ನ್ಯಾಯಾಂಗ ನಿಂದನೆ ಆರೋಪ; ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ಗೆ ಹೈಕೋರ್ಟ್ ನೋಟಿಸ್
- by Ramya B T
- September 1, 2025
- 50 Views

ಬೆಂಗಳೂರು: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕನ್ನಡ ಮಠದ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನಗಳ ದೈನಂದಿನ ಕಾರ್ಯನಿರ್ವಹಣೆಗೆ ತಸ್ತೀಕ್ ಪಾವತಿಸುವ ಬಗ್ಗೆ ಹೈಕೋರ್ಟ್ ನೀಡಿದ್ದ ಆದೇಶ ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಸೇರಿ ನಾಲ್ವರು ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ ಬೆಟ್ಟಗೇರಿ ಪೋಸ್ಟ್ ವ್ಯಾಪ್ತಿಯಲ್ಲಿರುವ ‘ಕನ್ನಡ ಮಠ’ ದ ಪೀಠಾಧಿಪತಿ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ವಿ.ರಶ್ಮಿ ಮಹೇಶ್, ಮುಜರಾಯಿ ಇಲಾಖೆ ಆಯುಕ್ತ ಎಂ.ವಿ. ವೆಂಕಟೇಶ್, ಕೊಡಗಿನ ಜಿಲ್ಲಾಧಿಕಾರಿ ವೆಂಕಟರಾಜ ಮತ್ತು ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಎಚ್.ಎನ್. ರಾಮಚಂದ್ರ ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿದೆ.
ಅರ್ಜಿದಾರರ ಆರೋಪವೇನು?
ಕನ್ನಡ ಮಠದ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನಗಳ ದೈನಂದಿನ ಪೂಜಾ ಕೈಂಕರ್ಯಗಳ ನಿರ್ವಹಣೆಗೆ ತಸ್ತೀಕ್ ಮೊತ್ತವನ್ನು ನೀಡುವ ಬಗ್ಗೆ ನಿರ್ದೇಶನ ನೀಡುವಂತೆ ಕೋರಿ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು 2022ರ ಅಕ್ಟೋಬರ್ 7ರಂದು ನೀಡಿರುವ ಮನವಿಯ ಬಗ್ಗೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿವಾದಿಗಳಾದ ಕಂದಾಯ, ಮುಜರಾಯಿ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶಿಸಿತ್ತಲ್ಲದೆ, ಅದಕ್ಕೆ ಸಂಬಂಧಿಸಿದ ವರದಿಯನ್ನು 8 ವಾರಗಳ ಒಳಗಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸಲ್ಲಿಸಬೇಕು ಎಂದು 2023ರ ಸೆಪ್ಟೆಂಬರ್ 25ರಂದು ಆದೇಶಿಸಿತ್ತು.
ಈ ಆದೇಶ ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿರುವ ಅರ್ಜಿದಾರರು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.
Comments (0)