾ ಗೌಡ ವಾದವೇನು?
ಅರ್ಜಿ ವಿಚಾರಣೆ ವೇಳೆ ಪವಿತ್ರಾ ಗೌಡ ಪರ ವಾದ ಮಂಡಿಸಿದ್ದ ವಕೀಲ ಬಾಲನ್, ಪ್ರಕರಣದ ಸಂಬಂಧ ತನಿಖಾಧಿಕಾರಿಗಳು ಬಿಎನ್ಎಸ್ಎಸ್ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಬೇಕಿತ್ತು, ಬಿಎನ್ಎಸ್ಎಸ್ ಅಡಿಯಲ್ಲೇ ವಿಚಾರಣಾ ನ್ಯಾಯಾಲಯ ಪ್ರಕರಣದ ಕಾಗ್ನೈಜೆನ್ಸ್ ತೆಗೆದುಕೊಳ್ಳಬೇಕಿತ್ತು. ಆದರೆ, ಸಿಆರ್ಪಿಸಿ ಅಡಿಯಲ್ಲಿ ಆರೋಪಪಟ್ಟಿ ಹಾಗೂ ನ್ಯಾಯಾಲಯದ ಕಾಗ್ನೈಜೆನ್ಸ್ ತೆಗೆದುಕೊಳ್ಳಲಾಗಿದ್ದು, ಅವು ಕಾನೂನು ಬದ್ಧವಾಗಿರದ ಕಾರಣ ಪವಿತ್ರಾ ಗೌಡ ಜಾಮೀನಿಗೆ ಅರ್ಹರಾಗಿದ್ದಾರೆ. ಸುಪ್ರೀಂಕೋರ್ಟ್ ತೀರ್ಪನ್ನು ನಾವು ಪ್ರಶ್ನಿಸುತ್ತಿಲ್ಲ. ತಾಂತ್ರಿಕ ಲೋಪವಿರುವ ಕಾರಣ, ಡಿಫಾಲ್ಟ್ ಜಾಮೀನಿಗೆ ಪವಿತ್ರಾ ಗೌಡ ಅರ್ಹರಾಗಿದ್ದಾರೆ ಎಂದು ವಾದ ಮಂಡಿಸಿದ್ದರು.
ಜಾಮೀನು ಅರ್ಜಿಗೆ ಎಸ್ಪಿಪಿ ಆಕ್ಷೇಪ:
ಈ ವಾದವನ್ನು ಆಕ್ಷೇಪಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು, 2024ರ ಜುಲೈ 1ರಿಂದ ಬಿಎನ್ಎಸ್ಎಸ್ ಜಾರಿಗೆ ಬಂದಿದೆ. ಆದರೆ, ಅದಕ್ಕೂ ಮೊದಲೇ 2024ರ ಜೂನ್ 6ರಂದು ಎಫ್ಐಆರ್ ದಾಖಲಾಗಿದೆ. ಆದ್ದರಿಂದ, ಬಿಎನ್ಎಸ್ಎಸ್ ಸೆಕ್ಷನ್ 531ರ ಪ್ರಕಾರ ಸಿಆರ್ಪಿಸಿ ಅನುಸಾರವೇ ತನಿಖೆ ಮುಂದುವರಿಸಿ, ದೋಷಾರೋಪ ಪಟ್ಟಿ ಸಲ್ಲಿಸಬೇಕು. ಆರೋಪಿಯೂ ಸಹ ಮೊದಲಿಗೆ ಸಿಆರ್ಪಿಸಿ ಸೆಕ್ಷನ್ 439ರ ಅಡಿಯಲ್ಲೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಜಾಮೀನು ಪಡೆದಿದ್ದರು. ಇದನ್ನು ಪ್ರಶ್ನಿಸಿ ಸೆಕ್ಷನ್ 439(2)ರ ಅಡಿಯಲ್ಲಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಿರುವ ಸುಪ್ರೀಂಕೋರ್ಟ್ ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದೆ. ಹೀಗಿದ್ದರೂ, ಈ ರೀತಿ ಅರ್ಜಿಯ ಮೇಲೆ ಅರ್ಜಿ ಹಾಕುತ್ತಾ ಕಾಲ ಹರಣ ಮಾಡಲಾಗುತ್ತಿದೆ. ಆದ್ದರಿಂದ, ಜಾಮೀನು ಅರ್ಜಿ ವಜಾಗೊಳಿಸಬೇಕೆಂದು ಮನವಿ ಮಾಡಿದ್ದರು.
ಪ್ರಾಸಿಕ್ಯೂಷನ್ ವಾದ ಪುರಸ್ಕರಿಸಿರುವ ನ್ಯಾಯಾಲಯ, ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದೆ.
Related Articles
Thank you for your comment. It is awaiting moderation.
Comments (0)